

ಗಂಗಾವತಿ: ನಗರದ ಶ್ರೀ ಚನ್ನಬಸವಸ್ವಾಮಿ ಕಲಾ ಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಧರ್ಮ ರಕ್ಷಣೆ ಮತ್ತು ಸಂಪ್ರದಾಯಾಚರಣೆ ವಿಶಿಷ್ಟತೆ ತಿಳಿಸುವ ಯಕ್ಷಗಾನ ಪ್ರಸಂಗ ಪ್ರದರ್ಶನ ಗಮನಸೆಳೆದಿದ್ದು, ಕಲಾವಿದರ ಮನೋಜ್ಞ ಅಭಿನಯ ಮನಸೂರೆಗೊಂಡಿತು.
ಇದನ್ನೂ ಓದಿ:http://ಜನರ ಗಮನಸೆಳೆದ ಶಿವಶಕ್ತಿ ಪಂಜುರ್ಲಿ
ನಗರದ ಹೋಟೆಲ್ ಮಾಲೀಕರ ಸಂಘ ಮತ್ತು ಯಕ್ಷಗಾನ ಕಲಾ ಪ್ರೇಮಿಗಳ ಬಳಗದಿಂದ ಶಿವಶಕ್ತಿ ಪಂಜುರ್ಲಿ ಯಕ್ಷಗಾನ ಪ್ರಸಂಗ ಹಮ್ಮಿಕೊಂಡಿದ್ದು, ಹಟ್ಟಿಯಂಗಡಿಯ ಶ್ರೀಕೃಪಾಪೋಷಿತ ಯಕ್ಷಗಾನ ಮಂಡಳಿಯ ಉತ್ತರ ಕರ್ನಾಟಕ ತಿರುಗಾಟದ ಕಲಾವಿದರು ಭಾಗವಹಿಸಿದ್ದರು.
ಹಿಮ್ಮೇಳದ ಭಾಗವಾತರು ಸುಧೀರ್ ಭಟ್ ಪೆರ್ಡೂರ್ ಮತ್ತು ಸುರೇಶಶೆಟ್ಟಿ, ವಿಶಿಷ್ಟ ಧ್ವನಿ, ಶ್ರೀನಿವಾಸ ಪ್ರಭು (ಮದ್ದಳೆ) ಮತ್ತು ಮಂಜುನಾಥ ನಾಡರ (ಚಂಡೆ) ವಾದನ ಗಮನಸೆಳೆಯಿತು.
ಸೀ ವೇಷಧಾರಿಗಳಾದ ಮಂಜು, ಉಮೇಶ, ಗಣೇಶ ನಟನೆ ಮನೋಜ್ಞವಾಗಿದ್ದು, ಶ್ರೀಧರ ಕಾಂಚನ್, ಶೀತಲ್ ಶೆಟ್ಟಿ, ರಾಜೇಶ್, ಯುವರಾಜ್ ಸಾಥ್ ನೀಡಿದರು. ಪೌರಾಣಿಕ ಪ್ರಸಂಗವಾದರೂ ಪ್ರಸ್ತುತ ದಿನಮಾನದ ಪ್ರಸಂಗಗಳ ಹಾಸ್ಯ ವಿವರಿಸುತ್ತ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.
ಕಾಂತಾರ ನೆನಪಿಸುವ ಪಂಜುರ್ಲಿ ವೇಷಧಾರಿ ಕಲಾಮಂದಿರದಲ್ಲೆಲ್ಲ ಕುಣಿದಾಡಿದ್ದು, ಸಭೀಕರಿಗೆ ಅಚ್ಚರಿ ಮೂಡಿಸಿತು.
ಕಾರ್ಯಕ್ರಮ ಆಯೋಜಿಸಿದ್ದ ಹೋಟೆಲ್ ಮಾಲೀಕರ ಸಂಘದ ತಾಲೂಕು ಕಾರ್ಯದರ್ಶಿ ವಿ.ಗುರುಪ್ರಸಾದರಾವ್ ಯಕ್ಷಗಾನ ಪ್ರಸಂಗ ಕುರಿತು ಮಾಹಿತಿ ನೀಡಿದರು. ಅಧ್ಯಕ್ಷ ಶೇಖರಶೆಟ್ಟಿ, ಸದಸ್ಯರಾದ ಮನೋಜಶೆಟ್ಟಿ, ಜಯರಾಂಶೆಟ್ಟಿ, ಕೋಟಿ ಪೂಜಾರಿ, ಸುಜಯ್ ಶೆಟ್ಟಿ, ಪ್ರಶಾಂತ ಶೆಟ್ಟಿ, ಜಗದೀಶ ಪಡಿಯಾರ್, ಸಂತೋಷ ಪೂಜಾರಿ, ಗುರುರಾಜ್ ಕಾರಂತ್ ಇದ್ದರು.