ದುಷ್ಟ ಶಕ್ತಿಗಳು ಯಾರು ಎಂದು ಜನ ತೀರ್ಮಾನಿಸುತ್ತಾರೆ : ಶೋಭಾ ಕರಂದ್ಲಾಜೆ

Shobha Karandlaje
Published on

ಮೈಸೂರು: ದುಷ್ಟ ಶಕ್ತಿಗಳು ಯಾರು ಎಂಬುದನ್ನು ಸರ್ಕಾರ ತೀರ್ಮಾನ ಮಾಡಲ್ಲ, ಜನ ತೀರ್ಮಾನ ಮಾಡುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.


ಅರಮನೆಯ ಆವರಣದಲ್ಲಿ ಶುಕ್ರವಾರ ಗಜಪಡೆಯ ಮಾವುತರು ಮತ್ತು ಕಾವಾಡಿಗರಿಗೆ ಉಪಾಹಾರ ಬಡಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ದುಷ್ಟ ಶಕ್ತಿಗಳ ಎದುರು ಸತ್ಯದ ಜಯ ಎಂಬ ರಾಜ್ಯ ಸರ್ಕಾರ ಜಾಹೀರಾತು ನೀಡಿದೆ. ನೀವೇನು ಬೇಕಿದ್ರೂ ಜಾಹೀರಾತು ನೀಡಬಹುದು, ಏನು ಬೇಕಾದರೂ ಭಾಷಣ ಮಾಡಬಹುದು. ಸರ್ಕಾರ ನಿಮ್ಮ ಕೈಲಿದೆ. ಯಾರು ದುಷ್ಟರು ಯಾರು ಶಿಷ್ಟರು ಎಂಬುದನ್ನು ಜನ ಗಮನಿಸುತ್ತಿದ್ದಾರೆ ಎಂದರು.


ಯಾರು ಸರ್ಕಾರದ ಹಣ, ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ? ಯಾರು ಭಷ್ಟಾಚಾರವನ್ನೇ ಉದ್ಯಮ ಮಾಡಿಕೊಂಡಿದ್ದಾರೆ? ವರ್ಗಾವಣೆಗೂ ದುಡ್ಡು, ಕೆಲಸ ಕೊಡಿಸಲಿಕ್ಕೂ ದುಡ್ಡು, ಎಲ್ಲರದಲ್ಲೂ ದುಡ್ಡು ತಗೋಳ್ತಾರೆ. ಅವರು ಯಾವ ದೃಷ್ಟರ ಬಗ್ಗೆ ಮಾತನಾಡ್ತಾರೆ ಅವರಿಗೆ ಅವರೇ ಪ್ರಶ್ನೆ ಹಾಕಿಕೊಳ್ಳಬೇಕು ಎಂದು ಕುಟುಕಿದರು.


ಇಂತಹ ಜಾಹೀರಾತಿಗೆ ಸರ್ಕಾರದ ಹಣ ಬಳಕೆ ಮಾಡಿದ್ದು, ಇದರೊಂದಿಗೆ ಅವರ ಮುಖಕ್ಕೆ ಅವರೇ ಮಸಿ ಬಳಿದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಮುಡಾ ಹಗರಣದಲ್ಲಿ ಸ್ವತಃ ಸಿಎಂ ಪತ್ನಿ ಸೈಟ್ ಏಕೆ ವಾಪಸ್ ಮಾಡಿದ್ದಾರೆ? ತಪ್ಪು ಮಾಡಿದ್ದೀರಿ, ಅದಕ್ಕೆ ವಾಪಸ್ ನೀಡಿದ್ದೀರಿ. ವಾಲ್ಮೀಕಿ ನಿಗಮದಲ್ಲಿ ಹಗರಣ ಬಗ್ಗೆ ಜಾರಿ ನಿರ್ದೇಶನಾಲಯ ವರದಿ ನೀಡಿದೆ. ಪರಿಶಿಷ್ಟ ಪಂಗಡದ ಹಣವನ್ನು ಆಂಧ್ರಪ್ರದೇಶ, ಬಳ್ಳಾರಿ ಚುನಾವಣೆಗೆ ನೀಡಿರುವುದು ಬಗ್ಗೆ ವರದಿ ನೀಡಿದೆ. ಯಾರು ಲೂಟಿ ಮಾಡಿತ್ತಿದ್ದಾರೆ ಎಂದು ಹರಿಹಾಯ್ದರು.


ದಸರಾ ವೇಳೆ ಮಾವುತರು ಕಾವಾಡಿಗರ ಕಾಡಿನಿಂದ ನಾಡಿಗೆ ಬರುತ್ತಾರೆ. ಮುಂಚೆ ಮಾವುತರು ಕಾವಾಡಿಗರಿಗೆ 3 ಸಾವಿರ ರೂ. ಗೌರವಧನ ನೀಡಲಾಗುತ್ತಿತ್ತು. ಈ ವೇಳೆ ಮಾವುತರು ಕಾವಾಡಿಗರು ಪ್ರತಿಭಟನೆ ಮಾಡುತ್ತಿದ್ದರು. ನಾವು ಇದನ್ನು ಅವರಿಗೆ ಪ್ರತಿ ತಿಂಗಳು ಸಂಬಳ ನೀಡುವ ಕೆಲಸ ಮಾಡಿದ್ದವು ಎಂದರು. ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net