

ವಿಕ್ರಮ ನಾಡಿಗೇರ ಧಾರವಾಡ
ಅಬ್ಬ ಏನ್ ಬಿಸಿಲು, ಶಿವ ಶಿವಾ..! ಇದು ಹು-ಧಾ ಅವಳಿನಗರದ ಜನರ ಉದ್ಗಾರ. ಪ್ರಸಕ್ತ ವರ್ಷದಲ್ಲಿ ಬೇಸಿಗೆ ಆರಂಭದಲ್ಲೇ ಬಿಸಿಲಿನ ಅಬ್ಬರ ಶುರುವಾಗಿದೆ. ದಿನೇ ದಿನೇ ಬಿಸಿಲಿನ ಪ್ರಖರತ ಹೆಚ್ಚಾಗುತ್ತಿರುವುದರಿಂದ ಜನರು ಹೈರಾಣಾಗಿದ್ದಾರೆ.
ತಂಪು ವಾತಾವರಣಕ್ಕೇ ಪ್ರಸಿದ್ಧಿಯಾಗಿರುವ ಧಾರವಾಡ ಜಿಲ್ಲೆಯ ತಾಪಮಾನ ಸಾಮಾನ್ಯವಾಗಿ ಏಪ್ರಿಲ್, ಮೇ ತಿಂಗಳಲ್ಲಿ 40 ಡಿಗ್ರಿವರೆಗೂ ಏರಿಕೆಯಾಗುತ್ತದೆ. ಆದರೆ ಬೇಸಿಗೆ ಆರಂಭದಲ್ಲೇ ಬಿಸಿಲಿ ಅಬ್ಬರ ಶುರುವಾಗಿದ್ದು, ಮಾರ್ಚ್ ಮೊದಲ ವಾರದಲ್ಲೇ 38 ಡಿಗ್ರಿ ತಲುಪಿರುವುದು ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.
ಈಗಾಗಲೇ 40ರ ಹತ್ತಿರಕ್ಕೆ ಬಂದಿರುವ ತಾಪಮಾನ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಳವಾಗಲಿದೆ. ಹೀಗಾಗಿ ಮುಂದಿನ 2-3 ತಿಂಗಳು ಇನ್ಯಾವ ಸ್ಥಿತಿ ಇರಲಿದೆ ಎಂಬುದು ಊಹಿಸುಕೊಳ್ಳುವುದೂ ಕಷ್ಟ ಎನ್ನುವಂತಾಗಿದೆ. ಜಿಲ್ಲೆಯಲ್ಲಿ ಫೆಬ್ರವರಿ ಅತ್ಯಂದಿಂದಲೇ ಅಂದಾಜು 33-35 ಡಿಗ್ರಿ ಆಸುಪಾಸಿನಲ್ಲಿದ್ದ ತಾಪಮಾನ ಮಾ. 9ರಂದು 38ಕ್ಕೆ ತಲುಪಿದೆ. ಬೆಳಗ್ಗೆ 11 ಗಂಟೆಗೆ ಆರಂಭವಾಗುವ ಬಿರು ಬಿಸಲು ಮಧ್ಯಾಹ್ನದ ಹೊತ್ತಿಗೆ ಮತ್ತಷ್ಟು ಹೆಚ್ಚುತ್ತಿದ್ದು, ಜನರು ಮನೆಯಿಂದ ಹೊರ ಬರಲು ಪರದಾಡುವಂತಾಗಿದೆ. ಈಗಾಗಲೇ ಬಿಸಿಲಿನ ತಾಪಕ್ಕೆ ಬಸವಳಿದಿರುವ ಜನರು ಕೆಲ ಅನಾರೋಗ್ಯಗಳಿಗೆ ಸಹ ತುತ್ತಾಗುತ್ತಿದ್ದಾರೆ.
ಸದ್ಯ ಜಿಲ್ಲೆಯಲ್ಲಿ ದಾಖಲಾಗಿರುವ 38 ಡಿಗ್ರಿ ತಾಪಮಾನ ಮುಂದಿನ 5 ದಿನಗಳ ಕಾಲ ಮುಂದುವರೆಯಲಿದೆ. ನಂತರದ ದಿನಗಳಲ್ಲಿ 2 ರಿಂದ 3 ಡಿಗ್ರಿ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಹವಾಮಾನ ಇಲಾಖೆ ಅಧಿಕಾರಿಗಳು. ಬಿಸಿಲಿನ ತಾಪದ ಜತೆಗೆ ಶಾಖ ಸಂಬಂಧಿತ ಅನಾರೋಗ್ಯ ಜನರನ್ನು ಈಗಾಗಲೇ ಕಾಡುತ್ತಿದೆ. ತಾಪಮಾನ ಮತ್ತಷ್ಟು ಹೆಚ್ಚಾದರೆ ಪರಿಸ್ಥಿತಿ ಹೇಳತೀರದು.
ತಾಪಮಾನ ಏರಿಕೆ ಆಗುತ್ತಿದ್ದಂತೆ ಆರೋಗ್ಯ ಇಲಾಖೆ ಸಹ ಜನರ ಆರೋಗ್ಯಕ್ಕಾಗಿ ಮುನ್ನೆಚ್ಚರಿಕೆ ಕ್ರಮಗಳ ಮಾರ್ಗಸೂಚಿಗಳನ್ನು ನೀಡಿ ಜಾಗೃತಿ ಮೂಡಿಸುತ್ತಿದೆ. ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಹೊರ ಹೋಗುವುದು ತಪ್ಪಿಸುವಂತೆ ಸಲಹೆ ನೀಡಿದೆ. ಈ ಅವಧಿಯಲ್ಲಿ ಒಳಾಂಗಣ ಹಾಗೂ ಹೊರಾಂಗಣ ಪ್ರದೇಶಗಳಲ್ಲಿ ಹೆಚ್ಚಿನ ಉಷ್ಣತೆಯಿಂದ ಮತ್ತು ಉಷ್ಣತೆಯ ಒತ್ತಡದಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಜ್ವರ, ತಲೆನೋವು, ಊತಗಳು, ಸ್ನಾಯು ಸೆಳೆತ, ಸುಸ್ತು, ಸೇರಿ ವಿವಿಧ ಸಮಸ್ಯೆಗಳು ಎದುರಾಗಬಹುದು.
ಬಿಸಿಲಿನ ಶಾಖದಿಂದ ಅತಿಯಾದ ಬಾಯಾರಿಕೆ, ವಾಕರಿಕೆ ಅಥವಾ ವಾಂತಿ, ಮೂತ್ರ ವಿಸರ್ಜನೆ ಸಮಸ್ಯೆ, ಏರುಗತಿ ಉಸಿರಾಟ ಸೇರಿ ವಿವಿಧ ಸಮಸ್ಯೆಗಳು ಸಹ ಕಾಣಿಸಿಕೊಳ್ಳಲಿವೆ. ಬಾಯಾರಿಕೆ ನಿರ್ಜಲೀಕರಣದ ಲಕ್ಷಣವಾಗಿದೆ. ಈ ಸಮಯದಲ್ಲಿ ಹೆಚ್ಚು ನೀರಿನಂಶ ಇರುವ ಹಣ್ಣು, ತರಕಾರಿ ಸೇವಿಸಬೇಕು. ಇದರ ಜತೆಗೆ ತಿಳಿ ಬಣ್ಣದ, ಸಡಿಲವಾದ ಹತ್ತಿಯ ಬಟ್ಟೆ ಧರಿಸುವುದು ಉತ್ತಮ ಎಂದು ಸಲಹೆಗಳನ್ನು ನೀಡಿದೆ.
*ದರದಲ್ಲಿ ಹೆಚ್ಚಳ: ಬೇಸಿಗೆ ಬಿಸಿಲಿಗೆ ದಾಹ ಹೆಚ್ಚುವುದರ ಜತೆ ಬೆವರು ಬಸಿಯುತ್ತದೆ. ಹಾಗಾಗಿ ಈಗಾಗಲೇ ಜನ ತಂಪು ಪಾನೀಯ, ಎಳನೀರು ಮೊರೆ ಹೋಗುತ್ತಿದ್ದಾರೆ. ಆದರೆ ಅವುಗಳ ಬೆಲೆ ಸಹ ಗಗನಕ್ಕೆ ಏರಿರುವುದು ಜನರನ್ನು ಸಂಕಷ್ಟಕ್ಕೀಡು ಮಾಡಿದೆ. ಕಲ್ಲಂಗಡಿ 30 ರೂ. ಕೆಜಿ., ಎಳೆನೀರು ಒಂದಕ್ಕೆ 50 ರೂ. ಗೆ ಏರಿದೆ. ಇದರಿಂದ ಜನರು ಬಿಸಿಲಿನಲ್ಲಿ ಮೈ ಸುಟ್ಟುಕೊಳ್ಳುವುದರ ಜತೆಗೆ ಕಿಸೆ ಸಹ ಸುಟ್ಟುಕೊಳ್ಳುವಂತಹ ಸ್ಥಿತಿ ಎದುರಾಗಿದೆ.
*ಹೆಚ್ಚಿದ ಬೇಡಿಕೆ: ಬಿಸಲಿನ ಸಮಯದಲ್ಲಿ ತಂಪು ನೀರು ಕುಡಿಯಲು ಹೆಚ್ಚಿನ ಜನರು ಮುಂದಾಗುತ್ತಾರೆ. ಆದರೆ ಫ್ರಿಜ್ನಲ್ಲಿನ ನೀರು ಸೇವಿಸದರೆ ಆರೋಗ್ಯಕ್ಕೂ ಸಮಸ್ಯೆ ಆಗಬಹುದು ಎಂಬ ಕಾರಣಕ್ಕೆ ಮಣ್ಣಿನ ಬಿಂದಿಗೆ, ತತ್ರಾಣಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಇದರಿಂದ ತತ್ರಾಣಿಗಳ ಮಾರಾಟವೂ ಜೋರಾಗಿದೆ.