ಸರ್ವರ್ ಸಮಸ್ಯೆಯಿಂದ ಜನ ಹೈರಾಣ

ಸರ್ವರ್ ಸಮಸ್ಯೆಯಿಂದ ಜನ ಹೈರಾಣ
Published on

ಎಂ.ಪವನ್‌ಕುಮಾರ್ ಕೊಳ್ಳೇಗಾಲ
ಪಡಿತರಚೀಟಿ ತಿದ್ದುಪಡಿ ಪ್ರಕ್ರಿಯೆಗೆ ಸರ್ವರ್ ಗ್ರಹಣ ಹಿಡಿದಂತಾಗಿದ್ದು, ನಿತ್ಯವೂ ಜನರು ಕಚೇರಿಗೆ ಅಲೆಯುವಂತಾಗಿದೆ.

ವಾರದಲ್ಲಿ ಕೇವಲ ಒಂದು ಗಂಟೆ ಸರ್ವರ್ ಸೌಲಭ್ಯ ದೊರಕುತ್ತಿದ್ದು, ಅವ್ಯವಸ್ಥೆ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಜಾರಿ ನಂತರ ಪಡಿತರ ಚೀಟಿಯಲ್ಲಿನ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಜನರು ಸೇವಾ ಕೇಂದ್ರಗಳತ್ತ ಮುಗಿ ಬೀಳುತ್ತಿದ್ದಾರೆ.
ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಪಡೆಯಲು ಪಡಿತರ ಕಾರ್ಡ್ ಅತ್ಯಗತ್ಯವಾಗಿದೆ. ಸರ್ವರ್ ಸಮಸ್ಯೆಯಿಂದ ನೈಜ ಫಲಾನುಭವಿಗಳಿಗೆ ಸೌಲಭ್ಯ ದೊರಕುತ್ತಿಲ್ಲ. ಹೆಸರು ಸೇರ್ಪಡೆ, ವರ್ಗಾವಣೆ, ವಿಳಾಸ ಬದಲಾವಣೆ, ಆಧಾರ್ ಅಪ್ಡೇಟ್ ಇತ್ತಿತರ ಕಾರ್ಯಗಳಿಗೆ ಸಾರ್ವಜನಿಕರು ನಿತ್ಯ ಅಲೆಯುವಂತಾಗಿದೆ. ಗ್ರಾಮೀಣ ಪ್ರದೇಶ ವ್ಯಾಪ್ತಿಯ ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ನಿತ್ಯ ಕಾಣುವ ಸಮಸ್ಯೆಗಳಿವಾಗಿದ್ದು, ಜನರು ಸಮಸ್ಯೆಯ ಕುರಿತು ತಾಲೂಕು ಕಚೇರಿಗೆ ತೆರಳಿದರೆ ಅಲ್ಲಿ ಕೂಡ ಸಕಾರಾತ್ಮಕ ಸ್ಪಂದನೆ ದೊರೆಯುತ್ತಿಲ್ಲ.

ವಾರದಲ್ಲಿ ಒಂದು ಗಂಟೆಯಂತೆ ಸರ್ವರ್
ಸರ್ಕಾರಿ ಯೋಜನೆಗಳ ಉಪಯೋಗಕ್ಕಾಗಿ ಜನರು ನಿತ್ಯದ ಕೆಲಸ ಬಿಟ್ಟು, ಸೇವಾ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಲ್ಲುವಂತಾಗಿದೆ. ಪಡಿತರಚೀಟಿ ತಿದ್ದುಪಡಿ ಪ್ರಕ್ರಿಯೆಗೆ ವಾರದಲ್ಲಿ 1 ಗಂಟೆ ಮಾತ್ರ ಸರ್ವರ್ ಒದಗಿಸಲಾಗುತ್ತಿದೆ ಎಂದು ಸೇವಾ ಕೇಂದ್ರಗಳ ಸಿಬ್ಬಂದಿ ಹೇಳುತ್ತಿದ್ದಾರೆ.

ಬಡ ಜನರ ಆರೋಗ್ಯ ಸೌಲಭ್ಯಗಳಿಗೂ ಕುತ್ತು
ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಪಿಎಲ್, ಬಿಪಿಎಲ್ ಕಾರ್ಡ್‌ದಾರರಿಗೆ ವಿವಿಧ ಯೋಜನೆಗಳ ಮೂಲಕ ಆರೋಗ್ಯ ಸೇವೆ ಒದಗಿಸುತ್ತಿವೆ. ಆಯುಷ್ಮ್ಮಾನ್ ಭಾರತ್, ಆರೋಗ್ಯ ಕರ್ನಾಟಕ (ಎಬಿಆರ್‌ಕೆ) ಇನ್ನಿತರ ಆರೋಗ್ಯ ಸೇವೆಗಳನ್ನು ಪಡೆಯುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಸರ್ವರ್ ಸಮಸ್ಯೆಯಿಂದ ಈ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.

ವಿದ್ಯಾರ್ಥಿಗಳಿಗೂ ಸಮಸ್ಯೆ
ವಿದ್ಯಾರ್ಥಿಗಳು ಶಾಲೆ, ಕಾಲೇಜು ದಾಖಲಾತಿಗೆ ಹಾಗೂ ವಿದ್ಯಾರ್ಥಿ ವೇತನಕ್ಕೆ ಆದಾಯ ಮತ್ತು ಜಾತಿ ಪ್ರಮಾಣಪತ್ರ ಸಲ್ಲಿಸುವುದು ಅತ್ಯಗತ್ಯವಾಗಿದೆ. ಇವುಗಳನ್ನು ಪಡೆಯಲು ಕೂಡ ಸರ್ವರ್ ಸಮಸ್ಯೆಯಿಂದ ಸಾಧ್ಯವಾಗುತ್ತಿಲ್ಲ. ಇದರಿಂದ ಬಡ ವಿದ್ಯಾರ್ಥಿಗಳ ಭವಷ್ಯಕ್ಕೂ ತೊಂದರೆ ಉಂಟಾಗುತ್ತಿದೆ. ಪಾಲಕರು ನಿತ್ಯ ಸೇವಾ ಕೇಂದ್ರದ ಎದುರು ಸಾಂಗಾ ಹಾಕುವಂತಾಗಿದೆ.
ಇತ್ತೀಚಿನ ದಿನಗಳಲ್ಲಿ ಪ್ರತಿ ಚಟುವಟಿಕೆಗಳು ತಂತ್ರಾಂಶದ ಆಧಾರದಲ್ಲೇ ನಡೆಯುತ್ತಿವೆ. ಯಾವುದೇ ಕೆಲಸಗಳು ಆಗಬೇಕಾದರೆ, ಸೇವಾ ಕೇಂದ್ರಗಳತ್ತ ತೆರಳುವುದು ಅನಿವಾರ್ಯವಾಗಿದೆ. ಸೇವಾ ಕೇಂದ್ರದ ಸಿಬ್ಬಂದಿ ಕೆಲಸಕ್ಕೆ ಬಂದು ಕಾದು ಕುಳಿತು ವಾಪಸ್ಸಾಗುತ್ತಿದ್ದಾರೆ. ಸಾರ್ವಜನಿಕರ ಬಳಿ ಮೊಬೈಲ್ ಸಂಖ್ಯೆ ಪಡೆದುಕೊಂಡು ಸರ್ವರ್ ಬಂದಾಗ ಕರೆ ಮಾಡುವುದಾಗಿ ಸಿಬ್ಬಂದಿ ಹೇಳಿ ಕಳುಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net