

ಚಿಕ್ಕಬಳ್ಳಾಪುರ: ಪೊಲೀಸ್ ಇಲಾಖೆಗೆ ಸಲ್ಲಿಕೆಯಾದ ಪ್ರತಿಯೊಂದು ದೂರನ್ನು ನಿಯಮಾನುಸಾರ ತ್ವರಿತವಾಗಿ ಬಗೆಹರಿಸಲು ಆದ್ಯತೆ ನೀಡಲಾಗುತ್ತದೆ ಎಂದು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಇಲಾಖೆಯ ಕಚೇರಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು, ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವ ಮತ್ತು ಇಲಾಖೆಯಲ್ಲಿ ಸುಧಾರಣಾತ್ಮಕ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಯುವತಿಯರ ನಾಪತ್ತೆ, ಸೈಬರ್ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಶಾಲಾ ಕಾಲೇಜುಗಳಲ್ಲಿ ಜಾಗೃತಿ ಸಭೆಗಳು, ಹಾಗೆಯೇ ಠಾಣೆಯಲ್ಲಿ ಬಾಕಿ ಉಳಿದಿರುವ ಪ್ರಕರಣಗಳು ತ್ವರಿತವಾಗಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಎಲ್ಲ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ, ಕಾರ್ಯ ವೈಖರಿಯನ್ನು ಪರಿಶೀಲಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮುಂದಾಗಿದ್ದಾರೆ. ಠಾಣೆಗೆ ತೆರಳುವುದರ ಜತೆಗೆ ಸಂಬಂಧಪಟ್ಟ ಪ್ರದೇಶದ ವ್ಯಾಪ್ತಿಯಲ್ಲಿನ ಸಾರ್ವಜನಿಕರಿಂದ ಅಭಿಪ್ರಾಯವನ್ನು ಸಂಗ್ರಹಿಸಲಾಗುವುದು. ಒಂದು ವೇಳೆ ಲೋಪ ದೋಷಗಳು ಕಂಡು ಬಂದಲ್ಲಿ ತಕ್ಷಣ ಬಗೆಹರಿಸಲಾಗುವುದು. ಹಲವು ವರ್ಷಗಳಿಂದಲೂ ಇಲ್ಲಿಯೇ ಠಿಕಾಣಿ ಹೂಡಿ, ಕೆಲಸ ನಿರ್ವಹಣೆಯಲ್ಲಿ ಅಸಡ್ಡೆ ಧೋರಣೆ ತೋರುವವರ ವಿರುದ್ಧ ನಿರ್ದಾಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
*ಎಎಸ್ಪಿಯಾಗಿ ನಿರ್ವಹಣೆಯ ಅನುಕೂಲ
ಹಿಂದೆ ಜಿಲ್ಲೆಯಲ್ಲಿ (2021 ನೇ ಅಕ್ಟೋಬರ್ನಿಂದ 2023 ನೇ ಸೆಪ್ಟೆಂಬರ್ ) ಎಎಸ್ಪಿಯಾಗಿ ಎರಡು ವರ್ಷ ಕುಶಾಲ ಚೌಕ್ಸೆ ಕೆಲಸ ನಿರ್ವಹಿಸಿದ್ದಾರೆ. ಇದರಿಂದ ಈ ಭಾಗದಲ್ಲಿನ ಆಗುಹೋಗುಗಳ ಬಗ್ಗೆ ಅರಿವಿದೆ.
ಚಿಂತಾಮಣಿ ಉಪ ವಿಭಾಗದಲ್ಲಿ ಅಕ್ರಮವಾಗಿ ಮಟ್ಕಾ ದಂಧೆ, ಗಾಂಜಾ, ಅಕ್ರಮ ಮದ್ಯ ಮಾರಾಟ ಸೇರಿದಂತೆ ಹಲವು ಪ್ರಕರಣಗಳನ್ನು ಪತ್ತೆ ಹಚ್ಚಿದ್ದು ಈ ಹಿಂದೆ 1.5 ಕೋಟಿ ರೂ ಮೌಲ್ಯದ ನಕಲಿ ನೋಟುಗಳನ್ನು ಸಹ ವಶಪಡಿಸಿಕೊಳ್ಳಲಾಗಿತ್ತು. ಅಟ್ರಾಸಿಟಿ ಪ್ರಕರಣ ದಾಖಲು, ಶೋಷಿತ ವರ್ಗದ ಮೇಲಿನ ದೌರ್ಜನ್ಯ ದೂರುಗಳು, ರಕ್ಷಣಾತ್ಮಕ ಕೆಲಸಗಳ ನಿರ್ವಹಣೆಯ ಅನುಭವ ಇದೆ.
*ಜನರ ಸಹಕಾರ ಅಗತ್ಯ
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದರ ಜತೆಗೆ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಅಗತ್ಯ ಸಹಕಾರ ನೀಡಬೇಕು ಎಂದು ನೂತನ ಎಸ್ಪಿ ಮನವಿ ಮಾಡಿದ್ದಾರೆ. ಸುತ್ತಲಿನ ಪ್ರದೇಶಗಳಲ್ಲಿ ಅರಿವಿಗೆ ಬರುವ ಅಪರಾಧ ಪ್ರಕರಣಗಳ ಬಗ್ಗೆ ಮಾಹಿತಿ ನೀಡಬೇಕು. ಇಲಾಖೆಯ ಸ್ಪಂದನೆ ವೈಖರಿಯನ್ನು ತಿಳಿಸಬಹುದು. ಇಂತಹ ಸಂದರ್ಭದಲ್ಲಿ ದೂರುದಾರರ ಹೆಸರನ್ನು ಗೌಪ್ಯವಾಗಿಡಲಾಗುವುದು.
ಕುಶಾಲ್ ಚೌಕ್ಸೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ