ಅರ್ಧಕ್ಕೇ ನಿಂತ ಕಾಮಗಾರಿ ಜನರು ಹೈರಾಣು

raste
ಕೆಸರುಮಯವಾಗಿರುವ ಹೆಬ್ರಿ ತಾಲೂಕಿನ ಶಿವಪುರದ ಸೂರಿಮಣ್ಣು ಪಡುಕುಡೂರು ರಸ್ತೆ.
Published on

ನರೇಂದ್ರ ಎಸ್.ಮರಸಣಿಗೆ ಗುತ್ತಿಗೆದಾರರು ಅಧಿಕಾರಿಗಳು ಸಮನ್ವಯತೆ ಸಾಧಿಸಿಕೊಂಡು ಕಾಮಗಾರಿ ನಡೆಸಿದಾಗ ಅದು ಗುಣಮಟ್ಟದಿಂದ ಕೂಡಿರುತ್ತದೆ ಹಾಗೂ ಬೇಗ ಪೂರ್ಣಗೊಳ್ಳುತ್ತದೆ ಎಂಬ ಮಾತಿಗೆ ಅಪವಾದವೆಂಬಂತಿದೆ ಪಡುಕುಡೂರು-ಸೂರಿಮಣ್ಣ- ಎಡಂಬಳ್ಳಿ ಸಂಪರ್ಕ ರಸ್ತೆ. ಹೆಬ್ರಿ- ಕಾರ್ಕಳ ರಾಜ್ಯ ಹೆದ್ದಾರಿಗೆ ಪಡುಕುಡೂರು- ಸೂರಿಮಣ್ಣು- ಎಡಂಬಳ್ಳಿಯ ಮೂಲಕ ಸಂಪರ್ಕ ಕಲ್ಪಿಸುವ ರಸ್ತೆಯು ಕಳೆದ ಹಲವು ವರ್ಷಗಳಿಂದ ಪೂರ್ಣಗೊಳ್ಳದೆ ಹಾಗೆಯೇ ಉಳಿದಿದೆ. ಹೊಂಡಗುಂಡಿಗಳಿಂದ ಕೂಡಿರುವ ಈ ರಸ್ತೆ ಮಳೆಯಿಂದಾಗಿ ಕೆಸರುಮಯವಾಗಿ ಸಂಚಾರವೇ ಕಷ್ಟವಾಗಿದೆ. ಸೂರಿಮಣ್ಣು- ಪಡುಕುಡೂರು ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಲಾಗಿದೆ. ಆದರೆ ಪಡುಕುಡೂರು ಶಿವಪುರ ಮುಖ್ಯರಸ್ತೆಯನ್ನು ಸಂಪರ್ಕಿಸುವಲ್ಲಿ ಅರ್ಧ ಕಿ.ಮೀ. ರಸ್ತೆ ಪೂರ್ಣಗೊಳ್ಳದೆ ಹಾಗೇ ಉಳಿದಿದೆ. ಇದರಿಂದ ವಾಹನ ಸಂಚಾರವೇ ಕಷ್ಟವಾಗಿದೆ. ಮಳೆಗಾಲದಲ್ಲಿ ತುಂಬಾ ಕೆಸರು ಮಣ್ಣು ತುಂಬಿ ಸಂಚರಿಸಲು ಭಾರಿ ಸಮಸ್ಯೆಯಾಗಿದೆ. ಹದಗೆಟ್ಟ ರಸ್ತೆಯಲ್ಲಿ ಸಂಚರಿಸಿ ಮತ್ತಷ್ಟು ಸಮಸ್ಯೆ ತಂದುಕೊಳ್ಳುವುದು ಬೇಡವೆಂದು ಅನೇಕ ಮಂದಿ ಸುತ್ತಿಬಳಸಿ ಸಂಚರಿಸುತ್ತಿದ್ದಾರೆ. ಅರಣ್ಯ ಇಲಾಖೆಯ ತೊಡಕು: ರಸ್ತೆ ಕಾಮಗಾರಿ ಪೂರ್ಣಗೊಳ್ಳದಿರಲು ಆ ಜಾಗ ಅರಣ್ಯ ಇಲಾಖೆಯ ವ್ಯಾಪ್ತಿಗೆ ಸೇರಿರುವುದೇ ಪ್ರಮುಖ ಕಾರಣವಾಗಿದೆ. ಹಾಗಾಗಿ ರಸ್ತೆ ಕಾಮಗಾರಿಯನ್ನು ಅರ್ಧಕ್ಕೇ ಸ್ಥಗಿತಗೊಳಿಸಲಾಗಿದೆ. ಅರಣ್ಯ ಇಲಾಖೆಯೊಂದಿಗೆ ಕಾನೂನು ತೊಡಕುಗಳನ್ನು ಸರಿಪಡಿಸಿಕೊಂಡು ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕೆಂದು ಈ ಭಾಗದ ನಾಗರಿಕರು ಆಗ್ರಹಿಸಿದ್ದಾರೆ.

ಅರಣ್ಯ ಇಲಾಖೆಯಿಂದ ಪರವಾನಗಿ

ರಸ್ತೆಯನ್ನು ನಿರ್ಮಾಣ ಮಾಡುವಾಗ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ರಸ್ತೆಯನ್ನು ನಿರ್ಮಿಸಲು ಸಂಬಂಧಿಸಿದ ಇಲಾಖೆಯು ಹಾಗೂ ಗುತ್ತಿಗೆದಾರರು ಅರಣ್ಯ ಇಲಾಖೆಯಿಂದ ಒಪ್ಪಿಗೆ ಪತ್ರ ಪಡೆದು ಕಾಮಗಾರಿ ನಡೆಸಬೇಕಾಗಿದೆ. ಆದರೆ ಯಾರೂ ಒಪ್ಪಿಗೆ ಪತ್ರವನ್ನು ಪಡೆಯುವ ಗೋಜಿಗೆ ಹೋಗದೆ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿವೆ. ಅರಣ್ಯ ಇಲಾಖೆಯ ವ್ಯಾಪ್ತಿಗೆ ಸೇರುವ ಜಾಗದಲ್ಲಿ ರಸ್ತೆಯನ್ನು ಹಾಗೆಯೇ ಬಿಡಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಕಳೆದ ಹಲವು ವರ್ಷಗಳಿಂದಲೂ ಹೊಂಡಮಯ ಮಣ್ಣಿನ ರಸ್ತೆಯಲ್ಲೇ ಸಂಚರಿಸಬೇಕಾಗಿದೆ. ಕೆಲವು ಕಡೆಯಲ್ಲಿ ರಸ್ತೆಯನ್ನು ನಿರ್ಮಿಸಿದರೂ ರಸ್ತೆಯ ಅಂಚಿನಲ್ಲಿ ಜಾಗವೇ ಇಲ್ಲ. ಎದುರುಗಡೆ ಬರುವ ವಾಹನಗಳಿಗೆ ದಾರಿ ಬಿಟ್ಟು ಕೊಡಲು ಜಾಗವೇ ಇಲ್ಲವಾಗಿದೆ. ಅರಣ್ಯ ಮತ್ತು ಸಂಬಂಧಪಟ್ಟ ಇಲಾಖೆಯವರು ಸಮನ್ವಯದಿಂದ ಕಾರ್ಯ ಮಾಡಿ ರಸ್ತೆಯ ಅಭಿವೃದ್ಧಿಗೆ ಮುಂದಾಗಬೇಕಿದೆ.

ಪಡುಕುಡೂರು ಸೂರಿಮಣ್ಣು ರಸ್ತೆ ಕಾಮಗಾರಿ ಅರ್ಧ ಕಿ.ಮೀ. ಅರ್ಧಕ್ಕೆ ನಿಂತು ಹಲವು ವರ್ಷಗಳೇ ಕಳೆದಿವೆ. ಇದರಿಂದಾಗಿ ಸುಗಮವಾಗಿ ಸಂಚರಿಸಲು ದೊಡ್ಡ ಸಮಸ್ಯೆಯಾಗಿದೆ. ಶೀಘ್ರವಾಗಿ ರಸ್ತೆಯನ್ನು ಸಂಪೂರ್ಣ ಮಾಡಬೇಕಾಗಿದೆ. ನಾಗರಾಜ್ ಕುಲಾಲ್ ಸ್ಥಳೀಯರು. ಅರಣ್ಯ ಇಲಾಖೆಯ ಸಮಸ್ಯೆಯಿಂದ ನಿರ್ದಿಷ್ಟ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಸಾಧ್ಯವಾಗಿಲ್ಲ. ಮೇಲಧಿಕಾರಿಗಳ ಗಮನಕ್ಕೆ ತಂದು ಇದರ ಬಗ್ಗೆ ಸಮಗ್ರ ಕ್ರಮ ಜರುಗಿಸಲಾಗುವುದು. ಶರತ್, ಸಹಾಯಕ ಇಂಜಿನಿಯರ್, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಕಾರ್ಕಳ. https://www.vijayavani.net/rotary-celebrates-auditors-day https://www.vijayavani.net/marikamba-sangha-strives-to-save-the-environment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net