ಜನಸ್ನೇಹಿ ಪೊಲೀಸಿಂಗ್‌ಗೆ ಜಿಲ್ಲಾ ಖಾಕಿ ಮುಂದಡಿ

ಜನಸ್ನೇಹಿ ಪೊಲೀಸಿಂಗ್‌
sp mallikarjun baladandi
Published on

8 ತಿಂಗಳ ಅವಧಿಯಲ್ಲಿ 356 ಮಂದಿ ರೌಡಿಪಟ್ಟಿಗೆ ಮುಕ್ತಿ

ವಾರದಲ್ಲಿ 300 ಮಂದಿ ಕಳಂಕರಹಿತ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿ 1,756 ಮಂದಿ ವಿರುದ್ಧ ರೌಡಿಶೀಟರ್‌ಗಳಿದ್ದು, ಕಳೆದ 8 ತಿಂಗಳ ಅವಧಿಯಲ್ಲಿ 356 ಮಂದಿಗೆ ರೌಡಿಪಟ್ಟಿಯಿಂದ ಮುಕ್ತಿ ನೀಡಲಾಗಿದೆ. ಇನ್ನೊಂದು ವಾರದಲ್ಲಿ 300 ಮಂದಿಗೆ ಮುಕ್ತಿ ಸಿಗಲಿದ್ದು, ಜನಸ್ನೇಹಿ ಪೋಲೀಸಿಂಗ್ ಸುಧಾರಣೆಗೆ ಜಿಲ್ಲಾ ಪೊಲೀಸರು ಮುಂದಡಿ ಇಟ್ಟಿದ್ದಾರೆ.
ರೌಡಿಸಂ, ಗೂಂಡಾಗಿರಿ, ಸಾರ್ವಜನಿಕರ ಮೇಲೆ ದೌರ್ಜನ್ಯದಂಥ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಜತೆಜತೆಗೆ ಅಪರಾಧ ಜಗತ್ತಿನಿಂದ ದೂರವಿದ್ದರೂ ರೌಡಿಪಟ್ಟಿಯೆಂಬ ಹಣೆಪಟ್ಟಿ ಕಟ್ಟಿಕೊಂಡು ಸಮಾಜದ ಕೆಂಗಣ್ಣಿಗೆ ಗುರಿಯಾಗಿರುವ ವ್ಯಕ್ತಿಗಳಿಗೆ ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸರು ಮಹತ್ವದ ಹೆಜ್ಜೆ ಇರಿಸಿದ್ದಾರೆ.

10 ವರ್ಷ ಮಾನದಂಡ
ರೌಡಿಪಟ್ಟಿಯಿಂದ ಹೆಸರು ಕೈಬಿಡುವುದು ಸುಲಭದ ಮಾತಲ್ಲ. ಇದಕ್ಕೆ ಇಲಾಖೆಯ ಕೆಲವೊಂದು ಮಹತ್ತರ ಮಾನದಂಡ ಪಾಲಿಸಬೇಕಿದೆ. ಪ್ರಮುಖವಾಗಿ ರೌಡಿಪಟ್ಟಿಯಲ್ಲಿರುವ ವ್ಯಕ್ತಿ ವಿರುದ್ಧ ಕನಿಷ್ಠ 10 ವರ್ಷ ಮತ್ತೆ ಯಾವುದೇ ಅಪರಾಧ ಪ್ರಕರಣ ದಾಖಲಾಗಿರಬಾರದು. ಅಪರಾಧ ಜಗತ್ತಿನಿಂದ ಸಂಪೂರ್ಣ ದೂರ ಉಳಿದಿರಬೇಕು. ತಲೆಮರೆಸಿಕೊಳ್ಳದೆ ಪೊಲೀಸರ ಕಣ್ಗಾವಲಿನಲ್ಲಿ ಉತ್ತಮ ನಾಗರಿಕನಾಗಿ ಬದುಕು ನಡೆಸುತ್ತಿರಬೇಕು. ಇಷ್ಟು ವರ್ಷದ ಅವಧಿಯಲ್ಲಿ ಮತ್ತೆ ಎಲ್ಲಿಯೂ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಂಡಿಲ್ಲ ಎಂಬುದು ಪೊಲೀಸರಿಗೆ ಮನವರಿಕೆಯಾದರಷ್ಟೇ ರೌಡಿಪಟ್ಟಿಯಿಂದ ಬಿಡುಗಡೆ ಭಾಗ್ಯ ದೊರೆಯಲಿದೆ.

ವಯಸ್ಸಾದವರು, ಅಂಗವಿಕಲರು:
ಕಳೆದ 10 ವರ್ಷಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ರೌಡಿ ಚಟುವಟಿಕೆ ಭಾಗಶಃ ತಹಬಂದಿಗೆ ಬಂದಿದೆ, ಗುಂಪು ಗಲಾಟೆ, ಜಮೀನು ವ್ಯಾಜ್ಯ, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹತ್ಯೆ ಸೇರಿ ಕೆಲವೊಂದು ಪ್ರಕರಣಗಳಲ್ಲಿ ರೌಡಿಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ವ್ಯಕ್ತಿಗಳಲ್ಲಿ ಅನೇಕರಿಗೆ ಈಗಾಗಲೇ ತೀರ ವಯಸ್ಸಾಗಿದೆ. ಹಲವರು ಅಂಗವಿಕಲತೆಯಿಂದ ಜೀವನ ನಡೆಸುವುದೇ ದುಸ್ತರ ಎಂಬ ಪರಿಸ್ಥಿತಿಯಲ್ಲಿದ್ದಾರೆ. ಇಂಥವರ ಬಗ್ಗೆ ಮಾನವೀಯತೆ ತೋರಿಸಿರುವ ಜಿಲ್ಲಾ ಪೊಲೀಸರು ಇಂಥವರ ಹೆಸರನ್ನು ರೌಡಿಪಟ್ಟಿಯಿಂದ ಕೈಬಿಟ್ಟಿದ್ದಾರೆ.

300 ಮಂದಿಗೆ ಮುಕ್ತಿ?
ಪ್ರಸಕ್ತ ಸಾಲಿನಲ್ಲಿ 300 ಮಂದಿಯನ್ನು ರೌಡಿಪಟ್ಟಿಯಿಂದ ಬಿಡುಗಡೆ ಮಾಡಲು ಜಿಲ್ಲಾ ಪೊಲೀಸರು ಪಟ್ಟಿ ಸಿದ್ಧಪಡಿಸಿದ್ದು, ಪ್ರಕ್ರಿಯೆ ಹಂತದಲ್ಲಿದೆ. ಇಲಾಖೆಯ ಮಾನದಂಡದನ್ವಯ ಸರ್ಕಾರದ ಸೂಚನೆಯಂತೆ ರೌಡಿಶೀಟರ್‌ಗಳನ್ನು ಪಟ್ಟಿಯಿಂದ ಕೈಬಿಡುವ ಬಗ್ಗೆ ಉನ್ನತಮಟ್ಟದ ಅಧಿಕಾರಿಗಳ ಸಭೆ ನಡೆದಿದ್ದು, ಇನ್ನೊಂದು ವಾರದಲ್ಲಿ ಪಟ್ಟಿ ಬಿಡುಗಡೆಯಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದೊಡ್ಡಪಟ್ಟಿಯಾದರೆ ನಿಗಾ ವಹಿಸುವುದು ಕಷ್ಟಸಾಧ್ಯ
ಸಾವಿರಾರು ಸಂಖ್ಯೆಯಲ್ಲಿ ರೌಡಿಪಟ್ಟಿಯಲ್ಲಿರುವವರ ಮೇಲೆ ಪೊಲೀಸರು ಹದ್ದಿನ ಕಣ್ಣು ಇಡುವುದು ಕಷ್ಟಸಾಧ್ಯ. ಎಲ್ಲರ ಚಲನವಲನಗಳ ಮೇಲೆ ನಿಗಾ ವಹಿಸುವುದು ಇರುವ ಪೊಲೀಸ್ ಸಿಬ್ಬಂದಿಗೆ ಸುಲಭದ ಮಾತಲ್ಲ. ಈ ಹಿನ್ನೆಲೆಯಲ್ಲಿ ಆಗಾಗ ರೌಡಿಪರೇಡ್ ನಡೆಸುವ ಪೊಲೀಸರು ಎಚ್ಚರಿಕೆ ಕೊಟ್ಟು ಮುಚ್ಚಳಿಕೆೆ ಬರೆಸಿಕೊಂಡು ಕಳುಹಿಸಿಕೊಡುತ್ತಿರುತ್ತಾರೆ. ಇಂಥ ಪರೇಡ್‌ಗಳಲ್ಲೇ ಸಾಕಷ್ಟು ಮಂದಿಯ ಒಳ್ಳೆತನ ಪೊಲೀಸರಿಗೆ ಮನದಟ್ಟಾಗಿರುತ್ತದೆ. ಇಂಥವರ ಚಲನವಲಗಳನ್ನು ಸಂಪೂರ್ಣ ಪರಿಶೀಲಿಸಿದ ಬಳಿಕ ಪಟ್ಟಿಯಿಂದ ಬಿಡುಗಡೆ ಭಾಗ್ಯ ದೊರೆಯಲಿದೆ.

ಜಿಲ್ಲೆಯಲ್ಲಿ ಜನಸ್ನೇಹಿ ಪೊಲೀಸಿಂಗ್‌ನ್ನು ಮತ್ತಷ್ಟು ಸರಳಗೊಳಿಸುವ ನಿಟ್ಟಿನಲ್ಲಿ ರೌಡಿಪಟ್ಟಿಯಿಂದ ಹೆಸರು ಕೈಬಿಡುವ ಪ್ರಕ್ರಿಯೆ ನಡೆಯುತ್ತಿದೆ. ರೌಡಿಪಟ್ಟಿಯಲ್ಲಿರುವವರ ಜೀವನ ಶೈಲಿ ಆಧರಿಸಿ ಅವರು ಅಪರಾಧ ಜಗತ್ತಿನಿಂದ ಅಂತರ ಕಾಯ್ದುಕೊಂಡಿರುವುದರ ಬಗ್ಗೆ ಇಲಾಖೆ ಸಂಪೂರ್ಣ ನಂಬಿಕೆ ಬಂದ ಬಳಿಕ ಅಂಥವರಿಗೆ ಪಟ್ಟಿಯಿಂದ ಮುಕ್ತಿ ಸಿಗಲಿದೆ. ಪ್ರಸ್ತುತ 300ಕ್ಕೂ ಹೆಚ್ಚು ಮಂದಿಯ ಪಟ್ಟಿ ಸಿದ್ಧವಿದ್ದು, ಇಲಾಖೆಯಿಂದ ಸಂಪೂರ್ಣ ಪರಿಶೀಲನೆ ಬಳಿಕ ಬಿಡುಗಡೆಯ ಪಟ್ಟಿ ಪ್ರಕಟಿಸಲಾಗುವುದು

ಮಲ್ಲಿಕಾರ್ಜುಲ ಬಾಲದಂಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ರೌಡಿಪಟ್ಟಿಯಿಂದ ಬಿಡುಗಡೆಯಾದ ಬಳಿಕ ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಮುಂದುವರಿಯಬೇಕು. ಮತ್ತೆ ಅಪರಾಧ ಜಗತ್ತಿನೊಂದಿಗೆ ನಂಟು ಬೆಳೆಸಿಕೊಂಡ ಬಗ್ಗೆ ಮಾಹಿತಿ ಬಂದರೆ ಮುಲಾಜಿಲ್ಲದೆ ಮತ್ತೆ ರೌಡಿಪಟ್ಟಿ ತೆರೆಯಲಾಗುವುದು. ಅಲ್ಲದೆ ಜಿಲ್ಲೆಯಿಂದಲೇ ಗಡಿಪಾರು ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ಸಂಪೂರ್ಣ ತ್ಯಜಿಸಿ ಉತ್ತಮ ನಾಗರಿಕರಾಗಿ ಜೀವನ ನಡೆಸಬೇಕು.
ರವಿ, ಡಿವೈಎಸ್‌ಪಿ ದೊಡ್ಡಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net