ಜನರಿಗೆ ದಿನವೂ ತ್ಯಾಜ್ಯದ ಅಭಿಷೇಕ

FotoJet
Published on

ಒಂದು ತಿಂಗಳಿಂದ ನಿಂತಲ್ಲೇ ನಿಂತ ಕಸದ ಟ್ರಾೃಕ್ಟರ್ ನೈರ್ಮಲ್ಯ ಕಾಪಾಡಲು ನಿವಾಸಿಗಳ ಆಗ್ರಹ

ಚೇಳೂರು: ಸುಮಾರು ತಿಂಗಳಿಂದ ರಾಶ್ಚೆರವು ಗ್ರಾಮದ ಮುಖ್ಯರಸ್ತೆಯಲ್ಲೇ ಚರಂಡಿ ನೀರು ನಿಂತು ಪಾದಚಾರಿಗಳಿಗೆ ತ್ಯಾಜ್ಯದ ಅಭಿಷೇಕವಾಗುತ್ತಿದ್ದರೂ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಗಮನಹರಿಸದೇ ಇರುವುದು ಬೇಸರದ ಸಂಗತಿ.

ಚರಂಡಿ ಕಟ್ಟಿಕೊಂಡಿರುವುದರಿಂದ ಗ್ರಾಮದಲ್ಲಿ ಎತ್ತರದ ಪ್ರದೇಶದಲ್ಲಿರುವ ಮನೆಗಳ ಕಲುಷಿತ ನೀರು ಚರಂಡಿಯಲ್ಲಿ ಹರಿಯದೆ ಮುಖ್ಯರಸ್ತೆಯಲ್ಲೇ ಹರಿಯುತ್ತಿದೆ. ಜನ ಕೂಡ ಇದೇ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವಾರು ತಿಂಗಳಿಂದ ಪರಿಸ್ಥಿತಿ ಹೀಗೆಯೇ ಇದ್ದು, ಜನರಿಗೆ ದುರ್ವಾಸನೆಯ ಜತೆಗೆ ಸೊಳ್ಳೆ ಕಾಟದಿಂದ ರೋಗದ ಭೀತಿ ಕಾಡುತ್ತಿದೆ.

ರಾಶ್ಚೆರವು ಗ್ರಾಮದ ವಿವಿಧ ಬೀದಿಗಳಲ್ಲಿ ಚರಂಡಿಗಳು ಸಂಪೂರ್ಣವಾಗಿ ಹದೆಗೆಟ್ಟಿದ್ದು, ಕಸ-ಕಡ್ಡಿ ಕಟ್ಟಿಕೊಂಡು ದುರ್ನಾತ ಬೀರುತ್ತಿದೆ. ಮೂರು ದಿನಗಳಿಗೊಮ್ಮೆ ಬಂದು ಹೋಗುವ ಪಿಡಿಒ, ಈ ಸಮಸ್ಯೆಗಳ ಚಿಂತೆ ನನಗ್ಯಾಕೆ ಎನ್ನುವಂತೆ ಸುಮ್ಮನೆ ಬಂದು ಹೋಗುತ್ತಿದ್ದಾರೆ.

ನಿಂತಲ್ಲೇ ನಿಂತಿರುವ ಕಸದ ಟ್ರಾೃಕ್ಟರ್

ರಾಶ್ಚೆರವು ಪಂಚಾಯಿತಿ ವ್ಯಾಪ್ತಿಯ 23 ಗ್ರಾಮಗಳ ಸ್ವಚ್ಛತೆ ಕಾಪಾಡಲು, ಚರಂಡಿ ಮಣ್ಣು, ಗ್ರಾಮಗಳ ಕಸ ವಿಲೇವಾರಿಗೆಂದು ಮೂರು ವರ್ಷದ ಹಿಂದೆ 9 ಲಕ್ಷ ರೂ. ವೆಚ್ಚದಲ್ಲಿ ಟ್ರ್ಯಾಕ್ಟರ್ ಖರೀದಿಸಲಾಗಿದೆ. ಆದರೆ, ಈ ಟ್ರ್ಯಾಕ್ಟರ್ ಒಂದು ದಿನವೂ ಗ್ರಾಮಗಳಲ್ಲಿ ಸಂಚರಿಸಿ ಕಸ ಸಂಗ್ರಹಿಸಿದ್ದನ್ನು ಕಂಡಿಲ್ಲ. ಗ್ರಾಮದಲ್ಲಿ ಟ್ರ್ಯಾಕ್ಟರ್ ನಿಲ್ಲಿಸಿ 20 ದಿನಗಳಾಗಿದ್ದು, ಕಸ, ವಿವಿಧ ತ್ಯಾಜ್ಯಗಳಿಂದ ತುಂಬಿ ದುರ್ವಾಸನೆ ಬೀರುತ್ತಿದೆ. ನಾಯಿಗಳು ಟ್ರಾೃಕ್ಟರ್ ಮೇಲೆ ಕಸ ಚೆಲ್ಲಾಪಿಲ್ಲಿ ಮಾಡುತ್ತಿವೆ. ಗ್ರಾಪಂ ಅಧಿಕಾರಿಗಳು ಇದ್ದಾರೋ ಇಲ್ಲವೋ ತಿಳಿಯದಂತಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಾರೆ.

"ನಿಂತಲ್ಲೇ ನಿಂತಿರುವ ಟ್ರಾೃಕ್ಟರ್ ಮೇಲೆ ಮತ್ತು ಚರಂಡಿ ಕೆಸರಿನಲ್ಲಿ ಕೋಳಿಗಳು, ನಾಯಿಗಳು ಚೆಲ್ಲಾಪಿಲ್ಲಿ ಮಾಡುತ್ತಿವೆ. ಕಸ ವಿಲೇವಾರಿ ಮಾಡದೇ 20 ದಿನಗಳಾಗಿದೆ. ಶುಚಿತ್ವ ನೈರ್ಮಲ್ಯ ಕಾಪಾಡುವಲ್ಲಿ ನಿರಾಸಕ್ತಿ ತೋರುತ್ತಿದ್ದಾರೆ. ಚರಂಡಿಗಳನ್ನೇ ಸರಿ ಮಾಡದ ಅಧಿಕಾರಿಗಳು ಇನ್ನು ಗ್ರಾಮಗಳನ್ನು ಉದ್ದಾರ ಮಾಡುವುದಾದರೂ ಹೇಗೆ ?" - ಆರ್.ಎಸ್.ವೆಂಕಟರವಣಪ್ಪ, ಗ್ರಾಮದ ಹಿರಿಯ ಮುಖಂಡರು. "ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಸರಿಪಡಿಸಿ ತ್ಯಾಜ್ಯ ನೀರು ಮುಖ್ಯರಸ್ತೆಗೆ ಹರಿಯದಂತೆ ವ್ಯವಸ್ಥೆ ಮಾಡಲಾಗುವುದು. ಟ್ರಾೃಕ್ಟರ್ ಅನ್ನು ಕಸ ವಿಲೇವಾರಿಗೆ ಬಳಸಲಾಗುವುದು. ಬೇಜವಾಬ್ದಾರಿ ಅಧಿಕಾರಿಗಳ, ನೌಕರರ ವಿರುದ್ಧ ಕ್ರಮ ಜರುಗಿಸಲಾಗುವುದು." - ಜಿ.ವಿ. ರಮೇಶ್ ಪ್ರಭಾರಿ ಇಒ ಚೇಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net