

ಬೆಳಗಾವಿ: ಮಳೆ ಕೊರತೆಯಿಂದ ತೀವ್ರ ಬರಕ್ಕೆ ತುತ್ತಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರುತ್ತಿದ್ದು, ಜನರು ಮನೆಯಿಂದ ಹೊರಗೆ ಕಾಲಿಡಲು ಬೆದರುವಂತಾಗಿದೆ. ದಾಖಲೆ ಮಟ್ಟದಲ್ಲಿ ತಾಪಮಾನ ಏರುಗತಿ ಕಾಣುತ್ತಿದ್ದು, ಕಿತ್ತೂರು ಕರ್ನಾಟಕ ಭಾಗದ ಜನರು ತತ್ತರಿಸಿದ್ದಾರೆ.
ಎರಡು ದಿನಗಳ ಅವಧಿಯಲ್ಲಿ ಬೆಳಗಾವಿ ಮಹಾನಗರದಲ್ಲಿ ಅತ್ಯಧಿಕ 38.4 ರಿಂದ ಗ್ರಾಮೀಣ ಭಾಗಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಮೂಲಕ ದಾಖಲೆ ಬರೆದಿದೆ. ಪ್ರತಿ ವರ್ಷ ಫೆಬ್ರವರಿ ಮೊದಲ ವಾರದಲ್ಲಿ ಆರಂಭವಾಗುವ ಬಿಸಿಲು ಮಾರ್ಚ್, ಏಪ್ರಿಲ್‌ನಲ್ಲಿ ಅಲ್ಪ ಪ್ರಮಾಣದ ಹೆಚ್ಚಳ ಕಾಣುತಿತ್ತು. ಮೇ ಮೊದಲ ವಾರದಲ್ಲಿ ಬಿಸಿಲಿ ಅರ್ಭಟ ಜೋರಾಗುತ್ತಿತ್ತು. ಆದರೆ, ಈ ಬಾರಿ ಮಾರ್ಚ್‌ನಲ್ಲಿ ಬಿಸಿಲಿ ತಾಪಮಾನ ಹೆಚ್ಚಳವಾಗಿದ್ದು, ಏಪ್ರಿಲ್ ಮೊದಲ ವಾರದಲ್ಲಿ ಅತ್ಯಧಿಕ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
2016ರಲ್ಲಿ ಬೆಳಗಾವಿಯಲ್ಲಿ ಅತ್ಯಧಿಕ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಈ ಬಾರಿ ಬಿಸಿಲು ಎಲ್ಲ ದಾಖಲೆ ಮುರಿದು ಹಾಕಿದೆ. ಬೆಳಗ್ಗೆ 7.30 ರಿಂದ ಆರಂಭವಾಗುತ್ತಿರುವ ಬಿಸಿಲು ಸಂಜೆ 6.30 ಗಂಟೆಯವರೆಗೆ ಜನರನ್ನು ಕಾಡುತ್ತಿದೆ. ಮಧ್ಯಾಹ್ನ 12 ರಿಂದ ಸಂಜೆ 4.30 ಗಂಟೆಯ ವೇಳೆ ಜನರು ಮನೆಯಿಂದ ಹೊರಬರಲು ಹಿಂಜರಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದಿನದ 24 ಗಂಟೆಗಳಲ್ಲಿ ಮನೆಗಳಲ್ಲಿ, ಕಚೇರಿ,ಅಂಗಡಿ ಮುಂಗಟ್ಟುಗಳಲ್ಲಿ ಕೂಲರ್, ಫ್ಯಾನ್, ಎಸಿ ಚಾಲ್ತಿಯಲ್ಲಿಡುವ ಪರಿಸ್ಥಿತಿ ಎದುರಾಗಿದೆ.
ಎರಡು ವಾರಗಳಿಂದ ಬಿಸಿಲಿ ತಾಪಮಾನದ ಜತೆಗೆ ವಾತಾವರಣದಲ್ಲಿ ಬಿಸಿ ಗಾಳಿ ಪ್ರಮಾಣ ಹೆಚ್ಚಳವಾಗಿದೆ. ಬಿಸಿಲಿನಲ್ಲಿ ಹೊರ ಹೋದವರಿಗೆ ಬಿಸಿ ಗಾಳಿಯಿಂದ ನೆಗಡಿ, ಜ್ವರ, ತಲೆ ನೋವು, ಚರ್ಮದ ಸಮಸ್ಯೆ, ಮೂಗಿನಿಂದ ರಕ್ತ ಬರುವುದು, ಕಣ್ಣುರಿ, ಗ್ಯಾಸ್‌ಟ್ರಬಲ್ ಸೇರಿ ನಾನಾ ಸಮಸ್ಯೆಗಳು ಕಾಡುತ್ತಿವೆ. ಅಲ್ಲದೆ, ಬಿಸಿ ಗಾಳಿ ಪರಿಣಾಮ 1ರಿಂದ 10 ವರ್ಷದ ಮಕ್ಕಳು ನೆಗಡಿ, ಜ್ವರದಂತಹ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.
ತಾಪಕ್ಕೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
ಪದೇ ಪದೆ ನೀರು ಸೇವಿಸಬೇಕು. ನೀರಿನ ಅಂಶ ಹೆಚ್ಚಿರುವ ಹಣ್ಣು ಸೇವಿಸಬೇಕು. ಬಳಿ ಬಟ್ಟೆ, ಕಾಟನ್ ಬಟ್ಟೆ ಹೆಚ್ಚು ಧರಿಸಬೇಕು. ಸಣ್ಣ ಮಕ್ಕಳು ಬಿಸಿಲಿನಲ್ಲಿ ಹೊರಗಡೆ ಹೋಗದಂತೆ ನೋಡಿಕೊಳ್ಳಬೇಕು. ನೆರಳು, ತಂಪಾದ ಪ್ರದೇಶದಲ್ಲಿಯೇ ಹೆಚ್ಚು ಇರಲು ಪ್ರಯತ್ನಿಸಬೇಕು. ಮಣ್ಣಿನ ಗಡಿಗೆಯಲ್ಲಿ ನೀರು ಸಂಗ್ರಹಿಸಿ ಬಳಕೆ ಮಾಡಬೇಕು.