ಲಾಕ್‌ಡೌನ್‌ಗೆ ಕ್ಯಾರೆ ಇಲ್ಲ !

dont care
Published on

ಉಡುಪಿ: ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ಕೈ ಮುಗಿದು ಬೇಡಿದರೂ ಪ್ರಯೋಜನ ಇಲ್ಲದಂತಾಗಿದೆ. ಕೆಲವರು ಸುಖಾಸುಮ್ಮನೆ ಪೇಟೆಯಲ್ಲಿ ಓಡಾಡುವುದು, ಕ್ರಿಕೆಟ್ ಆಡುವುದು ಮಾಡುತ್ತಿದ್ದಾರೆ. ಇದರಿಂದ ಅಗತ್ಯ ವಸ್ತು ಖರೀದಿಗೆ ಧಾವಿಸುವ ಜನರಿಗೂ ತೊಂದರೆಯಾಗಿ ಪರಿಣಮಿಸಿದೆ. ಜಿಲ್ಲಾಡಳಿತ, ಪೊಲೀಸ್ ವ್ಯವಸ್ಥೆ ಪರಿಸ್ಥಿತಿ ನಿಭಾಯಿಸಲು ಹರಸಾಹಸ ಪಡುತ್ತಿದ್ದಾರೆ.

ಬುಧವಾರ ಮತ್ತು ಗುರುವಾರ ನಗರದಲ್ಲಿ ಕೆಲವೆಡೆ ಎಂದಿನಂತೆ ವಾಹನಗಳ ಓಡಾಟ, ಜನ ಸಂಚಾರ ಇತ್ತು. ದಿನಸಿ, ತರಕಾರಿ ಅಂಗಡಿಗಳಲ್ಲಿ ಅಂತರ ಕಾಯ್ದುಕೊಂಡು ಖರೀದಿಸುವಂತೆ ಎಷ್ಟೇ ತಿಳಿ ಹೇಳುತ್ತಿದ್ದರೂ ಮುಗಿ ಬಿದ್ದು ಖರೀದಿಸುವ ದೃಶ್ಯಗಳು ಕಂಡು ಬಂತು. ಬುಧವಾರ ಮಧ್ಯಾಹ್ನ ಬಳಿಕ ಪೊಲೀಸ್, ಸ್ಥಳೀಯಾಡಳಿತ ತಂಡ ಅಂಗಡಿಗಳಿಗೆ ತೆರಳಿ ಪರಿಸ್ಥಿತಿ ನಿಭಾಯಿಸಿದರು. 6 ಮೀಟರ್ ಅಂತರ ಕಾಯ್ದುಕೊಂಡು ವಹಿವಾಟು ನಡೆಸಬೇಕು. ಇಲ್ಲದಿದ್ದರೆ ಅಂಗಡಿ ಮುಚ್ಚಿ ಬಿಡಿ ಎಂದು ಗದರಿದರು. ನಿಭಾಯಿಸಲು ಸಾಧ್ಯವಾಗದ ಬಹುತೇಕ ಅಂಗಡಿಯವರು ಕಿರಿಕಿರಿಯೇ ಬೇಡ ಎಂದು ಅಂಗಡಿಯನ್ನೇ ಬಂದ್ ಮಾಡಿದ್ದಾರೆ.

ಎಂಜಿಎಂ ಮೈದಾನದಲ್ಲಿ ಬುಧವಾರ ಕೆಲವು ಯುವಕರು ಗುಂಪು ಸೇರಿ ಕ್ರಿಕೆಟ್ ಆಡುತ್ತಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಪೊಲೀಸರು, ಸ್ಥಳೀಯಾಡಳಿತ ಸಿಬ್ಬಂದಿ ಧಾವಿಸಿ ಚದುರಿಸಿದಾಗ ಎಲ್ಲ ಯುವಕರು ಮೈದಾನ ಖಾಲಿ ಮಾಡಿದರು.

ಗುರುವಾರ ಮೆಡಿಕಲ್ ಶಾಪ್, ರಾಷ್ಟ್ರೀಕೃತ ಬ್ಯಾಂಕ್, ಸಿಟಿ ಸೆಂಟರ್ ರಿಲಯನ್ಸ್ ಮಾರ್ಟ್, ತರಕಾರಿ ಅಂಗಡಿಗಳಲ್ಲಿ ಸರತಿ ಸಾಲು ಕಂಡು ಬಂತು. ಪ್ರತಿಯೊಬ್ಬರೂ ಅಂತರ ಕಾಯ್ದುಕೊಂಡು ಸರತಿಯಲ್ಲಿ ನಿಂತಿದ್ದರು. ಆದಿ ಉಡುಪಿ ಮೀನು ಮಾರುಕಟ್ಟೆಗೆ ಧಾವಿಸಿದ ನಗರಸಭೆ ಕಮಿಷನರ್ ತಂಡ ಗ್ರಾಹಕರನ್ನು ಗುಂಪು ಸೇರಿದಂತೆ ಸೂಚನೆ ನೀಡಿ, ನಗರಸಭೆ ವತಿಯಿಂದ ಎಲ್ಲ ಮಳಿಗೆಗಳ ಮುಂದೆ ಅಂತರ ಬಿಟ್ಟು ನಿಲ್ಲಲು ಚಿಹ್ನೆ ಹಾಕಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net