ವಿದೇಶಿಗರ ಕಂಡು ಬೆಚ್ಚಿಬೀಳುತ್ತಿರುವ ಜನ, ಟಿಪ್ಪುಕೋಟೆ ಬಳಿ ಸುಳಿದಾಡುತ್ತಿರುವ ಪ್ರವಾಸಿಗರು

Devanahalli_fort_entrance
Published on

ಶಿವರಾಜ ಎಂ. ಬೆಂಗಳೂರು

ದೇವನಹಳ್ಳಿಯಲ್ಲಿರುವ ಟಿಪ್ಪುಸುಲ್ತಾನ್ ಕೋಟೆ ವೀಕ್ಷಣೆಗೆ ಆಗಮಿಸುತ್ತಿರುವ ವಿದೇಶಿಗರು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದ್ದಾರೆ. ಕರೊನಾ ಭೀತಿಯಲ್ಲಿರುವ ಜಿಲ್ಲೆಯಲ್ಲಿ ವಿದೇಶಿಗರ ಭೇಟಿ ಇಂಥದ್ದೊಂದು ಆತಂಕಕ್ಕೆ ಕಾರಣವಾಗಿರುವುದು ಕಂಡುಬರುತ್ತಿದೆ.

ದೇವನಹಳ್ಳಿ ಎರಡು ಕಾರಣಕ್ಕೆ ಗಮನ ಸೆಳೆಯುತ್ತಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿರುವುದು ಒಂದಾದರೆ, ಕರೊನಾ ಶಂಕಿತರನ್ನು ದೇವನಹಳ್ಳಿಯ ಆಕಾಶ್ ಮೆಡಿಕಲ್ ಕಾಲೇಜಿನಲ್ಲಿ ಪ್ರತ್ಯೇಕ ತಪಾಸಣೆಗೊಳಪಡಿಸುತ್ತಿರುವುದು ಮತ್ತೊಂದಾಗಿದೆ. ಈ ಹಿನ್ನೆಲೆಯಲ್ಲಿ ಕರೊನಾ ಆತಂಕ ದೇವನಹಳ್ಳಿ ಭಾಗದಲ್ಲಿ ಬೂದಿಮುಚ್ಚಿದ ಕೆಂಡದಂತಿದೆ. ಇದರ ನಡುವೆ ದೇವನಹಳ್ಳಿಯ ಐತಿಹಾಸಿಕ ಟಿಪ್ಪು ಕೋಟೆ ವೀಕ್ಷಣೆಗೆ ವಿದೇಶಿಗರ ಆಗಮನ ಮತ್ತಷ್ಟು ಭೀತಿಗೆ ಕಾರಣವಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ವಿದೇಶಿಗರ ಭೇಟಿ ತಪ್ಪಿಲ್ಲ: ಕರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಸಿನಿಮಾ, ಮಾಲ್, ಸಂತೆ ಜಾತ್ರೆ ಮತ್ತಿತರೆಡೆ ಜನಸಂದಣೆ ಸೇರದಂತೆ ನಿಷೇಧಿಸಿದೆ. ಪ್ರತಿನಿತ್ಯ ಏರ್‌ಪೋರ್ಟ್ ಮೂಲಕ ಬರುವ ವಿದೇಶಿ ಪ್ರಜೆಗಳ ಬಗ್ಗೆ ಗ್ರಾಮಾಂತರ ಜಿಲ್ಲೆ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಸ್ಕಾೃನಿಂಗ್ ಮತ್ತಿತರ ತಪಾಸಣೆ ನಡೆಸುತ್ತಿದೆ. ಆದರೂ ವಿದೇಶಿಗರನ್ನು ಕಂಡರೆ ಸ್ಥಳೀಯರು ಬೆಚ್ಚಿಬೀಳುವಂತಹ ಪರಿಸ್ಥಿತಿ ಇದೆ. ಪ್ರತಿನಿತ್ಯ ಕೆಲವು ವಿದೇಶಿಗರು ಟಿಪ್ಪುಕೋಟೆ ಬಳಿ ಸುಳಿದಾಡುತ್ತಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಆಸ್ಪತ್ರೆ ಬಳಿಕ ವೀಕ್ಷಣೆ: ವಿದೇಶಿ ಪ್ರಜೆಗಳನ್ನು ದೇವನಹಳ್ಳಿ ಆಕಾಶ್ ಮೆಡಿಕಲ್ ಕಾಲೇಜಿನಲ್ಲಿ ತಪಾಸಣೆಗೊಳಪಡಿಸಿದ ಬಳಿಕ ಕರೊನಾ ನೆಗೆಟಿವ್ ಎಂಬುದು ದೃಢಪಟ್ಟ ಬಳಿಕ ಅಲ್ಲಿಂದ ಕಳುಹಿಸಿಕೊಡಲಾಗುತ್ತಿದೆ. ಈ ವೇಳೆ ವಿದೇಶಿಗರು ಸ್ಥಳೀಯ ಪ್ರೇಕ್ಷಣಿಯ ಸ್ಥಳ ವೀಕ್ಷಣೆಗೆ ಆಸಕ್ತಿ ತೋರಿಸುತ್ತಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಕೆಲವೊಂದು ವಿದೇಶಿಗರು ಸಮೀಪದಲ್ಲಿರುವ ಟಿಪ್ಪು ಕೋಟೆ ವೀಕ್ಷಣೆಗೆ ಆಗಮಿಸುತ್ತಿದ್ದಾರೆ ಎನ್ನಲಾಗಿದೆ.

ಯಾವುದೇ ಮುಂಜಾಗ್ರತೆ ಇಲ್ಲ: ಟಿಪ್ಪು ಕೋಟೆ ಪ್ರವೇಶ ದ್ವಾರದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಹೊರತುಪಡಿಸಿ ಕರೊನಾಗೆ ಸಂಬಂಧಿಸಿದಂತೆ ಯಾವುದೇ ಮುನ್ನಚ್ಚರಿಕೆ ಕ್ರಮಕೈಗೊಂಡಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಕೂಡ ಆಸಕ್ತಿ ತೋರಿಸಿಲ್ಲ. ಪರಿಣಾಮವಾಗಿ ವಿದೇಶಿಗರು ನಿರಾಯಾಸವಾಗಿ ಓಡಾಡಿಕೊಂಡಿದ್ದಾರೆ. ಟಿಪ್ಪು ಕೋಟೆ ಬಳಿ ವಿದೇಶಿಗರನ್ನು ಕಂಡು ಸ್ಥಳೀಯರು ಮಾರುದ್ದ ಓಡುತ್ತಿರುವ ದೃಶ್ಯ ಕಂಡುಬರುತ್ತಿದೆ. ಇದು ವಿದೇಶಿಗರಿಗೂ ಮುಜುಗರಕ್ಕೆ ಕಾರಣವಾಗುತ್ತಿದೆ ಎನ್ನಲಾಗಿದೆ.

ಪುರಾತತ್ವ ಇಲಾಖೆಗೆ ಸೇರಿದ್ದು!:  ಟಿಪ್ಪು ಸುಲ್ತಾನ್ ಕೋಟೆ ಪುರಾತತ್ವ ಇಲಾಖೆಗೆ ಸಂಬಂಧಿಸಿದ್ದು, ಗ್ರಾಮಾಂತರ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಗೂ ಇದಕ್ಕೂ ಸಂಬಂಧವಿಲ್ಲ ಎನ್ನಲಾಗಿದೆ. ವಿದೇಶಿಗರ ಭೇಟಿ ತಡೆಯಬೇಕೋ ಇಲ್ಲವೋ ಎಂಬುದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಅಲ್ಲದೆ ಕೋಟೆ ಪ್ರವೇಶದ್ವಾರದ ಮೂಲಕವೇ ಗ್ರಾಮಗಳ ಪ್ರವೇಶವಿರುವುದರಿಂದ ಕೋಟೆ ದ್ವಾರ ನಿರ್ಬಂಧಿಸುವಂತೆಯೂ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ಬಂದಿಲ್ಲ. ಆದರೂ ಟಿಪ್ಪುಕೋಟೆ ಬಳಿ ಕರೊನಾ ಸೋಂಕು ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಕರೊನಾ ಬಗ್ಗೆ ಯಾವುದೇ ಆತಂಕ ಬೇಡ. ಎಚ್ಚರಿಕೆ ವಹಿಸುವುದು ಅಗತ್ಯ. ಡಾ.ಮಂಜುಳಾದೇವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ವಿದೇಶಿಗರು ಟಿಪ್ಪುಕೋಟೆ ವೀಕ್ಷಣೆಗೆ ಬಂದು ಹೋಗುವುದು ಸಾಮಾನ್ಯ. ಆದರೆ ಕರೊನಾ ಭೀತಿ ಹಿನ್ನೆಲೆಯಲ್ಲಿ ವಿದೇಶಿಗರನ್ನು ಕಂಡರೆ ಆತಂಕವಾಗುತ್ತದೆ. ಪರಿಸ್ಥಿತಿ ಸರಿಹೋಗುವವರೆಗೆ ಈ ಭಾಗದಲ್ಲಿ ವಿದೇಶಿಗರ ಭೇಟಿಗೆ ನಿರ್ಬಂಧ ಹಾಕುವುದು ಒಳಿತು. ಕರಿಸ್ವಾಮಿ, ದೇವನಹಳ್ಳಿ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net