ಭೂಕುಸಿತ, ಪ್ರಳಯ ಪಾಠ ಕಲಿಯುತ್ತಿಲ್ಲ ಜನ

People are not learning the lessons of landslides and floods
Published on

ಮಡಿಕೇರಿ:

೨೦೧೮ರಲ್ಲಿ ಕೊಡಗಿನಲ್ಲಿ ಭೀಕರ ಪ್ರಾಕತಿಕ ದುರಂತ ಸಂಭವಿಸಿದ್ದ ಸಂದರ್ಭ ವರದಿ ನೀಡಿದ್ದ ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ, ಜಿಲ್ಲೆಯ ಪ್ರಾಕತಿಕ ವಿಕೋಪಕ್ಕೆ ಹಲವಾರು ಕಾರಣಗಳಿದ್ದರೂ ಭಾರಿ ಮಳೆ ಮತ್ತು ಪ್ರಕತಿಯಲ್ಲಿ ಮಾನವನ ಹಸ್ತಕ್ಷೇಪ ಮುಖ್ಯವಾಗಿ ಕಂಡುಬರುತ್ತದೆ. ಈ ಪ್ರದೇಶದಲ್ಲಿ ಭೂಮಿಯ ಬಳಕೆ ಬಗ್ಗೆ ಯಾವುದೇ ನಿರ್ದಿಷ್ಟ ಮಾರ್ಗಸೂಚಿಗಳು ಮತ್ತು ನಿಯಮಗಳು ಇರುವುದಿಲ್ಲ. ಪಶ್ಚಿಮ ಘಟ್ಟದ ಬೆಟ್ಟ ಪ್ರದೇಶಗಳಲ್ಲಿ ಅದರಲ್ಲೂ ಮುಖ್ಯವಾಗಿ ಕೊಡಗು ಜಿಲ್ಲೆಯಲ್ಲಿ ಭೂ ಬಳಕೆ ಬಗ್ಗೆ ಸರ್ಕಾರ ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರ ಸೇರಿಕೊಂಡು ಕಟ್ಟುನಿಟ್ಟಿನ ಮಾರ್ಗಸೂಚಿ ಮತ್ತು ನಿಯಮಾವಳಿ ರಚಿಸಬೇಕಿದೆ. ಸುಸ್ಥಿರ ಅಭಿವದ್ಧಿಗಾಗಿ ಭೂಕುಸಿತ ಪ್ರದೇಶಗಳು ಮತ್ತು ಬಫರ್ ಝೋನ್‌ಗಳನ್ನು ಗುರುತಿಸಿ ಅಲ್ಲಿ ಕೈಗೊಳ್ಳಬಹುದಾದ ಚಟುವಟಿಕೆಗಳ ಬಗ್ಗೆ ಸ್ಪಷ್ಟ ನಿಯಮಾವಳಿಗಳನ್ನು ರೂಪಿಸಬೇಕಿದೆ ಎನ್ನುವ ಶಿಫಾರಸ್ಸು ಮಾಡಿತ್ತು. ಆದರೆ ಅದೆಲ್ಲಾ ಈಗ ಗಾಳಿಗೆ ತೂರಲಾಗಿದೆ. ಭೂಪರಿವರ್ತನೆ ಸಂದರ್ಭ ನದಿ, ಹಳ್ಳ, ಡ್ರ್ತ್ರೈನೇಜ್‌ನಿಂದ ೧೦ ಮೀಟರ್ ದೂರ ಬಫರ್ ಝೋನ್ ಸುತ್ತಮುತ್ತ ಭೂ ಪರಿವರ್ತನೆಗೆ ಅವಕಾಶ ಇಲ್ಲ. ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಇಲ್ಲ. ಡಿಸಿ ಎನ್‌ಒಸಿ ಪಡೆದ ನಂತರ ಗ್ರಾಮ ಪಂಚಾಯತಿ ಅನುಮತಿ ಪಡೆಯಬೇಕು. ಭೂ ಕುಸಿತವಾದ ಪ್ರದೇಶಗಳಲ್ಲಿ ನಿರ್ಬಂಧ ಇರುತ್ತದೆ ಎನ್ನುವ ಅಂಶಗಳನ್ನೆಲ್ಲಾ ಲೆಕ್ಕಕ್ಕೆ ತೆಗೆದುಕೊಳ್ಳದೆ ಸೂಕ್ಷ್ಮ ಪ್ರದೇಶಗಳಲೆಲ್ಲಾ ಕಾಮಗಾರಿ ನಡೆಸಲಾಗುತ್ತಿದೆ. ಇತ್ತೀಚೆಗಷ್ಟೇ ಮಡಿಕೇರಿ ಸಮೀಪ ನಿರ್ಮಾಣವಾದ ಗ್ಲಾಸ್ ಬ್ರಿಡ್ಜ್ ತಳದಲ್ಲಿ ಮಣ್ಣು ಕುಸಿದು ಅಪಾಯದ ಸೂಚನೆ ಸಿಗುತ್ತಿದ್ದಂತೆ ಕೊಡಗಿನಲ್ಲಿ ಮತ್ತೆ ಸೂಕ್ಷ್ಮ ಪ್ರದೇಶಗಳಲ್ಲಿ ಕಾಮಗಾರಿಗಳಿಗೆ ಅವಕಾಶ ಕೊಡಬಾರದು ಎನ್ನುವ ಕೂಗು ಶುರುವಾಗಿದೆ. ಈ ಬಗ್ಗೆ ವಿಜಯವಾಣಿ ಓದುಗರು ಲೌಡ್ ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

೨೦೧೮ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಎಲ್ಲರೂ ಪಾಠ ಕಲಿಯದಿದ್ದರೆ, ದೊಡ್ಡ ದುರಂತವನ್ನು ಕಾಣಬೇಕಾಗುತ್ತದೆ. ಭೂಕುಸಿತದಿಂದ ಗರ್ವಾಲೆ ಗ್ರಾಮ ಪಂಚಾಯಿತಿಯ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ನಷ್ಟ ಅನುಭವಿಸುವಂತಾಗಿದೆ. ಇವತ್ತಿಗೂ ಸರಿಯಾದ ಪರಿಹಾರ ಸಿಕ್ಕಿಲ್ಲ. ಇಂತಹ ದುರಂತಗಳ ತಡೆಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಬೆಟ್ಟ ಕೊರೆಯುವುದಕ್ಕೆ ಕಡಿವಾಣ ಬೀಳಲೇಬೇಕು.
ಜಯಂತಿ, ರೈತ ಮಹಿಳೆ, ಸೂರ್ಲಬ್ಬಿ ಗ್ರಾಮ.

೨೦೧೮ರ ಭೂ ಕುಸಿತ ಮತ್ತು ೨೦೧೯ರ ಮಹಾ ಪ್ರಳಯದಿಂದ ಕೊಡಗಿನ ಸೊಬಗಿಗೆ ಹಾನಿಯಾಗಿದೆ. ಅನಧಿಕೃತ ಕಾಮಗಾರಿಗಳನ್ನು ನಡೆಸಲು ತಡೆ ನೀಡಲಾಗಿದ್ದು, ನದಿ ತೀರದ ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸದ ಹಿನ್ನೆಲೆಯಲ್ಲಿ ಮತ್ತೆ ಅಪಾಯ ಪ್ರದೇಶದಲ್ಲಿ ಮನೆಗಳ ನಿರ್ಮಾಣ ಮಾಡಲಾಗುತ್ತಿದೆ. ಭೂಕುಸಿತ ಸಂಭವಿಸುವ ಪ್ರದೇಶದಲ್ಲಿ ಭೂ ಪರಿವರ್ತನೆಗೆ ಅವಕಾಶ ಕಲ್ಪಿಸದೆ ಇನ್ನುಳಿದ ಉತ್ತಮ ಪ್ರದೇಶಗಳಲ್ಲಿ ಸೈಟ್‌ಗಳನ್ನು ನೀಡಲು ಜಿಲ್ಲಾಧಿಕಾರಿ ಗಮನ ಹರಿಸಬೇಕು.
ವಿ.ಕೆ. ಲೊಕೇಶ್, ಬಿಜೆಪಿ ಪ್ರಧಾನ ಕಾರ್ಯದರ್ಶಿ, ಕೊಡಗು

ಪ್ರಕೃತಿ ವಿಕೋಪದಿಂದ ಕೊಡಗಿನ ಮಂದಿ ಪಾಠ ಕಲಿತಂತೆ ಕಾಣುತ್ತಿಲ್ಲ. ಗುಡ್ಡಗಾಡು ಪ್ರದೇಶಗಳಲ್ಲಿ ಮನೆ ಅಥವಾ ಇನ್ಯಾವುದೇ ಕಾಮಗಾರಿ ಪ್ರಾರಂಭ ಮಾಡುವ ಮುನ್ನ ಅ ಪ್ರದೇಶದ ಬಗ್ಗೆ ಮಾಹಿತಿ ಸಂಗ್ರಹಿಸುವುದು ಸೂಕ್ತ. ಅನುಮತಿ ನೀಡುವ ಇಲಾಖೆ ಕೂಡ ಎಚ್ಚೆತ್ತುಕೊಳ್ಳಬೇಕಿದೆ. ಅನಧಿಕೃತ ಕಾಮಗಾರಿ ನಡೆಯುತ್ತಿದೆ ಎಂಬುದಕ್ಕೆ ಗ್ಲಾಸ್ ಬ್ರಿಡ್ಜ್ ಸೂಕ್ತ ಉದಾಹರಣೆ. ಇಂಥ ಕಾಮಗಾರಿಗಳು ಮಾಡುವ ಮುನ್ನ ಆ ಕೆಲಸ ನಿರ್ವಹಿಸುವ ಮಾಲೀಕರು ಕೂಡ ಆತ್ಮಾವಲೋಕನ ಮಾಡಿಕೊಳ್ಳುವುದು ಸೂಕ್ತ.
ಎಂ.ಎಸ್ ವೆಂಕಟೇಶ್, ಉಪಾಧ್ಯಕ್ಷ, ಕೆಪಿಸಿಸಿ ಕಾನೂನು ಸಮಿತಿ

೨೦೧೮ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಕೊಡಗು ಜಿಲ್ಲೆಯ ಪರಿಸರಕ್ಕೆ ತೀವ್ರ ಹಾನಿ ಉಂಟಾಯಿತು. ಇತ್ತೀಚೆಗೆ ಮತ್ತೆ ಅನಧಿಕೃತ ನಿರ್ಮಾಣಗಳು ಹೆಚ್ಚುತ್ತಿರುವ ಆರೋಪಗಳು ಕೇಳಿ ಬರುತ್ತಿವೆ. ಪರಿಸರವನ್ನು ದುರುಪಯೋಗ ಪಡಿಸದೆ, ಸ್ಥಳೀಯ ಜನರು ಮತ್ತು ಸರ್ಕಾರ ಎರಡೂ ಕೈಜೋಡಿಸಬೇಕು. ನಿರ್ಮಾಣಗಳಲ್ಲಿ ನಿಯಮಿತತೆ ಮತ್ತು ಪರಿಸರ ಸಂರಕ್ಷಣಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪರಿಸರ ಹಾಳಾಗುವುದರಿಂದ ದೀರ್ಘಕಾಲ ಹಾನಿ ಆಗುವುದರಿಂದ ಪ್ರಾಕೃತಿಕ ಸಂಪತ್ತಿನ ಸದುಪಯೋಗ ಮಾಡುವುದು ಮತ್ತು ಮುಂದಿನ ಪೀಳಿಗೆಗಳಿಗೆ ಶ್ರೇಷ್ಠ ಪರಿಸರವನ್ನು ಉಳಿಸಿ ಕಾಪಾಡುವುದು ನಮ್ಮ ಪ್ರತಿಯೊಬ್ಬರ ಜವಾಬ್ದಾರಿ.
ಬಿ.ವಿ. ವರುಣ್, ಪತ್ರಿಕೋದ್ಯಮ ಸ್ನಾತಕೋತ್ತರ ವಿದ್ಯಾರ್ಥಿ, ವಿರಾಜಪೇಟೆ

ಪ್ರಾಕೃತಿಕ ವಿಕೋಪ ನಡೆದ ಆರಂಭಿಕ ವರ್ಷಗಳಲ್ಲಿ ಅಧಿಕಾರಿಗಳು ಬಹಳ ದಕ್ಷರು, ಪ್ರಕೃತಿ ಮೇಲೆ ಬಹಳ ಒಲವುಳ್ಳವರಂತೆ ಕಾಣುತ್ತಿದ್ದರು. ಅನಧಿಕೃತ ನಿರ್ಮಾಣಕ್ಕೆ ಕಡಿವಾಣ ಹಾಕುತ್ತಿದ್ದರು. ದಿನಗಳು ಕಳೆದಂತೆ ಇದೀಗ ಅನಧಿಕೃತ ನಿರ್ಮಾಣ ಹೆಚ್ಚಾಗುತ್ತಿದೆ. ಭೂಪರಿವರ್ತನೆ ಆಗದೆ ರೆಸಾರ್ಟ್‌ಗಳ ನಿರ್ಮಾಣ ಮಿತಿಮೀರುತ್ತಿದೆ. ಅಧಿಕಾರಿಗಳು ನಿರ್ಮಾಣಕ್ಕೆ ಅನುಮತಿ ನೀಡುವ ಮೊದಲು ಸರಿಯಾಗಿ ಸ್ಥಳ ಪರಿಶೀಲನೆ ನಡೆಸುತ್ತಿಲ್ಲ. ಭ್ರಷ್ಟಾಚಾರ ಹಾಗೂ ಕಾಣದ ಕೈಗಳ ವ್ಯವಹಾರದಿಂದ ಪ್ರಕೃತಿಗೆ ಮಾರಕವಾದ ನಿರ್ಮಾಣ ಜಿಲ್ಲೆಯಲ್ಲಿ ಎಲ್ಲೆ ಮೀರಿದೆ.
ವಿಲೀನ ಗೋನ್ಸಾಲ್ವೇಸ್, ಆರ್ಜಿ ಗ್ರಾಮ, ವಿರಾಜಪೇಟೆ

ಪ್ರಕೃತಿ ವಿಕೋಪಕ್ಕೆ ಮೂಲ ಕಾರಣ ನಾವುಗಳೇ ಆಗಿದ್ದೇವೆ. ಕೊಡಗಿನಲ್ಲಿ ಬೆಟ್ಟ - ಗುಡ್ಡಗಳನ್ನು ಕಡಿದು ನಿರ್ಮಾಣ ಮಾಡುವ ರೆಸಾರ್ಟ್‌ಗಳು, ಯಂತ್ರಗಳನ್ನು ಬಳಸಿ ನಿರ್ಮಾಣ ಮಾಡುವ ಕಾಮಗಾರಿಯಿಂದ ಮನ್ಣು ಸಡಿಲಗೊಳಿಸುವುದು, ಭತ್ತದ ಕೃಷಿ ಕಡಿಮೆಯಾಗಿರುವುದು, ಭೂ ಪರಿವರ್ತನೆ ಸಂದರ್ಭ ಅಧಿಕಾರಿಗಳ ನಿರ್ಲಕ್ಷ್ಯ, ಪರಿಸರದ ಕಾಳಜಿ ಕಡಿಮೆಯಾಗಿರುವುದು, ಕೃಷಿ ಜಮೀನನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಸದೆ ಬೇರೆ ರೂಪದಲ್ಲಿ ಬಳಸಿಕೊಳ್ಳುವುದು ಭೂಮಿಗೆ ಕಳೆ ನಾಶಕ ಸಿಂಪಡಣೆ, ಪಲವತ್ತಾದ ಭೂಮಿ ನಾಶಗೊಳಿಸುವುದು.. ಇವೆಲ್ಲಾ ಭೂಮಿ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.
ಕೊಡಗನ ತೀರ್ಥ ಪ್ರಸಾದ್, ಅಧ್ಯಕ್ಷ, ವಲಯ ಕಾಂಗ್ರೆಸ್, ಬೆಟ್ಟಗೇರಿ

ಖಂಡಿತ ಅನಧಿಕೃತ ನಿರ್ಮಾಣಗಳು ಪ್ರಕೃತಿಗೆ ಮಾರಕ. ಪ್ರಕೃತಿಯ ನೈಜತೆಗೆ ಧಕ್ಕೆ ತರುವ ಕೆಲಸ ಅನಧಿಕೃತ ನಿರ್ಮಾಣಗಳಿಂದ ಆಗುತ್ತಿದೆ. ಇದರಿಂದ ಪ್ರಕೃತಿ ಅದರ ಪರಿಣಾಮವನ್ನು ತೋರಿಸುತ್ತಿದೆ. ಸರ್ಕಾರ ಇದರ ಬಗ್ಗೆ ಕಠಿಣ ಕ್ರಮ ಕೈಗೊಂಡು ಪ್ರಕೃತಿಯ ನೈಜತೆಯನ್ನು ಕಾಪಾಡುವ ಕೆಲಸ ಮಾಡಬೇಕಾಗಿದೆ.
ಪುಷ್ಪ ಸಂತೋಷ್, ಉದ್ಯಮಿ, ಕೊಡ್ಲಿಪೇಟೆ

ಕೊಡಗಿನಲ್ಲಿ ಎಲ್ಲೆಂದರಲ್ಲಿ ನಾಯಿ ಕೊಡೆಗಳ ಹಾಗೆ ರೆಸಾರ್ಟ್ ಮತ್ತು ಹೋಂ ಸ್ಟೇಗಳು ತಲೆ ಎತ್ತುತ್ತಿರುವುದು ನಿಜ. ಜಿಲ್ಲೆಯಲ್ಲಿ ಜಾಗ ಮಾರಾಟ ಜಾಸ್ತಿ ಆಗಿದ್ದು ಹೊರಗಿನ ಉದ್ಯಮಿಗಳು ಜಾಗ ಖರೀದಿ ಮಾಡಿ ಬೆಟ್ಟ, ಗುಡ್ಡ, ಹೊಳೆ, ಅರಣ್ಯ ಪ್ರದೇಶದಲ್ಲಿ ಕಟ್ಟಡ ಮತ್ತು ಇನ್ನಿತರ ಮೋಜು ಮಸ್ತಿಗೆ ಬೇಕಾಗುವ ರೀತಿಯಲ್ಲಿ ಭೂಮಿಯನ್ನು ಬಳತ್ತಿರುವುದರಿಂದ ಭೂಮಿ ಮೇಲೆ ವ್ಯತ್ಯರಿಕ್ತ ಪರಿಣಾಮ ಬೀರುತ್ತಿದೆ. ಭೂ ಕುಸಿತ, ಭೂಕಂಪನಕ್ಕೇ ಮುಂದಿನ ದಿನಗಳಲ್ಲಿ ಇದು ದಾರಿ ಮಾಡಿ ಕೊಡಲಿದೆ. ಕಾಮಗಾರಿ ಸಂದರ್ಭ ಈ ರೀತಿಯ ಕಟ್ಟಡಕ್ಕೆ ಯೋಗ್ಯವಾದ ಪ್ರದೇಶಕ್ಕೆ ಅನುಮತಿ ಕೊಡಬಹುದೇ ಎಂದು ಪರಿಶೀಲಿಸಿ ಅನುಮತಿ ನೀಡುವ ಜವಾಬ್ದಾರಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಇರುತ್ತದೆ.
ಪೂರ್ಣಿಮ ಕಿರಣ್, ಸದಸ್ಯೆ, ದುಂಡಳ್ಳಿ. ಗ್ರಾಮ ಪಂಚಾಯತಿ

ಅನಧಿಕೃತ ನಿರ್ಮಾಣಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಜಿಲ್ಲೆಯಲ್ಲಿ ಯಾವುದೇ ರೀತಿಯ ಸುರಕ್ಷತೆ ಇಲ್ಲದೆ ಗ್ಲಾಸ್ ಬ್ರಿಡ್ಜ್‌ಗಳ ನಿರ್ಮಾಣ ಮಾಡಲಾಗಿರುವ ಬಗ್ಗೆ ದೂರುಗಳಿದ್ದು, ಸುರಕ್ಷತೆ ಇಲ್ಲದಿರುವ ಗ್ಲಾಸ್ ಬ್ರಿಡ್ಜ್‌ಗಳಿಗೆ ಪಿಡಿಒಗಳು ಹೇಗೆ ಎನ್‌ಒಸಿ ಕೊಟ್ಟಿದ್ದಾರೆ ಎನ್ನುವುದರ ಬಗ್ಗೆ ವಿಚಾರಿಸಲಾಗುವುದು. ಸಭೆಯ ನಡಾವಳಿ ಮಾಡಿಕೊಂಡು ಎನ್‌ಒಸಿ ಕೊಟ್ಟರೆ ಸಾಕಾಗುವುದಿಲ್ಲ. ಸುರಕ್ಷತೆ ಬೇಕು. ಈ ಬಗ್ಗೆ ಎಚ್ಚರಿಕೆ ನೀಡಲಾಗುವುದು. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಗ್ಲಾಸ್ ಬ್ರಿಡ್ಜ್ ವೀಕ್ಷಣೆಗೆ ಭೇಟಿ ನೀಡುವುದರಿಂದ ಏನಾದರೂ ಮುಂದೆ ತೊಂದರೆಯಾಗುವ ಸಾಧ್ಯತೆಗಳ ಬಗ್ಗೆಯು ಆತಂಕದ ಮಾತುಗಳು ಕೇಳಿ ಬಂದಿದೆ. ಈ ಕುರಿತು ಪಂಚಾಯತ್ ರಾಜ್ ಅಧಿಕಾರಿಗಳಿಗೆ ಜಾಗೃತೆ ವಹಿಸುವಂತೆ ಸೂಚನೆ ನೀಡಲಾಗಿದೆ.
ವೆಂಕಟ್ ರಾಜಾ, ಕೊಡಗು ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net