ಯುವಕನ ಬರ್ಬರ ಕೊಲೆ: ಕರೆ ಮಾಡಿ ಕರೆಸಿಕೊಂಡು ಚಾಕುವಿನಿಂದ ಚುಚ್ಚಿದ್ರು, ಹಳ್ಳಕ್ಕೆ ತಳ್ಳಿ ತಲೆ ಮೇಲೆ ಕಲ್ಲು ಹಾಕಿದ್ರು..

Arjun
Published on

ಮೈಸೂರು: ಯುವಕನೊಬ್ಬನಿಗೆ ಚಾಕುವಿನಿಂದ ಚುಚ್ಚಿದ್ದಲ್ಲದೆ, ಹಳ್ಳಕ್ಕೆ ತಳ್ಳಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ ಪ್ರಕರಣವೊಂದು ವರದಿಯಾಗಿದೆ. ಮೈಸೂರಿನ ಹೊರವಲಯದ ರಮ್ಮನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಈ ಹತ್ಯೆ ಮಾಡಲಾಗಿದೆ.

ಜೆಸಿಬಿ ವಾಹನ ಚಾಲಕನಾಗಿದ್ದ ಅರ್ಜುನ್ (24) ಎಂಬಾತ ಹತ್ಯೆಯಾದ ಯುವಕ. ಈತನಿಗೆ ಫೋನ್ ಮಾಡಿ, ಗ್ರಾಮದ ಹೊರ ವಲಯಕ್ಕೆ ಕರೆಸಿಕೊಂಡ ದುಷ್ಕರ್ಮಿಗಳು, ಬಳಿಕ ಈತನನ್ನು ಅಟ್ಟಾಡಿಸಿ ಚಾಕುವಿನಿಂದ ಮನಬಂದಂತೆ ಚುಚ್ಚಿದ್ದಾರೆ. ಕೊನೆಗೆ ಹಳ್ಳಕ್ಕೆ ತಳ್ಳಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ.

ತೀವ್ರವಾಗಿ ಗಾಯಗೊಂಡ ಈತನನ್ನು ಸಂಬಂಧಿಕರು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್‌ಪಿ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಅರ್ಜುನ್ ಶವವನ್ನು ಗುರುವಾರ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬದವರಿಗೆ ಹಸ್ತಾಂತರ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net