

ಮೈಸೂರು: ನಗರದ ಅರಮನೆ ವೇದಿಕೆಯಲ್ಲಿ ಶುಕ್ರವಾರ ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜನಾರ್ದನ (ಜನ್ನಿ) ತಂಡ ನಡೆಸಿ ಕೊಟ್ಟ ಜನಪದ ಹಾಗೂ ತತ್ವಪದ ಗಾಯನಕ್ಕೆ ಜನರು ತಲೆದೂಗಿದರು.
ಶರಣು ಶರಣು ಅಯ್ಯ ಗಣನಾಯಕ ಹಾಡಿನೊಂದಿಗೆ ಗಾಯನ ಪ್ರಾರಂಭಗೊಂಡಿತು. ಗಾಯಕರಾದ ಜನಾರ್ದನ (ಜನ್ನಿ),ಬಾನಂದೂರು ಕೆಂಪಯ್ಯ, ಅಪ್ಪಗೆರೆ ತಿಮ್ಮರಾಜು, ಪಿಚ್ಚಳ್ಳಿ ಶ್ರೀನಿವಾಸ್, ದೇವಾನಂದ್ ವರಪ್ರಸಾದ್, ನರಸಿಂಹಮೂರ್ತಿ ಹಾಗೂ ಇತರರು ತಮ್ಮ ಅದ್ಭುತ ಕಂಠಸಿರಿಯ ಮೂಲಕ ಜನ ಮನಗೆದ್ದರು. ಕಾರ್ಯಕ್ರಮಕ್ಕೂ ಮುನ್ನ ಮಳೆ ಪ್ರಾರಂಭಗೊಂಡರೂ ಜನರು ಮಳೆಯನ್ನು ಲೆಕ್ಕಿಸದೆ ಕಾರ್ಯಕ್ರಮ ವೀಕ್ಷಿಸಿದರು.
ಎಲ್ಲೋ ಜೋಗಪ್ಪ ನಿನ್ನ ಅರಮನೆ.., ತಿಂಗಳು ಮುಳುಗಿದವು ರಂಗೋಲೆ ಬೆಳಗಿದವು.., ಗುರುವೇ ನಿನ್ನ ಆಟ ಬಲ್ಲವರು ಯಾರ‌್ಯಾರೋ.., ಒಲಿದು ಬಾರಮ್ಮಯ್ಯ ಒಲಿದು ಬಾರೇ.., ಬಿದಿರು ನಾನಾರಿಗಲ್ಲಾದವಳು.., ಓ ನನ್ನ ಚೇತನ ಆಗು ನೀ ಅನಿಕೇತನ, ನಾವು ಕೂಗುವ ಕುಗು ನಿಮ್ಮ ಪಾದಕ್ಕುರಾವಗಲಿ… ಮುಂತಾದ ಹಾಡುಗಳನ್ನು ಹಾಡಿ ರಂಜಿಸಿದರು. ನಂತರ ಮಂಜು ಮತ್ತು ತಂಡದಿಂದ ನಗಾರಿ ಪ್ರದರ್ಶನ ಏರ್ಪಡಿಸಲಾಗಿತ್ತು.
ಶರಣ್ಯ ನಟರಾಜ್ ತಂಡದಿಂದ ಕಥಕ್ ನೃತ್ಯ, ಅಗಮ್ ಬ್ಯಾಂಡ್-ಹರೀಶ್ ಶಿವರಾಮ್ ಕೃಷ್ಣನ್ ತಂಡದಿಂದ ಕರ್ನಾಟಕ ಶಾಸ್ತ್ರೀಯ ವಾದ್ಯವೃಂದ, ಕನ್ನಡ ಕಲಾಲಯ ಟ್ರಸ್ಟ್‌ನ ವಿದುಷಿ ಎಲ್. ಪ್ರಿಯಾಂಕ ನೇತೃತ್ವದ ತಂಡ ನವದುರ್ಗೆಯ ನೃತ್ಯರೂಪಕ ಮನಮೋಹಕವಾಗಿತ್ತು. ಈ ತಂಡ ರಾಮ ರಾಮ ಜಯ ರಾಜಾರಾಮ್, ರಾಮ ರಾಮ ಜಯ ಸೀತಾರಾಮ್ ಹಾಡಿಗೆ ಹೆಜ್ಜೆ ಹಾಕಿತು. ಎಂ.ಎನ್. ಗಣೇಶ್ ತಂಡದಿಂದ ನಾದಸ್ವರ, ಶಿವಶರಣ್ಯ ಎಸ್.ಸ್ವಾಮಿ ತಂಡದಿಂದ ತತ್ವಪದ ಗಾಯನ, ಭಾರತೀಯ ವಿದ್ಯಾಭವನದಿಂದ ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತ, ಪಂಡಿತ್ ನರಸಿಂಹಲು ವಡವಾಟಿ ಮತ್ತು ವಿದ್ವಾನ್ ಕದ್ರಿ ರಮೇಶ್‌ನಾಥ್ ನಡೆಸಿಕೊಟ್ಟ ಕ್ಲಾರಿಯೋನೆಟ್- ಸ್ಯಾಕ್ಸೋಫೋನ್ ಜುಗಲ್‌ಬಂದಿ ಮನಸೂರೆಗೊಂಡಿತು.