ನ್ಯಾಯಾಲಯ ಪ್ರಾರಂಭದಿಂದ ಜನರಿಗೆ ಅನುಕೂಲ

People benefit from opening of court
Published on

ರಟ್ಟಿಹಳ್ಳಿ: ತಾಲೂಕಿನ ಜನರು ನ್ಯಾಯಾಲಯದಲ್ಲಿನ ಪ್ರಕರಣಗಳಿಗೆ ಸುಮಾರು 40 ಕಿ.ಮೀ. ದೂರದ ಹಿರೇಕೆರೂರ ಪಟ್ಟಣಕ್ಕೆ ಹೋಗಬೇಕಾಗಿತ್ತು. ಇದರಿಂದ ಬಡವರಿಗೆ ಸಾಕಷ್ಟು ತೊಂದರೆಯಾಗುತಿತ್ತು. ಹೀಗಾಗಿ, ಪಟ್ಟಣದಲ್ಲಿ ನ್ಯಾಯಾಲಯ ಪ್ರಾರಂಭಿಸಿ ಅನುಕೂಲ ಕಲ್ಪಿಸಲಾಗಿದೆ ಎಂದು ಹಾವೇರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕೆ.ಸಿ. ಸದಾನಂದಸ್ವಾಮಿ ಹೇಳಿದರು.

ಪಟ್ಟಣದ ನ್ಯಾಯಾಲಯದಲ್ಲಿ ತಾಲೂಕು ವಕೀಲರು ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ನನ್ನ ಹುಟ್ಟೂರು ರಟ್ಟಿಹಳ್ಳಿ. ಇಲ್ಲಿನ ಎಲ್ಲ ಸಮಸ್ಯೆಗಳನ್ನು ಮನಗಂಡಿದೆ. ಸಾಕಷ್ಟು ವರ್ಷಗಳಿಂದ ಇಲ್ಲಿ ಪ್ರತ್ಯೇಕ ನ್ಯಾಯಾಲಯ ಪ್ರಾರಂಭಿಸಬೇಕೆಂಬ ಪ್ರಯತ್ನ ನಿರಂತರವಾಗಿತ್ತು. ಶಾಸಕ ಯು.ಬಿ. ಬಣಕಾರ ಮತ್ತು ಈ ಭಾಗದ ಎಲ್ಲ ವಕೀಲರು, ಜನಪ್ರತಿನಿಧಿಗಳು ಮತ್ತು ಸರ್ಕಾರದ ಸಹಕಾರದಿಂದ ನ್ಯಾಯಾಲಯ ಆರಂಭಿಸಲಾಗಿದೆ ಎಂದರು.

ರಟ್ಟಿಹಳ್ಳಿ ಪಟ್ಟಣದಲ್ಲಿ ನ್ಯಾಯಾಲಯ ಕಟ್ಟಡಕ್ಕೆ 3 ಎಕರೆ 30 ಗುಂಟೆ ಜಾಗ ನಿಗದಿಯಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ ಕಟ್ಟಡದ ಕಾಮಗಾರಿ ಆರಂಭವಾಗುವುದು. ಕೆಲವೇ ದಿನಗಳಲ್ಲಿ ನಾನು ನಿವೃತ್ತಿ ಹೊಂದುತ್ತಿದ್ದೇನೆ. ನಮ್ಮ ಪ್ರಾಮಾಣಿಕ ಕರ್ತವ್ಯ ಮತ್ತು ಸೇವೆಯಿಂದ ಇತರರಿಗೆ ಮಾದರಿಯಾಗಬೇಕು. ವಕೀಲರು ವಿಶ್ವಾಸ, ಪ್ರೀತಿ ಮತ್ತು ಜನರೊಂದಿಗೆ ತಾಳ್ಮೆಯಿಂದ ವರ್ತಿಸಬೇಕು ಎಂದರು.

ಸನ್ಮಾನ ಸ್ವೀಕರಿಸಿದ ಶಾಸಕ ಯು.ಬಿ. ಬಣಕಾರ ಮಾತನಾಡಿ, ನ್ಯಾಯಾಧೀಶ ಕೆ.ಸಿ. ಸದಾನಂದಸ್ವಾಮಿ ಅವರ ಅವಧಿಯಲ್ಲಿ ನ್ಯಾಯಾಲಯ ಉದ್ಘಾಟಿಸಬೇಕೆಂಬುದು ನಮ್ಮೆಲ್ಲರ ಆಶಯ ಈಡೇರಿದೆ. ರಟ್ಟಿಹಳ್ಳಿ ಪಟ್ಟಣದಲ್ಲಿ 3 ದಿನಗಳ ಬದಲಿಗೆ ವಾರಪೂರ್ತಿ ನ್ಯಾಯಾಲಯ ಸೇವೆ ನೀಡುವಂತೆ ಮನವಿ ಮಾಡಲಾಗುವುದು. ಪಟ್ಟಣದಲ್ಲಿ ನ್ಯಾಯಾಲಯ ಕಟ್ಟಡಕ್ಕೆ ಅಗತ್ಯವಿರುವ ಅನುದಾನಕ್ಕೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.

ವಕೀಲರ ಸಂಘದ ತಾಲೂಕು ಅಧ್ಯಕ್ಷ ಬಿ.ಎಚ್. ಬನ್ನಿಕೋಡ ಮಾತನಾಡಿ, ನ್ಯಾಯಾಧೀಶ ಕೆ.ಸಿ. ಸದಾನಂದಸ್ವಾಮಿ ಮತ್ತು ಶಾಸಕ ಯು.ಬಿ. ಬಣಕಾರ ಸತತ ಪ್ರಯತ್ನದಿಂದ ಮತ್ತು ವಕೀಲರ ಸಹಕಾರದಿಂದ ಇಲ್ಲಿ ನ್ಯಾಯಾಲಯ ಆರಂಭಿಸಲಾಗಿದೆ. ನ್ಯಾಯಾಲಯದ ಕಟ್ಟಡದ ಕಾಮಗಾರಿಗೆ ಸರ್ಕಾರ ಅನುದಾನ ಒದಗಿಸಬೇಕು. ವಕೀಲರ ಸಂಘ ಮಾದರಿ ಸಂಘವಾಗಿ ಮುಂದುವರಿಯಬೇಕು ಎಂದರು.

ಹಿರೇಕೆರೂರ ಸಿವಿಲ್ ನ್ಯಾಯಾಧೀಶೆ ಸವಿತಾ ಮುಕ್ಕಲ್, ಕೆಂಚಪ್ಪ ಬಿದರಿ, ಸಂಘದ ಉಪಾಧ್ಯಕ್ಷ ಎಸ್.ವಿ. ತೊಗರ್ಸಿ, ಕಾರ್ಯದರ್ಶಿ ಮಾರುತಿ ಜೋಕನಾಳ, ಎಸ್.ಎಸ್. ಪಾಟೀಲ, ಕುಮಾರೇಶ ಕೋಟಿಹಾಳ, ಪಿ.ಡಿ. ಬಸನಗೌಡ್ರು, ಬಿ.ಸಿ. ಪಾಟೀಲ, ವಸಂತ ದ್ಯಾವಕ್ಕಳವರ, ವಿ.ಎನ್. ಮಡಿವಾಳರ, ಪರಮೇಶಪ್ಪ ಗುಬ್ಬಿ, ವಿ.ಆರ್. ದ್ರೌಪಕ್ಕನವರ, ಎ.ಎಂ. ಹೊನ್ನಾಳಿ, ಸಂತೋಷ ಪಾಟೀಲ, ಪ್ರಕಾಶ ರ್ಬಾ, ಫಕೀರೇಶ ತುಮ್ಮಿನಕಟ್ಟಿ, ಜಯಣ್ಣ ಹೊಳೆ ಆನ್ವೇರಿ, ಚಂದನಾ ಕಬ್ಬಿಣಕಂತಿಮಠ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net