ಕಾಡಾನೆಗಳ ಕಾಟದಿಂದ ಬೇಸತ್ತ ಜನರು

10 vpt 1.2
Published on

 ವಿರಾಜಪೇಟೆ: ಇಲ್ಲಿ ಬಿಟ್ಟಂಗಾಲ ಕಂಡಂಗಾಲ ಗ್ರಾಮದಲ್ಲಿ ಕೆಲ ದಿನಗಳಿಂದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು ಕಾಫಿ, ತೆಂಗು, ಅಡಕೆ, ಬಾಳೆ ಗಿಡಗಳನ್ನು ಹಾನಿ ಮಾಡಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟು ಮಾಡಿದೆ.

ವಿರಾಜಪೇಟೆ ತಾಲೂಕು ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಡಂಗಾಲ 1ನೇ ರುದ್ರಗುಪ್ಪೆ ಗ್ರಾಮದ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ದಾಳಿಯಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ.

ಸತತ ಎರಡು ದಿನಗಳಿಂದ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕಾಫಿ ತೋಟದಲ್ಲಿರುವ ಫಸಲು ನೀಡಲು ಸಿದ್ದವಾಗಿದ್ದ ಬಾಳೆಗಿಡಗಳು ತೆಂಗು ಅಡಿಕೆ ಗಿಡಗಳು ನೆಲಕಚ್ಚಿವೆ. ಗ್ರಾಮದ ಎಚ್.ಎ.ಸರಸ್ವತಿ, ಬಲ್ಲಡಿಚಂಡ ರವಿ ಸೋಮಯ್ಯ, ಬಲ್ಲಡಿಚಂಡ ಲೋಕಾನಾಥ್ ಠೋಮಿ ರೋಜಾರಿಯೋ, ಮಂದಮಾಡ ಹಸನ್ ಮತ್ತು ಮಂದಮಾಡ ಮೊಹಮ್ಮದ್ ಅವರ ಕಾಫಿ ತೋಟಗಳು ಕಾಡಾನೆಗಳ ದಾಳಿಗೆ ಸಿಲುಕಿ ಹಾನಿಗೆ ಒಳಗಾಗಿದೆ.

ಕಾಫಿ ತೋಟಗಳು ಇದೀಗ ಕಾಡಾನೆಗಳ ಆವಾಸ ಸ್ಥಾನವಾಗಿ ಪರಿಣಮಿಸಿದೆ. ಆಹಾರ ಅರಸಿ ನಾಡಿಗೆ ಲಗ್ಗೆಯಿಡುತ್ತಿರುವ ಕಾಡಾನೆಗಳು ತೋಟಗಳನ್ನು ಧ್ವಂಸ ಮಾಡುತ್ತಿವೆ. ತೋಟದ ಕಾರ್ಮಿಕರು ಮಾಲೀಕರು ತೋಟಕ್ಕೆ ತೆರಳಲು ಜೀವಭಯದಿಂದ ಹಿಂದೇಟು ಹಾಕುತ್ತಿದ್ದಾರೆ. ಕಾರ್ಯಾಚರಣೆ ಮೂಲಕ ಕಾಡಾನೆಗಳನ್ನು ಕಾಡಿಗೆ ಅಟ್ಟಿದರೂ ಕಾಡಾನೆಗಳು ಹಿಂದಿರುಗಿ ಬರುತ್ತಿವೆ. ಕಾರ್ಯಚರಣೆಯ ಹೆಸರಿನಲ್ಲಿ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಕಾಡಾನೆಗಳನ್ನು ಅಟ್ಟಲಾಗುತ್ತಿದೆ. ಇದರಿಂದ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ದೂಡಲಾಗುತ್ತಿದೆ ಎಂದು ಗ್ರಾಮಸ್ಥ ಲೋಕನಾಥ್ ಅಳಲು ತೋಡಿಕೊಂಡಿದ್ದಾರೆ.

ಕಾಡಾನೆಗಳ ಉಪಟಳವನ್ನು ನಿಯಂತ್ರಿಸಲು ಅರಣ್ಯ ಇಲಾಖೆ, ಸ್ಥಳೀಯ ಆಡಳಿತ ಮತ್ತು ಸರ್ಕಾರ ವಿಫಲರಾಗಿದೆ. ವೈಜ್ಞಾನಿಕ ರೀತಿಯಲ್ಲಿ ಕಾಡಾನೆಗಳನ್ನು ನಿಯಂತ್ರಿಸುವಲ್ಲಿ ಇಲಾಖೆಯು ಮುಂದಾಗಬೇಕು. ಕಾಡಾನೆಗಳಿಂದ ನಮ್ಮನ್ನು ರಕ್ಷಣೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net