

ಶಿರಸಿ: ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳಿಂದ ಕಾಂಗ್ರೆಸ್ ಆಡಳಿತ ಮಾಡುತ್ತಿದ್ದು, ಈಗಾಗಲೇ ಅವರ ಆಡಳಿತವೈಖರಿ ಭ್ರಮನಿರಸನ ಉಂಟು ಮಾಡಿದೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆ ಮೊದಲು ಜನರಿಗೆ ಯಾವ್ಯಾವ ಆಶ್ವಾಸನೆ, ಭರವಸೆಗಳನ್ನು ನೀಡಿದ್ದರೋ ಅವುಗಳನ್ನು ಈಡೇರಿಸಬೇಕು. ಅರಣ್ಯ ಅತಿಕ್ರಮಣದಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ಶಾಸಕ ಭೀಮಣ್ಣ ನಾಯ್ಕ ಚುನಾವಣೆ ಪೂರ್ವದಲ್ಲಿ ಹೇಳಿದ್ದರು. ಅವರಿಗೆ ಹಕ್ಕು ಪತ್ರ ನೀಡುವುದಾಗಿಯೂ ಹೇಳಿದ್ದರು. ಇ-ಸ್ವತ್ತಿನ ಸಮಸ್ಯೆಯನ್ನು ನಾವು ಗೆದ್ದು ಬಂದ ಕೆಲವೇ ಗಂಟೆಗಳಲ್ಲಿ ಬಗೆಹರಿಸುವುದಾಗಿ ಹೇಳಿದ್ದರು. ಕಾಗೇರಿಯವರು ಅಭಿವೃದ್ಧಿ ಮಾಡಿಲ್ಲ, ನಾನು ಇನ್ನಷ್ಟು ವೇಗದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡುವುದಾಗಿ ತಿಳಿಸಿದ್ದರು.
ಆದರೆ, ಯಾವುದೇ ಸಮಸ್ಯೆಗೆ ಪರಿಹಾರ ನೀಡುವುದಕ್ಕೆ ಸರ್ಕಾರವಾಗಲಿ, ಜನಪ್ರತಿನಿಧಿಗಳಾಗಲಿ ಯೋಚಿಸಿದಂತೆ ಕಾಣುತ್ತಿಲ್ಲ. ಸ್ಪೀಕರ್ ಆಗಿದ್ದ ಸಮಯದಲ್ಲಿ ಬಡವರಿಗೆ 5 ಸಾವಿರ ಮನೆಗಳನ್ನು ತಂದಿದ್ದೇನೆ. ಚುನಾವಣೆ ಪೂರ್ವದಲ್ಲಿ ಹೇಳಿದಾಗ ಅದನ್ನು ಚುನಾವಣೆ ಮನೆ ಎಂದು ಅಪಪ್ರಚಾರ ಮಾಡಿದ್ದರು.
ಒಂದು ಸಾವಿರ ಮನೆಗಳು ಮಂಜೂರಾಗಿವೆ. ಉಳಿದ ಮನೆಗಳ ಮಂಜೂರಿ ಪ್ರಕ್ರಿಯೆಯನ್ನು ಕಾಂಗ್ರೆಸ್‌ನವರು ಕಾಗೇರಿಯವರ ಮನೆಯೆಂದು ತಡೆದಿದ್ದಾರೋ ಅಥವಾ ಬಡವರಿಗೆ ಮನೆ ನೀಡಬಾರದು ಎಂದು ತಡೆಹಿಡಿದಿದ್ದಾರೋ ಎಂದು ಸ್ಪಷ್ಟನೆ ಕೊಡಬೇಕು. ರಾಜಕೀಯ ಇಚ್ಛಾಶಕ್ತಿಯನ್ನು ಬಡವರ ಪರವಾಗಿ, ಅಭಿವೃದ್ಧಿ ಪರವಾಗಿ ತೋರಿಸಬೇಕು. ಮನೆ ಕೊಡುವ ವಿಚಾರದಲ್ಲಿ ಮೌನ, ಅಭಿವೃದ್ಧಿ ವಿಚಾರದಲ್ಲೂ ಮೌನವಹಿಸಿದರೆ ಕ್ಷೇತ್ರದ ಜನ ಸಹಿಸಿಕೊಳ್ಳುವುದಿಲ್ಲ ಎಂದರು.