

ವಿಜಯಪುರ: ನಗರದ ವಾರ್ಡ್ ನಂ. 29 ರ ರಾಮನಗರ ಬಡಾವಣೆಯಲ್ಲಿ ಮಳೆ ಅವಾಂತರದಿಂದ ಸಂಕಷ್ಟಕ್ಕೀಡಾದ ಜನ ಶನಿವಾರ ರಸ್ತೆಗಿಳಿದು ಹೋರಾಟ ನಡೆಸಿದರು.
ಪ್ರತಿ ಮಳೆಗಾಲದಲ್ಲಿ ರಾಮನಗರ, ನೆಹರು ನಗರ, ಕನ್ಯಾನ ನಗರ ಸೇರಿದಂತೆ ವಿವಿಧ ಬಡಾವಣೆ ನಿವಾಸಿಗಳು ನರಕಯಾತನೆ ಅನುಭವಿಸುವಂತಾಗಿದೆ. ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಮನೆಗಳು ಜಲಾವೃತಗೊಳ್ಳುತ್ತಿವೆ. ಮನೆಯೊಳಗೆ ನೀರು ನುಗ್ಗುತ್ತಿದೆ. ವಿದ್ಯುತ್ ಮೋಟಾರ್‌ಗಳಿಂದ ನೀರು ತೆರವುಗಳಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ರಾತ್ರಿಯಿಡೀ ನೀರು ಹೊರಹಾಕುವುದೇ ಕೆಲಸವಾಗಿದೆ ಎಂದು ತೀವ್ರ ಆಕ್ರೋಶ ಹೊರಹಾಕಿದರು.
ಸ್ಥಳಕ್ಕೆ ಸಿಪಿಐ ಮಲಯ್ಯ ಮಠಪತಿ, ಜಲನಗರ ಪಿಎಸ್‌ಐ ಮಹೇಶ ಸಂಖ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರಾದರೂ ಪ್ರಯೋಜನವಾಗಲಿಲ್ಲ. ಬಳಿಕ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ವಾರ್ಡ್ ಸದಸ್ಯ ಗಿರೀಶ ಬಿರಾದಾರ ಭೇಟಿ ನೀಡಿ ಪ್ರತಿಭಟನಾಕಾರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ತ್ವರಿತ ಕಾಮಗಾರಿ ಕೈಗೊಳ್ಳುವ ಭರವಸೆ ಮೇರೆಗೆ ಹೋರಾಟ ಹಿಂಪಡೆದರು.
ಸ್ಥಳೀಯ ನಿವಾಸಿಗಳಾದ ಸತೀಶ, ಪಿ., ಅಮರನಾಥ ಕೆಂಭಾವಿ, ಮಲ್ಲು ಕಂಬಾರ, ರಾಕೇಶ ನಾಗರಾಳ, ಶೇಕು ಬಡಿಗೇರ, ಸುವರ್ಣ ಪಾಟೀಲ, ಮಂಜುಳಾ ನಾಗರಾಳ, ಭಾಗ್ಯಶ್ರೀ ಜೇವರಗಿ, ರಂಗರಾವ ದೇಶಪಾಂಡೆ ಸೇರಿದಂತೆ ಹಲವರು ಸ್ಥಳದಲ್ಲಿದ್ದು ಸಮಸ್ಯೆಗಳ ಸುರಿಮಳೆಗೈಯ್ದರು.