

ಶೃಂಗೇರಿ: ತಾಲೂಕಿನಲ್ಲಿ ವ್ಯಾಪಕ ಗಾಳಿ, ಮಳೆಯಿಂದ ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ.
ವಿದ್ಯುತ್ ಪೂರೈಕೆ ಇಲ್ಲದಿರುವುದರಿಂದ ಹಲವೆಡೆ ಕುಡಿಯುವ ನೀರಿಗೂ ಅಡಚಣೆ ಉಂಟಾಗಿದೆ. ಬಹುತೇಕ ಮನೆಯಲ್ಲಿ ಯುಪಿಎಸ್‌ಕೂಡ ನಿಷ್ಕ್ರೀಯವಾಗಿದ್ದು, ಮೊಬೈಲ್‌ಗಳಲ್ಲಿ ಚಾರ್ಚ್ ಇಲ್ಲದೇ ಜನರು ಪರದಾಡಿದರು. ಪಟ್ಟಣದ ಅನೇಕ ಹೋಟೆಲ್, ಮೆಸ್‌ಗಳು, ಸಣ್ಣ ಕೈಗಾರಿಕೆಗಳು ಮುಚ್ಚಿದ್ದವು. ಬೇಗಾರು ಗ್ರಾಪಂ ವ್ಯಾಪ್ತಿಯ ಮೀಗಾ ಗ್ರಾಮದ ಚಿಕಳಿಮನೆ ಕೃಷಿಕ ಸಿ.ಎಸ್.ಕೃಷಮೂರ್ತಿ ಅವರ ತೋಟದಲ್ಲಿ ಮರ ಉರುಳಿ ಬಿದ್ದು ಹಲವಾರು ಅಡಕೆ ಮರಗಳು ಧರೆಗೆ ಉರುಳಿವೆ. ತಾಲೂಕಿನ ಕಲ್ಕಟ್ಟೆ ಅನ್ನಪೂರ್ಣ ಅವರ ಮನೆ ಸಂಪೂರ್ಣ ಕುಸಿತಗೊಂಡಿದೆ.
ಶನಿವಾರ ಬೆಳಗ್ಗೆ ಮಳೆಯಾಗದಿದ್ದರೂ ಮೋಡ ಕವಿದ ವಾತಾವರಣ ಮುಂದುವರಿದಿದೆ. ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಬ್ಯಾಂಕ್, ಕಚೇರಿಗಳಿಗೆ ರಜೆ ಇದ್ದ ಕಾರಣ ಮುಖ್ಯಬೀದಿ ಹೆಚ್ಚು ಜನಸಂಚಾರವಿಲ್ಲದೇ ಬಿಕೋ ಎನ್ನುತ್ತಿತ್ತು. ಸ್ಥಗಿತಗೊಂಡ ವಿದ್ಯುತ್ ಪೂರೈಕೆ ಮಧ್ಯಾಹ್ನ ಪ್ರಾರಂಭಗೊಂಡಿದ್ದು ಯುಪಿಎಸ್, ಮೊಬೈಲು ಚಾರ್ಜ್ ಮಾಡುವುದರಲ್ಲಿ ಜನರು ನಿರತರಾಗಿದ್ದರು.