

ಗಂಗೊಳ್ಳಿ: ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂಗಾರು ಚುರುಕಾಗಿದ್ದು, ಶುಕ್ರವಾರದಿಂದ ಗಾಳಿ ಸಹಿತ ಧಾರಾಕಾರ ಮಳೆ ಸುರಿಯುತ್ತಿದೆ.
ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ ಗಂಗೊಳ್ಳಿ ಗ್ರಾಮದಲ್ಲಿ ಕೃತಕ ನೆರೆ ಕಾಣಿಸಿಕೊಂಡಿದೆ. ಗ್ರಾಮದ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ವಾಸದ ಮನೆಗಳಿಗೆ ಮಳೆ ನೀರು ನುಗ್ಗಿ ಹಾನಿ ಸಂಭವಿಸಿದೆ.
ಗಂಗೊಳ್ಳಿ ಗ್ರಾಮದ ದುರ್ಗಿಕೇರಿ, ಚರ್ಚ್ ರಸ್ತೆ, ಖಾರ್ವಿಕೇರಿ, ಗುಡ್ಡೆಕೇರಿ, ದೊಡ್ಡಹಿತ್ಲು ಮೊದಲಾದ ಕಡೆಗಳಲ್ಲಿ ಮತ್ತು ಹೊಸಾಡು ಗ್ರಾಮದ ಕಂಚುಗೋಡು ಮೊದಲಾದ ಕಡೆ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿ ಆಸ್ತಿಪಾಸ್ತಿಗಳಿಗೆ ಹಾನಿಯಂಟು ಮಾಡಿದೆ. ಮಳೆ ನೀರು ಹರಿದು ಹೋಗುವ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ಇರುವುದರಿಂದ ಹಲವೆಡೆ ಕೃತಕ ನೆರೆ ಸೃಷ್ಟಿಯಾಗಿದೆ. ಶುಕ್ರವಾರದಿಂದ ಸುರಿಯುತ್ತಿರುವ ಮಳೆ ಜನರಿಗೆ ಚಳಿ ಹಿಡಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಮಳೆ ವ್ಯಾಪಕವಾಗುತ್ತಿರುವುದರಿಂದ ಕಡಲು ಕೂಡ ಮತ್ತಷ್ಟು ಪ್ರಕ್ಷುಬ್ಧಗೊಂಡಿದ್ದು, ಕಡಲಿನ ರಕ್ಕಸ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದೆ. ಗಂಗೊಳ್ಳಿಯ ಬೇಲಿಕೇರಿ, ಖಾರ್ವಿಕೇರಿ, ಗುಜ್ಜಾಡಿ ಗ್ರಾಮದ ಬೆಣ್ಗೆರೆ, ತ್ರಾಸಿ, ಹೊಸಾಡು ಗ್ರಾಮದ ಕಂಚುಗೋಡು ಮತ್ತು ಮರವಂತೆಯಲ್ಲಿ ಕಡಲ್ಕೊರೆತದ ಕಾಣಿಸಿಕೊಂಡಿದ್ದು, ಕಡಲ ತಡಿಯ ಜನರಲ್ಲಿ ಆತಂಕ ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಕಡಲ್ಕೊರೆತದ ತೀವ್ರತೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಜನರು ದೇವರ ಮೊರೆ ಹೊಗಿದ್ದಾರೆ. ಪಂಚಗಂಗಾವಳಿ ನದಿ ನೀರಿನ ಮಟ್ಟದಲ್ಲಿ ಕೂಡ ಏರಿಕೆಯಾಗಿದ್ದು, ನದಿ ತುಂಬಿ ಹರಿಯುತ್ತಿದೆ.