

ತುಮಕೂರು: ಹೆಬ್ಬೂರು ಸುತ್ತಮುತ್ತಲ ಭಾಗದಲ್ಲಿ ನರಭಕ್ಷಕ ಚಿರತೆ ಸ್ಥಳೀಯರ ನೆಮ್ಮದಿ ಕೆಡಿಸಿದೆ. ಗುಬ್ಬಿ ತಾಲೂಕು ಮಣಕುಪ್ಪೆಯಲ್ಲಿ ಗುರುವಾರ ಸಂಜೆ ಬಾಲಕನ್ನು ಕೊಂದ ನಂತರ ಜನಾಕ್ರೋಶ ಸ್ಫೋಟಗೊಂಡಿದೆ.
ಗುರುವಾರ ರಾತ್ರಿ ಹೆಬ್ಬೂರು ವೃತ್ತದಲ್ಲಿ ಸಾವಿರಾರು ಜನ ಸಮಾವೇಶಗೊಂಡು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದು ವಿವಾದವಾಗಿದೆ. ಶುಕ್ರವಾರ ಜಿಲ್ಲಾ ಅರಣ್ಯಾಧಿಕಾರಿಗಳ ಕಚೇರಿ ಮುಂದೆ ಶಾಸಕ ಡಿ.ಸಿ.ಗೌರಿಶಂಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ನೂರಾರು ನಾಗರಿಕರು ಕೂಡಲೇ ಚಿರತೆ ಸೆರೆಹಿಡಿಯಬೇಕು ಎಂದು ಡಿಎಫ್‌ಒ ಗಿರೀಶ್‌ಗೆ ಆಗ್ರಹಿಸಿದರು.
ಡಿ.ಸಿ.ಗೌರಿಶಂಕರ್ ಮಾತನಾಡಿ, ಜನರ ಮೇಲೆ ಚಿರತೆ ದಾಳಿ ನಡೆಸುತ್ತಿದ್ದರೂ ಕ್ರಮಕೈಗೊಳ್ಳಲು ಅರಣ್ಯ ಇಲಾಖೆಗೆ ಸಾಧ್ಯವಾಗಿಲ್ಲ. ಪ್ರಾಣಿ ಹಾಗೂ ಮನುಷ್ಯರನ್ನು ರಕ್ಷಿಸಲು ಅರಣ್ಯ ಇಲಾಖೆ ಏನು ಕ್ರಮಕೈಗೊಂಡಿದೆ ಎಂದು ಹರಿಹಾಯ್ದರು.
ರೈತರು ತೋಟಗಳಿಗೆ ಹೋಗಲು ಭಯಪಡುತ್ತಿದ್ದಾರೆ, ಅರಣ್ಯಾಧಿಕಾರಿಗಳು ಜನರ ನೆಮ್ಮದಿ ಕಾಪಾಡುವ ನಿಟ್ಟಿನಲ್ಲಿ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಬೇಕು ಎಂದು ಆಗ್ರಹಿಸಿದರು.
ಉಪವಿಭಾಗಾಧಿಕಾರಿ ಶಿವಕುಮಾರ್ ಅವರಿಗೆ ಚಿರತೆ ಹಿಡಿಯುವಂತೆ ಮನವಿ ಸಲ್ಲಿಸಲಾಯಿತು.
ಹರಳೂರು ಗ್ರಾಪಂ ಅಧ್ಯಕ್ಷೆ ಶಾಂತಾ, ವಿಎಸ್‌ಎಸ್‌ಎನ್ ಅಧ್ಯಕ್ಷ ಕೆಂಪಹನುಮಣ್ಣ, ಸ್ಥಳೀಯ ಮುಖಂಡರಾದ ಸಿರಿವರಬೋರೇಗೌಡ, ಮಸ್ಕಲ್ ಅಶ್ವತ್ಥನಾರಾಯಣ, ವಕೀಲ ಕಾಮೇಗೌಡ, ಆಲನೂರು ಅನಂತ್, ಯುವಘಟಕದ ಅಧ್ಯಕ್ಷ ಹಿರೇಹಳ್ಳಿ ಮಹೇಶ್ ಮತ್ತಿತರರು ಇದ್ದರು.
ಕ್ರಷರ್ ಕಂಟಕ: ತುಮಕೂರು ಸುತ್ತಮುತ್ತ ನಾಯಿಕೊಡೆಗಳಂತೆ ತಲೆ ಎತ್ತಿರುವ ಜಲ್ಲಿ ಕ್ರಷರ್‌ಗಳೇ ಕಾಡು ಪ್ರಾಣಿಗಳ ಬದುಕಿಗೆ ಕಂಟಕವಾಗಿವೆ. ಯಾವುದೇ ರಕ್ಷಣಾ ಕ್ರಮವಿಲ್ಲದೆ ಕಾರ್ಯನಿರ್ವಹಿಸುವ ಕ್ರಷರ್‌ಗಳಿಗೆ ಹೆದರಿ ಪ್ರಾಣಿಗಳು ಕಾಡಿನಿಂದ ನಾಡಿಗೆ ಬಂದು ಜನರ ಮೇಲೆ ದಾಳಿ ನಡೆಸುತ್ತಿದ್ದು ಮಾನವ-ಪ್ರಾಣಿ ಸಂಘರ್ಷ ಏರ್ಪಡಲು ಕಾರಣವಾಗಿದೆ.
ಮೃತ ಬಾಲಕನ ಕುಟುಂಬಕ್ಕೆ 7.5 ಲಕ್ಷ ರೂ. ಪರಿಹಾರ ನೀಡಲಾಗುವುದು. ಚಿರತೆ ದಾಳಿಗೆ ಕಾರ್ಯಾಚರಣೆ ಆರಂಭಿಸಲಾಗಿದೆ. ಕ್ಯಾಮರಾ ಟ್ರ್ಯಾಪ್ ಅಳವಡಿಸಲಾಗಿದ್ದು ಛಾಯಾಚಿತ್ರ ಬಿಡುಗಡೆ ಮಾಡಲಾಗಿದೆ. ಸ್ಥಳೀಯರು ಎಚ್ಚರಿಕೆ ವಹಿಸಬೇಕು. ಎಚ್.ಸಿ.ಗಿರೀಶ್ ಡಿಎಫ್‌ಒ, ತುಮಕೂರು ನಮ್ಮಲ್ಲಿಯೇ 16ಕ್ಕೂ ಹೆಚ್ಚು ಚಿರತೆಗಳಿವೆ, ಅವುಗಳನ್ನು ಹಿಡಿಯಲು ಬೋನುಗಳಿಲ್ಲ. ಚಿರತೆ ಸಮಸ್ಯೆ ಇಲ್ಲದ ಕಡೆಗಳಿಂದ ಬೋನುಗಳನ್ನು ತರಿಸಿ ಇಲ್ಲಿನ ಸಮಸ್ಯೆ ಬಗೆಹರಿಸಬೇಕು. ಅಧಿವೇಶನದಲ್ಲಿ ಚಿರತೆ ಸಮಸ್ಯೆ ಬಗ್ಗೆ ಮಾತನಾಡುತ್ತೇನೆ. ಡಿ.ಸಿ.ಗೌರಿಶಂಕರ್ ಶಾಸಕ