

ಅಥಣಿ: ಒಬ್ಬರು ಕುರ್ಚಿ ಉಳಿಸಿಕೊಳ್ಳಲು ಹೋರಾಟ ನಡೆಸಿದರೆ, ಇನ್ನೊಬ್ಬರು ಕುರ್ಚಿಗಾಗಿ ಕದನ ಆರಂಭಿಸಿದ್ದಾರೆ. ಇತ್ತ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದೆ ಜನರಿಗೆ ದ್ರೋಹ ಮಾಡುತ್ತಿರುವ ಸಿದ್ದರಾಮಯ್ಯ ಸರ್ಕಾರ ಬೇಗನೇ ಕಳಚಲಿದೆ ಎಂದು ಮಾಜಿ ಶಾಸಕ ಸಂಜಯ ಪಾಟೀಲ ವಾಗ್ದಾಳಿ ನಡೆಸಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜನರ ಭಾವನೆಗಳಿಗೆ ಪೆಟ್ಟು ನೀಡಿ ಸಮಾಜದಲ್ಲಿ ಅಸ್ಥಿರತೆ, ಹಿಂದುಗಳ ಮಧ್ಯೆ ಸಂಘರ್ಷ ಉಂಟಾಗುವಂತೆ ಯೋಜನೆ ರೂಪಿಸುತ್ತಿದ್ದಾರೆ. ಶಾಸಕರಲ್ಲಿ ಅಸಮಾಧಾನ ಇರುವುದರಿಂದ ಯಾವುದೇ ಹೊಸ ಯೋಜನೆ ರೂಪಿಸುತ್ತಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಎಲ್ಲ ಹಣ ವ್ಯಯವಾಗುತ್ತಿದ್ದು, ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗುತ್ತಿಲ್ಲ ಎಂದು ಆರೋಪಿಸಿದರು.
ಮಾಜಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ಅಮ್ಮಾಜೇಶ್ವರಿ-ಕೊಟ್ಟಲಗಿ ಏತ ನೀರಾವರಿ ಯೋಜನೆಯಲ್ಲಿ ಹಲವಾರು ಲೋಪದೋಷಗಳಿದ್ದು, ಅವುಗಳನ್ನು ಸರಿಪಡಿಸಿದರೆ ಮಾತ್ರ ಆ ಕ್ಷೇತ್ರದ ಸಂಪೂರ್ಣ ನೀರಾವರಿ ಸಾಧ್ಯವಾಗಲಿದೆ. ಮೊದಲು ೧೬ ಸಾವಿರ ಕೃಷಿ ಹೊಂಡ ನಿರ್ಮಿಸಿ ಈ ಯೋಜನೆಯಿಂದ ನಿರಂತರ ನೀರು ಸಿಗುವಂತೆ ಮಾಡಿದ್ದೆ. ಆದರೆ, ಈಗ ಕೃಷಿ ಹೊಂಡವಿಲ್ಲದೆ ಕಾಲುವೆ ಮೂಲಕ ಚೇಂಬರ್ ನಿರ್ಮಿಸಿ ನೀರು ಪೂರೈಸುವ ಯೋಜನೆಯಿದೆ. ಇದರಿಂದ ಬೇಸಿಗೆ ಸಮಯದಲ್ಲಿ ನೀರಿನ ಅಭಾವ ಉಂಟಾಗಲಿದೆ ಎಂದರು.
ಅಥಣಿ ಬಿಜೆಪಿ ಮಂಡಳ ಅಧ್ಯಕ್ಷರನ್ನಾಗಿ ಗಿರೀಶ ಬುಟಾಳೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಮುಖಂಡರಾದ ಉಮೇಶರಾವ ಬಂಟೋಡ್ಕರ, ಎಸ್.ಎ.ಮುದಕ್ಕಣವರ, ನಿಂಗಪ್ಪ ನಂದೇಶ್ವರ, ಪ್ರಭಾಕರ ಚವ್ಹಾಣ, ಶಿವಾನಂದ ಸಿಂಧೂರ, ಮುತ್ತಯ್ಯ ಕಾಡದೇವರಮಠ, ರಾವಸಾಹೇಬ ಪಾಟೀಲ, ಮುರುಘೇಶ ಇಂಗಳೆ, ಸಿದ್ದು ಪಾಟೀಲ, ಅಜಿತ್ ಪವಾರ ಇತರರಿದ್ದರು.