

ನವಲಗುಂದ: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸಾಕುನಾಯಿಗಳು ಹಿಂಡು ಹಿಂಡಾಗಿ ಓಡಾಡುತ್ತ ಜನರ ಮೇಲೆ ದಾಳಿ ಮಾಡುತ್ತಿದ್ದು, ಮಕ್ಕಳು, ಜನರು ಒಬ್ಬಂಟಿಯಾಗಿ ಸಂಚರಿಸಲು ಭಯಪಡುವಂತಾಗಿದೆ.
ಬಸವೇಶ್ವರ ನಗರ, ಬಸ್ತಿ ಪ್ಲಾಟ್, ಜೋಶಿ ಪ್ಲಾಟ್, ಗೌಡರ ಪ್ಲಾಟ್, ಮಿಲಿಟರಿ ಕಾಲನಿ ಹಾಗೂ ವಿವಿಧ ಬಡಾವಣೆ ಸೇರಿದಂತೆ ಪಟ್ಟಣದ ವ್ಯಾಪ್ತಿಯಲ್ಲಿ ಸಾಕುನಾಯಿ ಹಾವಳಿ ಹೆಚ್ಚಾಗಿದೆ. ನಾಯಿಗಳ ಮಾಲೀಕರು ಅವುಗಳನ್ನು ಮುಕ್ತವಾಗಿ ಓಡಾಡಲು ಬಿಡುತ್ತಿರುವುದೇ ಸಮಸ್ಯೆಗೆ ಕಾರಣವಾಗಿದೆ.
ಬೆಳಗಾದರೆ ಸಾಕು ಗಲ್ಲಿ ಗಲ್ಲಿಗಳಲ್ಲಿ ತಿರುಗಾಡುವ ನಾಯಿಗಳ ಹಿಂಡು, ಬೈಕ್ ವಾಹನ ಸವಾರರು, ಒಬ್ಬಂಟಿಯಾಗಿ ಓಡಾಡುವ ಜನರ ಮೇಲೆ ದಾಳಿ ಮಾಡುತ್ತವೆ. ಕೆಲ ನಾಯಿಗಳು ಬೈಕ್, ಕಾರುಗಳ ಬೆನ್ನತ್ತಿ ಹೋಗುವುದರಿಂದ ಸವಾರರು ಭಯಪಡುತ್ತಿದ್ದಾರೆ. ರಸ್ತೆಯಲ್ಲಿ ಚಿಕ್ಕಮಕ್ಕಳು, ವಯೋವೃದ್ಧರು ಸಂಚಾರ ಮಾಡಲು ಹಿಂದೇಟು ಹಾಕುವಂತಾಗಿದೆ.
ಬೆಳಗಿನಜಾವ ಪತ್ರಿಕೆ ವಿತರಣೆ ಮಾಡಲು ಹಾಗೂ ಚಿಕ್ಕಮಕ್ಕಳು ಅಂಗಡಿಗಳಿಂದ ಬಿಸ್ಕಿಟ್, ಬನ್ ತರುವುದಕ್ಕೂ ಹೆದರುತ್ತಿದ್ದಾರೆ. ರಾತ್ರಿ ವೇಳೆಯಲ್ಲಿ ನಾಯಿಗಳು ಪರಸ್ಪರ ಕಚ್ಚಾಡುವ ಜತೆಗೆ ಕೂಗಾಡಿ ನಿವಾಸಿಗಳ ನಿದ್ದೆಗೆಡಿಸುತ್ತಿವೆ. ಈಗಾಗಲೇ ಹಲವರು ನಾಯಿ ದಾಳಿಯಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನಾಯಿಗಳು ಬೆನ್ನತ್ತಿ ಬರುವುದರಿಂದ ಬೈಕ್ ಸವಾರರು ಹೆದರಿ ಬಿದ್ದು ಗಾಯಗೊಂಡ ಘಟನೆಯೂ ನಡೆದಿವೆ. ಈ ಕುರಿತು ಪುರಸಭೆಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.
ನಾಯಿಗಳ ಮಾಲೀಕರಿಗೆ ಪುರಸಭೆ ಅಧಿಕಾರಿಗಳು ನೋಟಿಸ್ ನೀಡಿ, ತಮ್ಮ ಮನೆ ಕಾಂಪೌಂಡ್ನಿಂದ ನಾಯಿಗಳನ್ನು ಹೊರಗಡೆ ಬಿಡದಂತೆ ತಾಕೀತು ಮಾಡಬೇಕು. ಬೀದಿನಾಯಿಗಳಾಗಿದ್ದರೆ ಸ್ಥಳಾಂತರಿಸಬೇಕು ಎಂದು ಪಟ್ಟಣದ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಈಗಾಗಲೇ ಕೆಲ ಬಡಾವಣೆಗಳ ಸಾಕುನಾಯಿ ಮಾಲೀಕರಿಗೆ ಅವುಗಳನ್ನು ಹೊರಗಡೆ ಬಿಡದಂತೆ ತಿಳಿವಳಿಕೆ ಪತ್ರ ನೀಡಲಾಗಿದೆ. ಪಟ್ಟಣದೆಲ್ಲೆಡೆ ಪುರಸಭೆ ವಾಹನದ ಮೂಲಕ ಜಾಗೃತಿ ಮೂಡಿಸಲಾಗುವುದು. | ವೆಂಕಟೇಶ ನಾಗನೂರ, ಮುಖ್ಯಾಧಿಕಾರಿ ಪುರಸಭೆ ನವಲಗುಂದ ನಸುಕಿನ ಜಾವ ಪತ್ರಿಕೆ ವಿತರಿಸುವ ವೇಳೆ ನನಗೆ ಸೇರಿ ಹಲವು ಮಕ್ಕಳಿಗೆ ಹಾಗೂ ವಾಯುವಿಹಾರಿಗಳಿಗೆ ನಾಯಿ ಕಚ್ಚಿ ಗಾಯ ಗೊಳಿಸಿದ ಉದಾಹರಣೆ ಸಾಕಷ್ಟಿವೆ. ನಾಯಿ ಕಚ್ಚಿದರೆ ಎರಡು ತಿಂಗಳವರೆಗೂ ಚುಚ್ಚಮದ್ದು ಪಡೆದುಕೊಳ್ಳಬೇಕು. ಈ ಕುರಿತು ಪುರಸಭೆ ಶೀಘ್ರ ಕ್ರಮ ಕೈಗೊಳ್ಳಬೇಕು. | ಸಿದ್ದನಗೌಡ ಪಾಟೀಲ, ಪ್ರತಿಕಾ ವಿತರಕ ನವಲಗುಂದ