ರಾಷ್ಟ್ರೀಯ ಹೆದ್ದಾರಿ 66 ಕಾಮಗಾರಿಯಿಂದ ಜನ ಹೈರಾಣ

NH
ಹೊಸಾಡು ಗ್ರಾಮದ ಹೃದಯ ಭಾಗದಲ್ಲಿರುವ ಮುಳ್ಳಿಕಟ್ಟೆ ಜಂಕ್ಷನ್ ವಲಯ
Published on

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ

ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥದಿಂದ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ-ಅರಾಟೆ ಗ್ರಾಮಸ್ಥರು ಸಮಸ್ಯೆಗಳ ಸರಮಾಲೆ ಸುತ್ತಿಕೊಂಡಿದ್ದು, ಮೂಲಸೌಲಭ್ಯ ಒದಗಿಸುವಂತೆ ಗ್ರಾಮಸ್ಥರ ಬೇಡಿಕೆಗಳಿಗೆ ಈವರೆಗೆ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ. ಹೀಗಾಗಿ ಜನ ಬೀದಿಗಿಳಿಯಲು ಸಿದ್ಧತೆ ನಡೆಸುತ್ತಿದ್ದಾರೆ.

ಅಪಘಾತ ತಾಣ

ಮುಳ್ಳಿಕಟ್ಟೆ ಜಂಕ್ಷನ್ ಪ್ರದೇಶ ಅಪಘಾತ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿನ ಮುಖ್ಯ ಬಸ್ ನಿಲ್ದಾಣ ರಾಷ್ಟ್ರೀಯ ಹೆದ್ದಾರಿ 66ಕ್ಕೆ ತಾಗಿಕೊಂಡಿದ್ದು ಪ್ರತಿನಿತ್ಯ ಸಾವಿರಾರು ವಾಹನ ಸಂಚರಿಸುತ್ತವೆ. ಈ ಪ್ರದೇಶದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ, ಗಂಗೊಳ್ಳಿ ಕಡೆ ಹೋಗುವ ರಸ್ತೆ ಮತ್ತು ನಾಡ-ಗುಡ್ಡೆಯಂಗಡಿ ರಸ್ತೆ ನೇರವಾಗಿ ಸಂಧಿಸುತ್ತದೆ. ಮುಳ್ಳಿಕಟ್ಟೆ ಜಂಕ್ಷನ್ ಜನದಟ್ಟಣೆ ಪ್ರದೇಶವಾಗಿದ್ದು, ಪಾದಚಾರಿಗಳು ಹಾಗೂ ಸಾರ್ವಜನಿಕರಿಗೆ ಕಂಟಕವಾಗಿ ಪರಿಣಮಿಸಿದೆ. ರಸ್ತೆ ಅಗಲೀಕರಣದಿಂದ ವಾಹನಗಳ ಒಡಾಟದ ವೇಗ ಹೆಚ್ಚಿರುವುದರಿಂದ ಪಾದಚಾರಿಗಳಿಗೆ ಹೆಚ್ಚಿನ ಸಂಕಷ್ಟ ತಂದೊಡ್ಡಿದೆ.

ಸರ್ವೀಸ್ ರಸ್ತೆ ಅಗತ್ಯ

ಹೊಸಾಡು ಗ್ರಾಮಸ್ಥರು ಗ್ರಾಪಂ, ವಿಎ ಕಚೇರಿ, ಪಡಿತರ, ಅಂಚೆ ಕಚೇರಿ ಹೀಗೆ ಎಲ್ಲದಕ್ಕೂ ಹೆದ್ದಾರಿ ದಾಟಿ ಬರಬೇಕು. ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಬೇರೆ ಬೇರೆ ಶಾಲಾ-ಕಾಲೇಜುಗಳಿಗೆ ಶಿಕ್ಷಣಕ್ಕಾಗಿ ಸಂಚರಿಸುತ್ತಿದ್ದು, ಮೊವಾಡಿಯಿಂದ ಅರಾಟೆವರೆಗೆ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಸ್ಥಳೀಯರ ಬೇಡಿಕೆಗೆ ಸ್ಪಂದನೆ ದೊರೆತಿಲ್ಲ. ಅಂಡರ್‌ಪಾಸ್ ಅಥವಾ ಮೇಲ್ಸೇತುವೆ ನಿರ್ಮಾಣದ ಬೇಡಿಕೆ ನನೆಗುದಿಗೆ ಬಿದ್ದಿದೆ.

ಚರಂಡಿ ಸಮಸ್ಯೆ

ಹೆದ್ದಾರಿ ಚತುಷ್ಪಥ ಕಾಮಗಾರಿ, ಅಗಲೀಕರಣದಿಂದ ಮುಳ್ಳಿಕಟ್ಟೆ, ಅರಾಟೆ ಭಾಗದಲ್ಲಿ ಮಳೆ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆಯಿಲ್ಲದೆ ಪ್ರತಿ ಮಳೆಗೂ ಆವಾಂತರ ಸೃಷ್ಟಿಯಾಗುತ್ತಿದೆ. ಹೆದ್ದಾರಿ, ಗೇರು ನಿಗಮ ಜಾಗದ ನೀರು, ಖಾಸಗಿ ವ್ಯಕ್ತಿಯೊಬ್ಬರ ಜಾಗದ ನೀರು, ಮೊವಾಡಿ ಕಡೆಯಿಂದ ಬರುವ ಮಳೆ ನೀರನ್ನೆಲ್ಲ ಹೊಸಾಡು ಕಡೆಗೆ ಬಿಡುತ್ತಿದ್ದು 7-8 ಮನೆ ಕಾಂಪೌಂಡ್‌ಗೆ ಹಾನಿಯಾಗಿದೆ. ಬಾವಿ ನೀರು ಕಲುಷಿತಗೊಂಡಿದ್ದು, 250 ಎಕರೆ ಕೃಷಿ ಭೂಮಿಗೂ ತೊಂದರೆಯಾಗುತ್ತಿದೆ. ಮೊವಾಡಿಯಿಂದ ಅರಾಟೆಯ ಸೌಪರ್ಣಿಕ ನದಿಯವರೆಗೆ ಸಮರ್ಪಕ ಕಾಂಕ್ರೀಟ್ ಚರಂಡಿ ನಿರ್ಮಾಣಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಬಸ್ ತಂಗುದಾಣವಿಲ್ಲ

ಮುಳ್ಳಿಕಟ್ಟೆ ಜನಜಂಗುಳಿಯಿಂದ ಕೂಡಿರುವ ಪ್ರದೇಶವಾಗಿದ್ದು, ಪ್ರತಿನಿತ್ಯ ನೂರಾರು ಬಸ್‌ಗಳು ಸಂಚರಿಸುತ್ತಿದ್ದು, ತಂಗುದಾಣವೇ ಇಲ್ಲ. ಪ್ರಯಾಣಿಕರು ಮಳೆ, ಬಿಸಿಲಿಗೆ ರಸ್ತೆ ಬದಿಯಲ್ಲೇ ಬಸ್‌ಗೆ ಕಾದು ನಿಲ್ಲಬೇಕಾದ ಪರಿಸ್ಥಿತಿ. ಕುಂದಾಪುರದಿಂದ ಬೈಂದೂರು, ಗಂಗೊಳ್ಳಿ, ಭಟ್ಕಳ, ನಾಡ, ಪಡುಕೋಣೆ, ಆಲೂರು ಮುಂತಾದ ಕಡೆ ತೆರಳುವ ಮತ್ತು ಭಟ್ಕಳ, ಬೈಂದೂರು, ಗಂಗೊಳ್ಳಿ, ನಾಡ, ಪಡುಕೋಣೆ, ಆಲೂರು ಮುಂತಾದ ಕಡೆಗಳಿಂದ ಕುಂದಾಪುರ, ಉಡುಪಿಗೆ ತೆರಳುವ ಬಸ್‌ಗಳಿಗೆ ಕಾಯುವ ಪ್ರಯಾಣಿಕರ ಗೋಳು ಹೇಳತೀರದು.

ದಾರಿದೀಪಗಳಿಲ್ಲ

ಮುಳ್ಳಿಕಟ್ಟೆಯಿಂದ ಮೊವಾಡಿವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ದಾರಿದೀಪಗಳಿಲ್ಲ. ರಾತ್ರಿ ವೇಳೆ ಹೆದ್ದಾರಿ ಇಕ್ಕೆಲಗಳಲ್ಲಿ ಜಾನುವಾರು ಮಲಗುತ್ತಿದ್ದು ವಾಹನ ಸಂಚರಿಸಲು ಸಮಸ್ಯೆಯಾಗುತ್ತಿದೆ. ಅನೇಕ ಅಪಘಾತಗಳೂ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಪೂರ್ಣಗೊಂಡರೂ ಮುಳ್ಳಿಕಟ್ಟೆ-ಅರಾಟೆ ಗ್ರಾಮಸ್ಥರಿಗೆ ಈವರೆಗೆ ಮೂಲಸೌಲಭ್ಯ ಕಲ್ಪಿಸಿಲ್ಲ. ಅಗತ್ಯ ಬೇಡಿಕೆಗಳ ಈಡೇರಿಕೆಗೆ ಜಿಲ್ಲಾಧಿಕಾರಿ ಕಚೇರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಚೇರಿಗೆ ಅಲೆದಾಡುತ್ತಿರುವ ಗ್ರಾಮಸ್ಥರ ಸಹನೆ ಕಟ್ಟೆಯೊಡೆಯುವ ದಿನ ದೂರವಿಲ್ಲ. ಇನ್ನಾದರೂ ಜಿಲ್ಲಾಡಳಿತ, ರಾ.ಹೆ. ಪ್ರಾಧಿಕಾರದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜನರ ಸಮಸ್ಯೆಗೆ ಸ್ಪಂದಿಸಿ, ಕ್ರಮಕೈಗೊಳ್ಳಬೇಕಿದೆ.

ಹೊಸಾಡು ಗ್ರಾಪಂ ಗ್ರಾಮಸ್ಥರು ಗ್ರಾಪಂ, ವಿಎ ಕಚೇರಿ, ಪಡಿತರ, ಅಂಚೆ ಕಚೇರಿ ಹೀಗೆ ಮುಳ್ಳಿಕಟ್ಟೆಗೆ ಬರಬೇಕಾಗಿದೆ. ಆದರೆ ಇಲ್ಲಿನ ಜಂಕ್ಷನ್ ಅಪಾಯಕಾರಿಯಾಗಿದೆ. ಇಲ್ಲಿ ಅಂಡರ್‌ಪಾಸ್ ಅಥವಾ ಮೇಲ್ಸೆತುವೆ ನಿರ್ಮಾಣ ಬೇಡಿಕೆಗೆ ಸ್ಪಂದನೆ ದೊರೆತಿಲ್ಲ. ಮಳೆ ನೀರು ಹರಿದು ಹೋಗಲು ಸಮರ್ಪಕ ಚರಂಡಿ ರಚನೆ, ದಾರಿದೀಪಗಳ ಅಳವಡಿಕೆ, ಬಸ್ ತಂಗುದಾಣ ನಿರ್ಮಾಣ ಸಹಿತ ಅಗತ್ಯ ಮೂಲಸೌಲಭ್ಯ ಈವರೆಗೆ ಒದಗಿಸಿಲ್ಲ. ಜನರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ರಾ.ಹೆ ತಡೆ ನಡೆಸಿ ಹೋರಾಟ ನಡೆಸುತ್ತೇವೆ. -ಎಚ್.ಕೆ.ಚಂದ್ರಶೇಖ ಪೂಜಾರಿ ಮಾಜಿ ಅಧ್ಯಕ್ಷರು ಹೊಸಾಡು ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net