

* ಆಹಾರ, ನೀರು ಅರಸಿ ಗ್ರಾಮಗಳಿಗೆ ಲಗ್ಗೆ ಇಟ್ಟ ಜಾಂಬವ ಪಡೆ
* ಜಮೀನಿಗೆ ತೆರಳಲು ಭಯದ ವಾತಾವರಣ ಸೃಷ್ಟಿ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಆಹಾರ ಅರಸಿ ನಾಡಿನತ್ತ ಬಂದು ಹೋಗುತ್ತಿದ್ದ ಕರಡಿಗಳು ಇತ್ತೀಚಿನ ದಿನಗಳಲ್ಲಿ ಮಾನವರ ಮೇಲೆ ದಾಳಿಗೆ ಮುಂದಾಗಿವೆ. ಇದರಿಂದಾಗಿ ಅರಣ್ಯದಂಚಿನ ಗ್ರಾಮಗಳ ಜನರು ಕರಡಿ ಉಪಟಳಕ್ಕೆ ಬೇಸತ್ತು ಹೋಗಿದ್ದಾರೆ.
ಜಿಲ್ಲೆಯಲ್ಲಿ ಆನೆ ಉಪಟಳ ಒಂದೆಡೆಯಾದರೆ, ಇದೀಗ ಕರಡಿ ಹಾವಳಿ ತೀವ್ರವಾಗಿದೆ. ಬೇಸಿಗೆ ವೇಳೆ ಅರಣ್ಯದಲ್ಲಿ ನೀರು, ಆಹಾರ ಕೊರತೆ ಉಂಟಾಗುವ ಸಂಭವವಿದ್ದು, ಜನವಸತಿ ಪ್ರದೇಶದಲ್ಲಿ ನೀರು ಮತ್ತು ಹಲಸಿನ ಹಣ್ಣು ಸಿಗುವ ಕಾರಣ ಕರಡಿಗಳು ನಾಡಿನತ್ತ ಮುಖಮಾಡಿವೆ. ಅಂತೆಯೇ, ಅಲ್ಲಲ್ಲಿ ಮಾನವರ ಮೇಲೆ ದಾಳಿ ಪ್ರಕರಣ ವರದಿಯಾಗುತ್ತಲೇ ಇವೆ.
ಎರಡು ವರ್ಷಗಳಿಂದ ಜಿಲ್ಲೆಯ ಅರಣ್ಯ ವಲಯಗಳ ವ್ಯಾಪ್ತಿಯಲ್ಲಿ ನಂಜಾಪುರ ನಿಂಗಪ್ಪ, ಬೇಲಿಕೊತ್ತನೂರು ದೇವರಾಜು, ಮುರುಕಣಿ ಸತೀಶ್, ಕೈಲಾಂಚ ಗ್ರಾಮದ ಚಿಕ್ಕಬೋರಯ್ಯ, ಅಭಿಷೇಕ್, ದಾಸರಹಳ್ಳಿ ಹೊಸ ರಂಗಯ್ಯ, ವಿಭೂತಿಕೆರೆ ಈರಮ್ಮ, ನಾಗರಾಜು ಕೊಟ್ಟಗಾಳು, ನವಣಮ್ಮ, ಮುತ್ತು ದೊಡ್ಡಸೂಲಿಕೆರೆ, ಬಿಳಗುಂಬ ಹನುಮಂತಯ್ಯ, ಮರಲಿಂಗಯ್ಯ ಇರುಳಿಗರದೊಡ್ಡಿ ಹೀಗೆ ಬಹಳಷ್ಟು ಮಂದಿ ಗಾಯಗೊಂಡಿದ್ದಾರೆ.
ಜಿಲ್ಲೆಯಲ್ಲಿ ಕರಡಿ, ಚಿರತೆ ದಾಳಿಯಿಂದ 2022-23ನೇ ಸಾಲಿನಲ್ಲಿ ಆರು ಜನರಿಗೆ ಗಾಯವಾಗಿದ್ದು, 2,59,444 ರೂ. ಪರಿಹಾರ ನೀಡಲಾಗಿದೆ. 2023-24ನೇ ಸಾಲಿನಲ್ಲಿ ಇಬ್ಬರಿಗೆ ಗಾಯವಾಗಿದ್ದು, 70 ಸಾವಿರ ಪರಿಹಾರ, 2024-25ನೇ ಸಾಲಿನಲ್ಲಿ 10 ಮಂದಿ ಕರಡಿ ದಾಳಿ ಗಾಯಗೊಂಡಿದ್ದು, 3,30,000 ರೂ.ಗಳನ್ನು ಅರಣ್ಯ ಇಲಾಖೆ ಪರಿಹಾರ ನೀಡಿದೆ.
ವನ್ಯಜೀವಿಗಳು ನಾಡಿಗೆ ಬರದಂತೆ ಅರಣ್ಯ ಇಲಾಖೆ ಎಚ್ಚರವಹಿಸಿದೆ. ಕರಡಿಗಳು ಹಲಸು ಮತ್ತಿತರ ಹಣ್ಣಿನ ಆಸೆಗೆ ಗ್ರಾಮಗಳ ಬಳಿ ಓಡಾಟ ನಡೆಸುತ್ತವೆ. ಮನೆಯ ಬಳಿ ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಮಾಡಿಕೊಂಡು ಓಡಾಡುವುದು ಉತ್ತಮ. ಎಂ. ರಾಮಕೃಷ್ಣಪ್ಪಡಿಎಫ್ಒ, ರಾಮನಗರ.
ಬೇಸಿಗೆ ಪ್ರಾರಂಭದಲ್ಲೇ ಕರಡಿಗಳು ಗ್ರಾಮದೊಳಗೆ ನುಗ್ಗುತ್ತಿವೆ. ಜನರ ಮೇಲೆ ದಾನಡೆಸುತ್ತಿರುವ ಕಾರಣ ಭಯದಲ್ಲಿ ಬದುಕುವಂತಾಗಿದೆ. ಕೂಡಲೇ ಅರಣ್ಯ ಇಲಾಖೆ ಕರಡಿ, ಚಿರತೆಗಳ ಹಾವಳಿ ನಿಯಂತ್ರಣ ಮಾಡಬೇಕಿದೆ.
ಗಿರಿಸ್ವಾಮಿ, ದೇವರದೊಡ್ಡಿ.
ಗ್ರಾಮದಂಚಿನ ಚಿಕ್ಕ ಚಿಕ್ಕ ಗುಡ್ಡ - ಬೆಟ್ಟಗಳಲ್ಲಿಯೂ ಕರಡಿ ಹಾವಳಿ ಇದೆ. ಗ್ರಾಮಗಳಿಗೆ ನುಗ್ಗಿ ಜನರ ಮೇಲೆರಗುತ್ತಿವೆ. ಕೂಡಲೇ ಅರಣ್ಯ ಇಲಾಖೆ ಕರಡಿ ಉಪಟಳ ತಡೆಗೆ ಕ್ರಮಕೈಗೊಳ್ಳಬೇಕು. ಜನರಿಗೆ ಜೀವ ಭಯ ತಪ್ಪಿಸಬೇಕು. ಅಂಜನಾಪುರ ಶಿವಕುಮಾರಸ್ವಾಮಿ, ಕೃಷಿಕ