ಸಿದ್ದಾಪುರ ಗ್ರಾಮಸಭೆಗೆ ಜನರೇ ಗೈರು!

ಚಿತ್ರ 24ಎಸ್ ಡಿ ಪಿ 02
Published on
  • ಮಡಿಕೇರಿ: ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿಯ ಗ್ರಾಮಸಭೆಗೆ ಜನರೇ ಪಾಲ್ಗೊಳ್ಳದ ಕಾರಣ ಹಾಜರಿದ್ದ ಕೆಲವು ಗ್ರಾಮಸ್ಥರ ಒತ್ತಾಯದ ಮೇರೆಗೆ ಗ್ರಾಮ ಸಭೆ ರದ್ದುಗೊಳಿಸಲಾಯಿತು. ಮುಂದಿನ ಸಭೆಯ ದಿನಾಂಕ ನಿಗದಿಪಡಿಸಲಾಗುವುದೆಂದು ನೋಡಲ್ ಅಧಿಕಾರಿ ಎಂ.ಎಸ್.ಮೋಹನ್ ಹೇಳಿದರು.
  • ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಗ್ರಾಮ ಸಭೆ ನಿಗದಿಯಾಗಿತ್ತು. ಆದರೆ ಸಭೆಗೆ ಕರಡಿಗೋಡು, ಗುಹ್ಯ ಇತರ ಗ್ರಾಮಗಳಲ್ಲಿ ಈಗಾಗಲೇ ವಾರ್ಡ್ ಸಭೆ ನಡೆಸಿ ಗ್ರಾಮ ಸಭೆ ನಿಗದಿ ಮಾಡಲಾಗಿತ್ತು. ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ವಿಷಯ ತಿಳಿಸಿದ್ದರೂ ಗ್ರಾಮ ಸಭೆಗೆ ಕೆಲವು ಸದಸ್ಯರು ಕೂಡ ಭಾಗವಹಿಸಲಿಲ್ಲ.
  • ಸರ್ಕಾರದ ಯೋಜನೆಗಳಿಗೆ ಫಲಾನುಭವಿಗಳನ್ನು ಗುರುತಿಸುವಂತಹ ಕೆಲಸ ಗ್ರಾಮ ಸಭೆಯಲ್ಲಿ ಆಗಬೇಕಿದೆ. ಇಂತಹ ಮಹತ್ವದ ಸಭೆಗೆ ಸದಸ್ಯರೇ ಬಾರದಿದ್ದರೆ ಹೇಗೆ ಎಂದು ಗ್ರಾಮಸ್ಥರು ಗೈರಾದ ಸದಸ್ಯರಿಗೆ ಛೀಮಾರಿ ಹಾಕಿದರು. ಗ್ರಾಮಸಭೆಗೆ ವಿವಿಧ ಇಲಾಖೆಯ ಅಧಿಕಾರಿಗಳು ಗೈರಾಗಿದ್ದರಿಂದ ಗ್ರಾಮಸಭೆ ನಡೆಸಬಾರದು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
  • ಪಿಡಿಒ ನಡವಳಿಕೆ ಬಗ್ಗೆ ಖಂಡನೆ: ಸಿದ್ದಾಪುರ ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಕೊರತೆ ಹಿನ್ನೆಲೆಯಲ್ಲಿ ಗ್ರಾಮ ಸಭೆ ಮುಂದೂಡುವ ಬಗ್ಗೆ ನಡೆದ ಮಾತಿನ ಚಕಮಕಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಈ ಸಭೆ ಮೂಂದೂಡಿದ್ದು, ಮುಂದೆ ಗ್ರಾಮಸ್ಥರಿಲ್ಲದಿದ್ದರೂ ಗ್ರಾಮ ಸಭೆ ನಡೆಸುತ್ತೇನೆ. ಮುಂದಿನ ಸಭೆಗೆ ಕೋರಂ ಅವಶ್ಯಕತೆ ಇಲ್ಲ ಎಂದು ಹೇಳಿರುವುದನ್ನು ನಾಗರಿಕ ಹೋರಾಟ ಸಮಿತಿ ಸಂಚಾಲಕ ಅನಿಲ್ ಕುಮಾರ್ ಖಂಡಿಸಿದರು.
  • ಗ್ರಾಮ ಸಭೆಯ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿ ಗ್ರಾಮ ಸಭೆ ನಡೆಸಬೇಕಾದ ಅಧಿಕಾರಿ ಈ ರೀತಿಯಲ್ಲಿ ಬೇಜಾವಾಬ್ದಾರಿ ಹೇಳಿಕೆ ನೀಡಿದ್ದು ಅವರ ನಡವಳಿಕೆ ತಿದ್ದಿ ಕೊಳ್ಳುವುದು ಉತ್ತಮ ಇಲ್ಲದಿದ್ದರೆ ಸಾರ್ವಜನಿಕರನ್ನು ಒಗ್ಗೂಡಿಸಿ ಅವರ ಏಕಾಧಿಪತ್ಯದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net