

ಬಾಳೆಹೊನ್ನೂರು: ಎಡಬ್ಲ್ಯುಎಸ್ ಕ್ಲೀನ್ ಎನರ್ಜಿ ವೆಬ್‌ಸೈಟ್‌ನಲ್ಲಿ ಹಣ ಹೂಡಿಕೆ ಮಾಡಿದರೆ ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿದ ನಕಲಿ ಸಂಸ್ಥೆಯು ಜನರಿಂದ ಲಕ್ಷಾಂತರ ರೂ. ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ಎಡಬ್ಲ್ಯುಎಸ್ ಕ್ಲೀನ್ ಎನರ್ಜಿ ವೆಬ್‌ಸೈಟ್ ಮೂರು ತಿಂಗಳಿಂದ ಸಾಮಾಜಿಕ ಜಾಲತಾಣಗಳ ಮೂಲಕ ಕೆಲವು ಜನರನ್ನು ನೋಂದಣಿ ಮಾಡಿಸಿಕೊಂಡು ಸಂಸ್ಥೆಯ ವೆಬ್‌ಸೈಟ್ ಮೂಲಕ ಹಣ ಹೂಡಿಕೆ ಮಾಡಲು ಸದಸ್ಯರಿಗೆ ತಿಳಿಸಿತ್ತು.
ಸಂಸ್ಥೆಗೆ ನಿಗದಿತ ಸಮಯಕ್ಕೆಂದು ಹಣ ಹೂಡಿಕೆ ಮಾಡಿದಲ್ಲಿ ಪ್ರತಿದಿನ ಹೂಡಿಕೆದಾರರಿಗೆ ಒಂದಷ್ಟು ಹಣವನ್ನು ಸಂಸ್ಥೆ ವಾಪಸ್ ನೀಡಲಿದೆ. ಸಂಸ್ಥೆ ನೀಡಿದ ಅವಧಿ ಮುಕ್ತಾಯಗೊಂಡ ನಂತರ ಮೊದಲು ಹೂಡಿಕೆ ಮಾಡಿದ್ದ ಹಣವನ್ನು ವಾಪಸ್ ನೀಡುವುದಾಗಿ ತಿಳಿಸಿತ್ತು. ಅದರಂತೆ ಬಾಳೆಹೊನ್ನೂರು ಹಾಗೂ ಸುತ್ತಮುತ್ತಲಿನ ಹಲವರು ಕೆಲವು ದಿನಗಳಿಂದ ಚೈನ್‌ಲಿಂಕ್ ಮೂಲಕ ಸಂಸ್ಥೆಯಲ್ಲಿ ನೋಂದಣಿ ಮಾಡಿಕೊಂಡು ಹಣ ಹೂಡಿದ್ದರು.
ಎಡಬ್ಲ್ಯುಎಸ್ ಸಂಸ್ಥೆಯಲ್ಲಿ 2 ಸಾವಿರ ರೂ. ಹೂಡಿಕೆ ಮಾಡಿದಲ್ಲಿ 90 ದಿನಗಳ ಕಾಲ ನಿತ್ಯ 50 ರೂ.ನಂತೆ ಸಂಸ್ಥೆ ವಾಪಸ್ ನೀಡಲಿದ್ದು, 90 ದಿನಗಳ ಬಳಿಕ 2 ಸಾವಿರ ರೂ.ಗಳನ್ನ್ನೂ ವಾಪಸ್ ನೀಡಲಿದೆ. ಇದೇ ರೀತಿ 69 ಸಾವಿರ ರೂ.ಗಳನ್ನು 10 ದಿನಗಳ ಅವಧಿಗೆ ಹೂಡಿಕೆ ಮಾಡಿದಲ್ಲಿ ನಿತ್ಯ 6,505 ನೀಡಲಿದ್ದು, 10 ದಿನಗಳ ಬಳಿಕ 69 ಸಾವಿರ ವಾಪಸ್. 10 ಸಾವಿರವನ್ನು 7 ದಿನಗಳ ಅವಧಿಗೆ ಹೂಡಿಕೆ ಮಾಡಿದಲ್ಲಿ ನಿತ್ಯ 1,496 ರೂ. ವಾಪಸ್ ನೀಡಿ, 7 ದಿನಗಳ ಬಳಿಕ 10 ಸಾವಿರ ರೂ. ಮರಳಿಸುವ ಭರವಸೆ ನೀಡಿತ್ತು. ಇದೇ ಮಾದರಿಯಲ್ಲಿ ಹಲವಾರು ಸ್ಲ್ಯಾಬ್‌ಗಳ ಆಫರ್ ನೀಡಿತ್ತು.
ಇಂಥ ಆಫರ್‌ಗಳನ್ನು ನಂಬಿ ಸದಸ್ಯರಾದವರು ಸಂಸ್ಥೆಯಲ್ಲಿ ಕೆಲವು ದಿನಗಳಿಂದ 2 ಸಾವಿರದಿಂದ ವಿವಿಧ ಮೊತ್ತಗಳನ್ನು ಹೂಡಿಕೆ ಮಾಡಿದ್ದರು. ಹೂಡಿಕೆ ಮಾಡಿದ ಸದಸ್ಯರಿಗೆ ಆರಂಭದ ದಿನದಿಂದಲೂ ಸೆ.15ರವರೆಗೆ ನಿತ್ಯವೂ ಸ್ವಲ್ಪ ಹಣ ಖಾತೆಗೆ ವರ್ಗಾವಣೆಯಾಗುತ್ತಿತ್ತು.
ಸೆ.15ರಂದು ಸಂಸ್ಥೆ ಗಣೇಶ ಹಬ್ಬಕ್ಕಾಗಿ ವಿಶೇಷ ಆಫರ್ ನೀಡಿದ್ದು, ಹೆಚ್ಚಿನ ಹಣ ಹೂಡಿಕೆ ಮಾಡಿದಲ್ಲಿ ಕಡಿಮೆ ದಿನಗಳ ಅವಧಿಯಲ್ಲಿ ಹೆಚ್ಚು ಹಣ ಹೊಂದಬಹುದಾಗಿ ಘೋಷಿಸಿತ್ತು. ಇದನ್ನು ನಂಬಿದ ಹಲವರು ಗಣೇಶ ಹಬ್ಬದ ಆಫರ್ ಎಂದು ನಂಬಿ ಲಕ್ಷಾಂತರ ರೂ. ಹೂಡಿಕೆ ಮಾಡಿದ್ದರು.
ಎಡಬ್ಲ್ಯುಎಸ್ ಸಂಸ್ಥೆ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕಾರ್ಯಚಟುವಟಿಕೆಯನ್ನು ಎರಡು ದಿನಗಳ ಕಾಲ ಸ್ಥಗಿತಗೊಳಿಸಿದೆ ಎಂದು ಘೋಷಣೆ ಮಾಡಿತು. ಇದನ್ನೂ ಜನರು ನಂಬಿದ್ದರು. ಆದರೆ ಮಂಗಳವಾರ ಪುನಃ ಇನ್ನಷ್ಟು ಹಣ ಹೂಡಿಕೆ ಮಾಡೋಣ ಎಂದು ಹಲವರು ಸಂಸ್ಥೆಯ ವೆಬ್‌ಸೈಟ್ ತೆರೆದರೆ ಆ ವೆಬ್‌ಸೈಟ್ ಹಾಗೂ ಆ್ಯಪ್ ತೆರೆಯಲೇ ಇಲ್ಲ. ಹಲವರು ಅನುಮಾನಗೊಂಡು ಸಂಸ್ಥೆಯ ಹೆಸರಿನಲ್ಲಿ ವ್ಯಾಟ್ಸ್‌ಆ್ಯಪ್ ರಚನೆಗೊಂಡಿರುವ ಗ್ರೂಪ್‌ಗಳಲ್ಲಿ ಪ್ರಶ್ನಿಸಿದಾಗ, ಸಂಸ್ಥೆಯ ಮುಖ್ಯಸ್ಥರೆಂದು ಗುರುತಿಸಿಕೊಂಡಿದ್ದ ಕೆಲವು ನಂಬರ್‌ಗೆ ಕರೆ ಮಾಡಿ ಕೇಳಿದಾಗ ಎಡಬ್ಲ್ಯುಎಸ್ ಸಂಸ್ಥೆ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದು, ತಕ್ಷಣ ಎಲ್ಲ ಸದಸ್ಯರೂ 2 ಸಾವಿರ ರೂ. ಪಾವತಿಸಬೇಕು. ಅದನ್ನು ತೆರಿಗೆ ಕಚೇರಿಗೆ ಕಟ್ಟಿದರೆ ನಿಮ್ಮ ಹಣ ವಾಪಸ್ ಬರುತ್ತದೆ ಎಂದು ಹೇಳಿದರು. ಇದನ್ನೂ ನಂಬಿದ ಕೆಲವರು 2 ಸಾವಿರ ರೂ. ಪಾವತಿಸಿದ್ದಾರೆ. ನಂತರ ಎರಡ್ಮೂರು ದಿನವಾದರೂ ಸಂಸ್ಥೆಯ ಆ್ಯಪ್, ವೆಬ್‌ಸೈಟ್ ಕಾರ್ಯನಿರ್ವಹಿಸುತ್ತಿರಲಿಲ್ಲ. ಇದರಿಂದ ಅನುಮಾನಗೊಂಡ ಗ್ರಾಹಕರು ಪುನಃ ಮುಖ್ಯಸ್ಥರ ನಂಬರ್‌ಗಳಿಗೆ ಕರೆ ಮಾಡಿದಾಗ ಅವುಗಳು ಸ್ವಿಚ್‌ಆಫ್ ಆಗಿದ್ದವು. ಈ ವಿಚಾರ ತಿಳಿಯುತ್ತಿದ್ದಂತೆ ಹಲವು ಗ್ರಾಹಕರು ಮೋಸ ಹೋಗಿದ್ದೇವೆ ಎಂದು ಕೈ ಕೈ ಹಿಸುಕಿಕೊಳ್ಳಲಾರಂಭಿಸಿದರು.
ಹಣ ದ್ವಿಗುಣದ ಆಸೆಗೆ ಬಿದ್ದ ಜನ ಲಕ್ಷಾಂತರ ರೂ. ಕಳೆದುಕೊಂಡಿದ್ದು ಮರ್ಯಾದೆಗೆ ಅಂಜಿ ದೂರು ನೀಡಲು ಮುಂದಾಗುತ್ತಿಲ್ಲ. ಕೆಲವು ಕಡೆಗಳಲ್ಲಿ ಪೊಲೀಸರಿಗೆ ಗ್ರಾಹಕರು ದೂರು ಕೊಟ್ಟಿದ್ದಾರೆ ಎನ್ನಲಾಗಿದೆ.
ಎಡಬ್ಲ್ಯುಎಸ್ ಸಂಸ್ಥೆ ಆರಂಭದಲ್ಲಿ ತನ್ನ ಪೂರ್ಣ ಹೆಸರು ಅಮೇಜಾನ್ ವೆಬ್ ಸರ್ವೀಸ್ ಎಂದು ಹೇಳಿಕೊಂಡಿತ್ತು. ಸಂಸ್ಥೆ ಸಂಪೂರ್ಣ ಪಾರದರ್ಶಕವಾಗಿದ್ದು, ಗ್ರಾಹಕರಿಗೆ ನೀಡುವ ಹಣದಲ್ಲಿ ತೆರಿಗೆ ಸಹ ಕಡಿತಗೊಳ್ಳುತ್ತಿದೆ. ಸಂಸ್ಥೆಯು ನೋಂದಣಿಗೊಂಡಿದ್ದು, ಐಎಸ್‌ಒ ಸರ್ಟಿಫಿಕೇಟ್ ಸಹ ಹೊಂದಿದೆ ಎಂದು ನಕಲಿ ಐಎಸ್‌ಒ ಸರ್ಟಿಫಿಕೇಟ್ ಅನ್ನು ಸದಸ್ಯರಿಗೆ ತೋರಿಸಿತ್ತು. ಯುವತಿಯರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆದು ಕೆಲ ಯುವತಿಯರ ಫೋಟೋಗಳನ್ನೂ ಜಾಲತಾಣಗಳಲ್ಲಿ ಹಾಕಿಕೊಂಡಿತ್ತು. ಮೊ. 9932790886, 7679045616, 9365196587 ಸಂಖ್ಯೆಗಳ ಮೂಲಕ ವಾಟ್ಸ್‌ಆ್ಯಪ್‌ನಲ್ಲಿ ಗುಂಪು ರಚನೆ ಮಾಡಿಕೊಂಡು, ಗ್ರಾಹಕರಿಗೆ ಈ ಸಂಖ್ಯೆಗಳ ಮೂಲಕವೇ ಕರೆ ಮಾಡಿ ವ್ಯವಹರಿಸುತ್ತ ಹಣ ಹಾಕಿಸಿಕೊಳ್ಳುತ್ತಿದ್ದರು.