

ಮುದ್ದೇಬಿಹಾಳ: ಕೆಲ ಗ್ರಾಮ ಪಂಚಾಯಿತಿಗಳ ಪಿಡಿಒಗಳು ಮೂಲ ಕರ್ತವ್ಯ ಮರೆತಿದ್ದು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಬಂದರೆ ಆತ ಎಲ್ಲವನ್ನೂ ಮರೆತು ನಿಮ್ಮ ಬೆಂಡೆತ್ತಲು ಸಿದ್ಧನಾಗುತ್ತಾನೆ. ಪಿಡಿಒಗಳು ಸುಧಾರಣೆಯಾಗದಿದ್ದರೆ, ಜನರಿಗೆ ಸರಿಯಾದ ಸೇವೆ ನೀಡಲು ವಿಲರಾದರೆ ಶಿಸ್ತು ಕ್ರಮಕ್ಕೆ ಜಿ.ಪಂ. ಸಿಇಒಗೆ ಶಿಾರಸು ಮಾಡಬೇಕಾಗುತ್ತದೆ ಎಂದು ಶಾಸಕ ಅಪ್ಪಾಜಿ ಸಿ.ಎಸ್. ನಾಡಗೌಡ ಎಚ್ಚರಿಸಿದರು.
ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಮಂಗಳವಾರ ನಡೆದ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮುದ್ದೇಬಿಹಾಳ, ತಾಳಿಕೋಟೆ, ನಿಡಗುಂದಿ ತಾಲೂಕು ಗ್ರಾಪಂಗಳ ಕುಡಿಯುವ ನೀರಿನ ಕುರಿತಾದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಿಡಿಒಗಳು ಕುಡಿಯುವ ನೀರು, ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ನೀರಿನ ಸಮಸ್ಯೆ ತುರ್ತು ಪರಿಹಾರಕ್ಕೆ ಪ್ರತಿ ಗ್ರಾಪಂನಲ್ಲಿ ಸಹಾಯವಾಣಿ ಪ್ರಾರಂಭಿಸಬೇಕು. ಮುಂಬರುವ ದಿನಗಳಲ್ಲಿ ಉಂಟಾಗಬಹುದಾದ ಸಮಸ್ಯೆಗಳನ್ನು ಬಗೆಹರಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಕುಡಿಯುವ ನೀರಿನ ಮೂಲಗಳು, ಕೊಳವೆ ಬಾವಿ, ತೆರೆದ ಬಾವಿ ನೀರಿನ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳಿಸಿ ತಪಾಸಣೆಗೊಳಪಡಿಸಬೇಕು ಎಂದರು.
ಬೇಸಿಗೆ ಉಲ್ಬಣಗೊಳ್ಳತೊಡಗಿದ್ದು, ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆ. ಎಲ್ಲ ಕಡೆ ಟಿಸಿಎಲ್ ಪೌಡರ್ ಸಿಂಪಡಿಸಬೇಕು. ಜನರಿಂದ ಸಮಸ್ಯೆ ಇದೆ ಎನ್ನುವ ದೂರು ಬರದಂತೆ ನೋಡಿಕೊಳ್ಳಬೇಕು. ಅವಶ್ಯಕತೆ ಇದ್ದರೆ ಮಾತ್ರ ತಹಸೀಲ್ದಾರ್ ಅವರ ಗಮನಕ್ಕೆ ತಂದು ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಎಂದು ತಿಳಿಸಿದರು.
ಹಿರೇಮುರಾಳ ಹೊಸಪ್ಲಾಟ್, ಜಂಗಮುರಾಳ ಗ್ರಾಮಗಳಲ್ಲಿ ಸ್ವಲ್ಪ ಮಟ್ಟಿಗೆ ಕುಡಿಯುವ ನೀರಿನ ಸಮಸ್ಯೆ ಇರುವುದನ್ನು ಪಿಡಿಓ ಕಲ್ಮೇಶ ಕುಂಬಾರ ಅವರು ಶಾಸಕರ ಗಮನಕ್ಕೆ ತಂದು ಬಹುಹಳ್ಳಿ ಯೋಜನೆ ಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಸಮಸ್ಯೆ ಇಲ್ಲವಾಗುತ್ತದೆ ಎಂದಾಗ ಸ್ಪಂಧಿಸಿದ ಶಾಸಕರು ಅಲ್ಲಿ ಬಹುಹಳ್ಳಿ ಕುಡಿವ ನೀರಿನ ಸೌಲಭ್ಯ ಕಲ್ಪಿಸಿಲ್ಲವೇ ಎಂದು ಪ್ರಶ್ನಿಸಿದರು.
ಸೌಲಭ್ಯ ಇದ್ದರೂ ಮಾರ್ಗಮಧ್ಯೆ ಎಲ್ಲಾದರೂ ಪೈಪ್ ಒಡೆದಲ್ಲಿ ವಾರಗಟ್ಟಲೆ ಸಮಸ್ಯೆ ಆಗುತ್ತದೆ ಎಂದು ಪಿಡಿಒ ತಿಳಿಸಿದರು. ಇದನ್ನು ಸರಿಪಡಿಸುವಂತೆ ಆರ್‌ಡಬ್ಲುಎಸ್ ಎಇಇ ಆರ್.ಎಸ್. ಹಿರೇಗೌಡರ ಅವರಿಗೆ ಶಾಸಕರು ಸೂಚಿಸಿದರು.
ಮತಕ್ಷೇತ್ರದಲ್ಲಿ ಜೆಜೆಎಂ ಕಾಮಗಾರಿಗಾಗಿ 88 ಕೋಟಿ ಅನುದಾನ ಇದ್ದು ಇದುವರೆಗೆ 107 ಕಾಮಗಾರಿ ಪೂರ್ಣಗೊಳಿಸಿ ಪಂಚಾಯಿತಿಗಳಿಗೆ ಹಸ್ತಾಂತರಿಸಿ 46.66 ಕೋಟಿ ರೂ. ಬಿಲ್ ಮಂಜೂರು ಮಾಡಿಸಿಕೊಳ್ಳಲಾಗಿದೆ. ಹೀಗಿದ್ದರೂ ಕುಂಟೋಜಿ, ತಂಗಡಗಿ, ಅಬ್ಯಾಳ ಸೇರಿ ಶೇ. 70 ಗ್ರಾಮಗಳಿಗೆ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ಈ ಬಗ್ಗೆ ಪರಿಶೀಲಿಸುವ ಜವಾಬ್ದಾರಿ ಪಿಡಿಒಗಳದ್ದಾಗಿದೆ ಎಂದರು.
ವಿಜಯಪುರ ಆರ್‌ಡಬ್ಲುಎಸ್ ವಿಭಾಗದ ಇಇ ಬಸವರಾಜ ಕುಂಬಾರ, ತಹಸೀಲ್ದಾರ್‌ರಾದ ಬಲರಾಮ ಕಟ್ಟಿಮನಿ, ಎ.ಡಿ. ಅಮರಾವದಗಿ, ಡಾ. ವಿನಯಾ ಪಾಟೀಲ, ಇಒಗಳಾದ ಎನ್.ಎಸ್. ಮಸಳಿ, ವೆಂಕಟೇಶ ವಂದಾಲ, ಪುರಸಭೆ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಬಿರಾದಾರ, ಆರ್‌ಡಬ್ಲುಎಸ್‌ನ ಎಇಇ ಆರ್.ಎಸ್. ಹಿರೇಗೌಡರ ಇದ್ದರು.
ಗುತ್ತಿಗೆದಾರ ಬಿ.ಎಸ್. ಪಾಟೀಲ ಎಂಬಾತ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಯಾರ ಕೈಗೂ ಸಿಗದೆ ತಲೆಮರೆಸಿಕೊಂಡು ತಿರುಗಾಡುತ್ತಾನೆ. ಇನ್ನೋರ್ವ ಪಾಟೀಲ ಗುತ್ತಿಗೆದಾರನದ್ದೂ ಇದೇ ಸ್ಥಿತಿ. ಇವರ ಕಾಮಗಾರಿಗಳ ಸ್ಥಿತಿಗತಿಯ ವರದಿ ಕೊಟ್ಟಲ್ಲಿ ಸರ್ಕಾರದಿಂದ ತನಿಖಾ ತಂಡ ಕರೆಸಿ ತನಿಖೆ ಮಾಡಿಸುತ್ತೇನೆ. ಅಪ್ಪಾಜಿ ಸಿ.ಎಸ್. ನಾಡಗೌಡ, ಶಾಸಕರು, ಮುದ್ದೇಬಿಹಾಳ
ಕೃಷ್ಣಾ ನದಿದಂಡೆಯ ಪುನರ್ವಸತಿ ಗ್ರಾಮಗಳು ಪಂಚಾಯಿತಿಗೆ ಹಸ್ತಾಂತರಗೊಂಡಿರುವ ಮೂಲ ದಾಖಲೆಗಳನ್ನು ನಾರಾಯಣಪುರ ಕೆಬಿಜೆಎನ್ನೆಲ್ ಪುನರ್ವಸತಿ, ಪುನರ್ನಿರ್ಮಾಣ ಕಚೇರಿಗೆ ಹೋಗಿ ಪಡೆದುಕೊಂಡು ಪಂಚಾಯಿತಿಯಲ್ಲಿ ಇಟ್ಟುಕೊಳ್ಳಬೇಕು. ಈ ಕೇಂದ್ರಗಳಲ್ಲಿ ಸರ್ಕಾರ, ಪಂಚಾಯಿತಿ ಸುಪರ್ಧಿಯಲ್ಲಿರಬೇಕಾದ ಆಸ್ತಿಗಳೆಲ್ಲ ಅತಿಕ್ರಮಣಗೊಂಡಿವೆ. ಪಂಚಾಯಿತಿಯ 9 ನಂಬರ್ ರಿಜಿಸ್ಟರ್‌ನಲ್ಲಿ ದಾಖಲು ಮಾಡಿ ಸರ್ಕಾರದ ಆಸ್ತಿ ಎತ್ತಿ ಹಾಕಲಾಗಿದೆ. ಇನ್ನು ಮುಂದೆ ಯಾವುದೇ ಮುಲಾಜಿಲ್ಲದೆ ಬೇಕಾಯ್ದೇಶಿರ ಅತಿಕ್ರಮಣ ತೆರವುಗೊಳಿಸಲು ತಹಸೀಲ್ದಾರ್, ಪೊಲೀಸ್ ಬಲ ಬಳಸಿಕೊಂಡು ಕ್ರಮ ಜರುಗಿಸಬೇಕು ಎಂದು ಪಿಡಿಓಗಳಿಗೆ ಸೂಚಿಸಿದ ಶಾಸಕರು ಇವರಿಗೆ ಸಹಕರಿಸುವಂತೆ ತಹಸೀಲ್ದಾರ್‌ಗಳಿಗೆ ನಿರ್ದೇಶನ ನೀಡಿದರು.