

ಉಪ್ಪಿನಬೆಟಗೇರಿ: ಗ್ರಾಮದಲ್ಲಿ ಕಳೆದ ಎರಡ್ಮೂರು ದಿನಗಳಿಂದ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ನಿವಾಸಿಗಳು ಹೈರಾಣಾಗಿದ್ದಾರೆ.
ಈಗಾಗಲೇ ಬೇಸಿಗೆ ಆರಂಭವಾಗಿ ಗ್ರಾಮಕ್ಕೆ ಪೂರೈಕೆಯಾಗುವ ಕುಡಿಯುವ ನೀರು ಮತ್ತು ಅಲ್ಲಲ್ಲಿ ನೀರಿನ ತೊಟ್ಟಿಗಳನ್ನು ಮಾಡಿ ಅವುಗಳಿಗೆ ಕೊಳವೆ ಬಾವಿಗಳಿಂದ ನೀರು ಪೂರೈಸಿ ಸಾಕು ಪ್ರಾಣಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡಲಾಗಿದೆ. ಆದರೆ, ಮೇಲಿಂದ ಮೇಲೆ ವಿದ್ಯುತ್ ವ್ಯತ್ಯಯ ಉಂಟಾಗುವುದರಿಂದ ಜಾನುವಾರುಗಳಿಗೆ ಕುಡಿಯಲು ನೀರು ಇಲ್ಲದಂತಾಗಿ ರೈತರು ಕಂಗಾಲಾಗಿದ್ದಾರೆ. ಕಾಳು ಕಡಿಗಳನ್ನು ಮನೆಯಿಂದ ಗಿರಣಿಗೆ ಒಯ್ಯುವಷ್ಟರಲ್ಲಿ ಪವರ್ ಇಲ್ಲದಾಗಿರುತ್ತದೆ. ಆಹಾರ ಉತ್ಪನ್ನಗಳನ್ನು ಗಿರಣಿಯಲ್ಲಿಟ್ಟು ಕರೆಂಟ್ ಬರುವ ತನಕ ಕಾಯ್ದು ಕುಳಿತುಕೊಳ್ಳಬೇಕಾದ ಅನಿವಾರ್ಯ ಬಂದೊದಗಿದೆ. ಜನರು ಹಾಗೂ ಹಿಟ್ಟಿನ ಗಿರಣಿ ಮಾಲೀಕರು ರೋಸಿ ಹೋಗಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ವಿದ್ಯುತ್ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಮಾತ್ರವಲ್ಲದೆ, ಪ್ರತಿ ಗಂಟೆಗೆ ಐದಾರು ಬಾರಿ ವಿದ್ಯುತ್ ಸಂಪರ್ಕ ಕಡಿದುಕೊಳ್ಳುತ್ತಿದೆ. ಕಳೆದ ಕೆಲ ತಿಂಗಳ ಹಿಂದೆ ಲೋಡ್ಶೆಡ್ಡಿಂಗ್ನಿಂದಾಗಿ ಹಲವು ಮನೆಗಳಲ್ಲಿನ ಟಿವಿ, ಫ್ರಿಜ್, ಫ್ಯಾನ್ ಸೇರಿ ವಿದ್ಯುತ್ ಚಾಲಿತ ವಸ್ತುಗಳು ಸುಟ್ಟು ದುರಸ್ತಿ ಮಾಡಲಾಗದಷ್ಟು ಹಾನಿಗೀಡಾಗಿದ್ದವು. ಈಗಲೂ ಅದೇ ಭಯ ಗ್ರಾಮಸ್ಥರನ್ನು ಆವರಿಸಿದೆ.
ಮಳೆ ಇಲ್ಲದೆ, ಹೊಲದಲ್ಲಿ ಬೆಳೆದಿರುವ ತರಕಾರಿ ಸೇರಿ ಇತರೆ ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ಕೊಳವೆಬಾವಿಯ ಮೊರೆ ಹೋಗಿದ್ದು, ಮೇಲಿಂದ ಮೇಲೆ ವಿದ್ಯುತ್ ಸಂಪರ್ಕ ಕಡಿತ ಆಗುವುದರಿಂದ ಬೆಳೆಗಳು ಒಣಗುವ ಸ್ಥಿತಿ ಬಂದಿದೆ. ಗ್ರಾಮಕ್ಕೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಹಲವು ವರ್ಷಗಳ ಹಿಂದೆ ಯಾದವಾಡ ಮಾರ್ಗದ ರಸ್ತೆಯ ಪಕ್ಕದಲ್ಲಿ 33 ಕಿಲೋ ವ್ಯಾಟ್ ವಿದ್ಯುತ್ ಗ್ರಿಡ್ ನಿರ್ಮಾಣ ಮಾಡಿದ್ದು, ಅದು ಕೂಡ ಕಾರ್ಯನಿರ್ವಹಿಸುತ್ತಿದೆ. ಆದರೂ ವಿದ್ಯುತ್ ಸರಿಯಾಗಿ ಪೂರೈಕೆಯಾಗುತ್ತಿಲ್ಲ ಎಂದು ಹೆಸ್ಕಾಂ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಉಪ್ಪಿನಬೆಟಗೇರಿ 33 ಕೆವಿ ವಿದ್ಯುತ್ ಗ್ರಿಡ್ನಲ್ಲಿ ತಾಂತ್ರಿಕ ತೊಂದರೆಯಿಂದ ಒಂದೆರಡು ದಿನದಿಂದ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿ ಗ್ರಾಮ ಸೇರಿ ಸುತ್ತಲಿನ ಕೆಲ ಹಳ್ಳಿಗಳ ಹಾಗೂ ರೈತರ ಕೊಳವೆ ಬಾವಿಗಳ ಪಂಪ್ಸೆಟ್ಗಳಿಗೆ ವಿದ್ಯುತ್ ಕಡಿತವಾಗಿತ್ತು. ದುರಸ್ತಿ ಕಾರ್ಯ ನಡೆಯುತ್ತಿದ್ದು, ಸದ್ಯದಲ್ಲೆ ವಿದ್ಯುತ್ ಪೂರೈಕೆಯಾಗಲಿದೆ. | ಶಿವಾನಂದ ಗುಂಡಗೋವಿ ಸೆಕ್ಷನ್ ಆಫೀಸರ್, ಉಪ್ಪಿನಬೆಟಗೇರಿ
ಉಚಿತ ವಿದ್ಯುತ್ ನೀಡುವುದಾಗಿ ಅಧಿಕಾರಕ್ಕೇರಿದ ಕಾಂಗ್ರೆಸ್ ಈಗ ಕೇವಲ 30 ಯೂನಿಟ್ ಒಳಗೆ ವಿದ್ಯುತ್ ಬಳಸಿದವರಿಗೂ ಬಿಲ್ ನೀಡುತ್ತಿದೆ. ಜತೆಗೆ ಮೇಲಿಂದ ಮೇಲೆ ವಿದ್ಯುತ್ ಕಡಿತವಾಗಿ ರೈತರ ಬೆಳೆಗಳು ಒಣಗುತ್ತಿರುವುದಲ್ಲದೆ, ಸಾಮಾನ್ಯ ಜನರು ತೊಂದರೆ ಅನುಭವಿಸುವಂತಾಗಿದೆ. | ಮಡಿವಾಳಪ್ಪ ಶಿಂದೋಗಿ ಗ್ರಾಪಂ ಸದಸ್ಯ, ಉಪ್ಪಿನಬೆಟಗೇರಿ