

ರಟ್ಟಿಹಳ್ಳಿ ಪಟ್ಟಣದ ವಿವಿಧೆಡೆ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಶಾಲೆಯ ವಿದ್ಯಾರ್ಥಿಗಳು, ಸಾರ್ವಜನಿಕರು ಓಡಾಡಲು ಭಯಪಡುವಂತಾಗಿದೆ. ಸ್ಥಳೀಯ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪಟ್ಟಣದ ಹಳೇ ಬಸ್ ನಿಲ್ದಾಣ, ಭಗತ್ಸಿಂಗ್ ವೃತ್ತ, ರಾಣೆಬೆನ್ನೂರ ರಸ್ತೆ, ಕೋಟೆ ಭಾಗ, ಕಾರಂಜಿ ಸರ್ಕಲ್ ಸೇರಿದಂತೆ ವಿವಿಧೆಡೆ ಬೀದಿ ನಾಯಿಗಳ ಹಾವಳಿ ಇತ್ತೀಚೆಗೆ ಹೆಚ್ಚಾಗಿದೆ. ಬೆಳಂಬೆಳಗ್ಗೆ ಸುಮಾರು 15-20 ನಾಯಿಗಳ ಗುಂಪು ಕಚ್ಚಾಡುತ್ತ ಪಾದಚಾರಿಗಳ ಮೇಲೆ ದಾಳಿ ಮಾಡುತ್ತಿವೆ. ವಾಹನ ಸವಾರರನ್ನು ಬೆನ್ನಟ್ಟಿ ಬರುವುದರಿಂದ ಅಪಘಾತಗಳು ಸಂಭವಿಸಿ ಹಲವರು ಗಾಯಗೊಂಡಿದ್ದಾರೆ.
ಬೆಳಂಬೆಳಗ್ಗೆ ಪತ್ರಿಕೆ ಮತ್ತು ಹಾಲು ವಿತರಕರು ನಾಯಿ ಹಾವಳಿಯಿಂದ ಬೇಸತ್ತು ಹೋಗಿದ್ದಾರೆ. ಸಾರ್ವಜನಿಕರು, ವೃದ್ಧರು, ವಾಯುವಿಹಾರಿಗಳು, ಶಾಲಾ, ಕಾಲೇಜ್ ವಿದ್ಯಾರ್ಥಿಗಳು ನಾಯಿ ದಾಳಿಯಿಂದ ಹೆದರುತ್ತಲೇ ಓಡಾಡುವಂತಾಗಿದೆ. ರಸ್ತೆಗಳಲ್ಲಿ ಗುಂಪುಗುಂಪಾಗಿ ತಿರುಗಾಡುವ ನಾಯಿಗಳು ಕಚ್ಚಾಡುತ್ತ ಜನರ ಮೇಲೆ ಏಕಾಏಕಿ ದಾಳಿ ಮಾಡುತ್ತವೆ. ಇದರಿಂದ ಹಲವರು ಗಾಯಗೊಂಡು ಆಸ್ಪತ್ರೆ ಸೇರಿದ ಉದಾಹರಣೆ ಇದೆ.
ಕಳೆದ 3 ವರ್ಷಗಳ ಹಿಂದೆ ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಬೀದಿ ನಾಯಿಗಳನ್ನು ಹಿಡಿದು ದೂರದ ಅರಣ್ಯ ಪ್ರದೇಶಕ್ಕೆ ಬಿಟ್ಟು ಬರಲಾಗಿತ್ತು. ಆದರೆ, ಇದೀಗ ಮೂರು ವರ್ಷಗಳಿಂದ ಪಪಂ ಬೀದಿ ನಾಯಿಗಳ ಹಾವಳಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಪಟ್ಟಣದಲ್ಲಿ ಇವುಗಳ ಹಾವಳಿ ಹೆಚ್ಚಾಗಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕಳೆದ ಏಪ್ರಿಲ್ನಲ್ಲಿ 20 ಜನರು, ಮೇನಲ್ಲಿ 19 ಮತ್ತು ಜೂನ್ನಲ್ಲಿ 19ರ ಸೇರಿ ಒಟ್ಟು 58 ಜನರು ನಾಯಿ ಕಡಿತಕ್ಕೊಳಗಾಗಿ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಪ್ರಕರಣಗಳಲ್ಲಿ ಮಕ್ಕಳು ಸೇರಿದಂತೆ ವೃದ್ಧರಿಗೂ ನಾಯಿ ಕಚ್ಚಿ ಗಾಯಗೊಳಿಸಿದೆ. ಕೆಲವು ಖಾಸಗಿ ಆಸ್ಪತ್ರೆಗಳಲ್ಲಿಯೂ ನಾಯಿಗಳ ಕಡಿತಕ್ಕೆ ಚಿಕಿತ್ಸೆ ನೀಡಲಾಗಿದ್ದು, ಇವುಗಳನ್ನು ಲೆಕ್ಕ ಹಾಕಿದರೆ ಪ್ರಕರಣ ಇನ್ನಷ್ಟು ಹೆಚ್ಚಾಗಲಿದೆ. ಬೀದಿ ನಾಯಿಗಳ ಕಡಿವಾಣಕ್ಕೆ ಸ್ಥಳೀಯ ಪಟ್ಟಣ ಪಂಚಾಯಿತಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಟ್ಟಿಹಳ್ಳಿ ಸಾರ್ವಜನಿಕರ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಲೋಕೇಶ ಕುಮಾರ ತಿಳಿಸಿದ್ದಾರೆ.
ಭಗತ್ಸಿಂಗ್ ವೃತ್ತದಲ್ಲಿ ಬೆಳಂಬೆಳಗ್ಗೆ ಸುಮಾರು 20 ನಾಯಿಗಳ ಗುಂಪು ಕಚ್ಚಾಡುತ್ತಿರುತ್ತವೆ. ಮಕ್ಕಳಿಗೆ ಬೆಳಗ್ಗೆ ಟ್ಯೂಷನ್ ಕಳುಹಿಸಲು ತೊಂದರೆಯಾಗುತ್ತಿದೆ. ಸ್ಥಳೀಯ ಪಟ್ಟಣ ಪಂಚಾಯಿತಿ ಈ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಪಾಲಕರ ಆತಂಕವನ್ನು ದೂರ ಮಾಡಬೇಕು. | ಮಂಜುಳಾ ಸುನಿಲ್ ಸಿಂಧೆ, ರಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದರ ಕುರಿತು ಮತ್ತು ಇವುಗಳಿಗೆ ಕಡಿವಾಣ ಹಾಕುವಂತೆ ವಿವಿಧ ಸಂಘಟನೆಗಳು ಮನವಿ ಸಲ್ಲಿಸಿದ್ದಾರೆ. ಶೀಘ್ರವೇ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುಲು ಸೂಕ್ತ ಕ್ರಮ ಜರುಗಿಸಲಾಗುವುದು. | ರಾಜಶೇಖರ ಚೌಗಲಾ, ಪ.ಪಂ. ಮುಖ್ಯಾಧಿಕಾರಿ