

ಉಪ್ಪಿನಬೆಟಗೇರಿ: ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಜನ ಆತಂಕದಲ್ಲಿ ತಿರುಗಾಡುವಂತಾಗಿದೆ.
ಬೀದಿ ನಾಯಿಗಳು ಮೇಲಿಂದ ಮೇಲೆ ಮನುಷ್ಯರು ಹಾಗೂ ಸಾಕು ಪ್ರಾಣಿಗಳ ಮೇಲೆ ನಿರಂತರ ದಾಳಿ ಮಾಡುತ್ತಿವೆ. ಕೆಲ ತಿಂಗಳ ಹಿಂದಷ್ಟೇ ಗ್ರಾಮದ ಈದ್ಗಾ ಮೈದಾನದಲ್ಲಿ ಭಿಕ್ಷುಕಿಯೊಬ್ಬಳ ಮೇಲೆ ದಾಳಿ ಮಾಡಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಳು. ಈ ಘಟನೆ ಮಾಸುವ ಮುನ್ನವೇ ಗ್ರಾಮದ ಪ್ರಕಾಶ ಹೂಗಾರ ಎಂಬುವವರ ಮೇಕೆ ಮರಿಯನ್ನು ಬೀದಿ ನಾಯಿಗಳು ತಿಂದು ಹಾಕಿದ್ದವು. ಈಗ ಅಂಥಹದ್ದೇ ಮತ್ತೊಂದು ಘಟನೆ ನಡೆದಿದೆ. ಗುಡ್ಡದ ಮೇಲಿರುವ ಕಲ್ಲಯ್ಯ ಮಠಪತಿ ಎಂಬುವವರ ಮನೆಯಲ್ಲಿದ್ದ ಎರಡು ಮೇಕೆಗಳ ಮೇಲೆ ದಾಳಿ ನಡೆಸಿದ ನಾಯಿಗಳ ಹಿಂಡು ಮೇಕೆಗಳನ್ನು ಕಚ್ಚಿ ಎಳೆದೊಯ್ಯಲು ಯತ್ನಿಸಿವೆ. ಅದನ್ನು ಗಮನಿಸಿದ ನಿವಾಸಿಗಳು ನಾಯಿಗಳನ್ನು ಬೆದರಿಸಿದ್ದರಿಂದ ಬಿಟ್ಟು ಓಡಿ ಹೋಗಿವೆ.
ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಸಾಕಷ್ಟು ಮಾಂಸದ ಅಂಗಡಿಗಳಿದ್ದು, ಅವರು ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಅವುಗಳನ್ನು ತಿನ್ನುವ ನಾಯಿಗಳು ನಾಲಿಗೆ ರುಚಿಗೆ ಸಾಕು ಪ್ರಾಣಿಗಳು ಮತ್ತು ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ಇದರಿಂದ ಗ್ರಾಮಸ್ಥರು ತಮ್ಮ ಮಕ್ಕಳನ್ನು ಶಾಲೆಗೆ ಮತ್ತು ಹೊರಗಡೆ ಕಳುಹಿಸಲು ಭಯ ಪಡುತ್ತಿದ್ದಾರೆ.
ಈ ಕುರಿತು ಸ್ಥಳಿಯ ಗ್ರಾಮ ಪಂಚಾಯಿತಿಗೆ ಬೀದಿ ನಾಯಿಗಳ ಸ್ಥಳಾಂತರ ಹಾಗೂ ಮಾಂಸದ ಅಂಗಡಿಕಾರರಿಗೆ ಸ್ವಚ್ಛತೆ ಕಾಪಾಡಲು ಸಲಹೆ ನೀಡುವಂತೆ ಸಾರ್ವಜನಿಕರು ಹತ್ತಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕಳೆದ ಮಾರ್ಚ್‌ನಲ್ಲಿ ತಹಸೀಲ್ದಾರ್, ಪಶು ಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕ್ಯಾರೆ ಎನ್ನುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ಬೀದಿ ನಾಯಿಗಳಿಂದ ದಾಳಿಯಾದ ಬಗ್ಗೆ ದೂರುಗಳು ಬಂದಿದ್ದು, ಅವುಗಳ ನಿಯಂತ್ರಣಕ್ಕೆ ತಹಸೀಲ್ದಾರ್ ಹಾಗೂ ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳಿಗೆ ಗ್ರಾಮ ಪಂಚಾಯಿತಿಯಿಂದ ಮನವಿ ಪತ್ರ ಸಲ್ಲಿಸಲಾಗಿದೆ. ಆದಷ್ಟು ಬೇಗ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ಭರವಸೆಯಿದೆ.< ಬಿ.ಎ. ಬಾವಾಖಾನವರ, ಪಿಡಿಒ ಉಪ್ಪಿನಬೆಟಗೇರಿ ಗ್ರಾಪಂ ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿ ಕುರಿತು ಮನವಿ ಪತ್ರ ಬಂದಿದ್ದು, ಅವುಗಳ ನಿಯಂತ್ರಣ ಪಶು ಸಂಗೋಪನೆ ಇಲಾಖೆ ವ್ಯಾಪ್ತಿಗೆ ಬರುತ್ತದೆ. ನಾವು ಕೂಡ ಅವರಿಗೆ ಮಾಹಿತಿ ನೀಡಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇವೆ. ಡಾ.ಮೋಹನ ಭಸ್ಮೆ, ತಹಸೀಲ್ದಾರ್, ಧಾರವಾಡ