ಹೆಬ್ಬಾವನ್ನು ಹಿಡಿದೆಳೆದು ಅದರ ಮೇಲೆ ಬಸ್​ ಹತ್ತಿಸಿ ಹಿಂಸಿಸಿ ಕೊಂದು ಸಂಭ್ರಮಿಸಿದ ಜನರು!

Python 2
Published on

ಯಾದಗಿರಿ: ಈ ಕುರಿತ ವಿಡಿಯೋವನ್ನು ನೋಡಿದರೆ ಯಾರಿಗೇ ಆದರೂ ಒಮ್ಮೆ, 'ಛೇ ಇದೆಂಥ ವಿಕೃತಿ..' ಎಂದನಿಸದೇ ಇರಲಾರದು. ಒಂದು ಹೆಬ್ಬಾವನ್ನು ಹಲವಾರು ಜನರು ಸೇರಿ ವಿಪರೀತ ಹಿಂಸೆ ಕೊಟ್ಟು ಸಾಯಿಸಿ ಸಂಭ್ರಮಿಸಿದ್ದಾರೆ. ಇಂಥದ್ದೊಂದು ದುಷ್ಕೃತ್ಯ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.

ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ರಂಗಂಪೇಟೆಯಲ್ಲಿ ಈ ಘಟನೆ ನಡೆದಿದೆ. ಬೀದರ್-ಬೆಂಗಳೂರು ಹೆದ್ದಾರಿಯ ರಂಗಂಪೇಟೆಯಲ್ಲಿ ಮಂಗಳವಾರ ರಾತ್ರಿ ಕಲ್ಲುಗಳ ಸಂದಿಯಲ್ಲಿ ಹೋಗುತ್ತಿದ್ದ ಹೆಬ್ಬಾವೊಂದನ್ನು ಹಿಡಿದ ಸಾರ್ವಜನಿಕರು ಅದನ್ನು ಹಿಡಿದು ರಸ್ತೆಯಲ್ಲಿ ಎಳೆದಾಡಿದ್ದಾರೆ. ಮಾತ್ರವಲ್ಲ, ಬಳಿಕ ಅದರ ಮೇಲೆ ಸಾರಿಗೆಯ ಬಸ್​ವೊಂದನ್ನು ಹರಿಸಿ ಹಿಂಸಿಸಿ ಸಂಭ್ರಮಿಸಿದ್ದಾರೆ. ದುರುಳರ ಈ ಕೃತ್ಯಕ್ಕೆ ಬಸ್ ಚಾಲಕ ಕೂಡ ಸಹಕರಿಸಿದ್ದಾನೆ.

ತನ್ನ ಪಾಡಿಗೆ ಸುಮ್ಮನಿದ್ದ ಹೆಬ್ಬಾವನ್ನು ಹಿಡಿದು ಹಿಂಸಿಸಿದ ಈ ಜನರು ತಮ್ಮ ಕೃತ್ಯವನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಅಲ್ಲಿ ನೆರೆದಿದ್ದವರು ಕೂಡ ಈ ಕೃತ್ಯವನ್ನು ನೋಡಿ ಹೋ ಎಂದು ಕೂಗಾಡಿ ವಿಕೃತ ಸಂತೋಷ ಅನುಭವಿಸಿದ್ದಾರೆ. ಈ ಕುರಿತ ವಿಡಿಯೋಗಳು ಈಗ ಅಲ್ಲಲ್ಲಿ ಹರಿದಾಡಲಾರಂಭಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net