ಅತಿಕ್ರಮಣ ತೆರವು ಕಾರ್ಯಾಚರಣೆಗೆ ಜನರ ಮೆಚ್ಚುಗೆ

People appreciate the encroachment clearance operation
ಇಂಡಿ ಪಟ್ಟಣದ ಹಳೇ ಸಾಲೋಟಗಿ ರಸ್ತೆಯಲ್ಲಿ ಅತಿಕ್ರಮಣವಾದ ಜಾಗದ ಕುರಿತು ಕಂದಾಯ ಉಪವಿಭಾಗಾಧಿಕಾರಿ ಅಬೀದ್​ ಗದ್ಯಾಳ, ಪುರಸಭೆಯ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಅವರಿಗೆ ಪುರಸಭೆಯ ಸದಸ್ಯ ಅನೀಲಗೌಡ ಬಿರಾದಾರ ಮಾಹಿತಿ ನೀಡುತ್ತಿರುವುದು.
Published on

ಇಂಡಿ: ಪಟ್ಟಣದ ಗಣಪತಿ ಗುಡಿಯಿಂದ ಮಿನಿ ವಿಧಾನಸೌಧದವರೆಗಿನ ರಸ್ತೆಯಲ್ಲಿ ಅತಿಕ್ರಮಣವಾಗಿದ್ದ ಜಾಗವನ್ನು ಮೂರು ಜೆಸಿಬಿ ಯಂತ್ರಗಳ ಮೂಲಕ ಶನಿವಾರ ಕಂದಾಯ ಉಪವಿಭಾಗಾ-ಧಿಕಾರಿ ಅಬೀದ್​ ಗದ್ಯಾಳ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. ಇನ್ನೂ ಕಾರ್ಯಾಚರಣೆ ಮುಂದುವರಿಯಲಿದೆ.

ಪಟ್ಟಣದ ಮಿನಿ ವಿಧಾನಸೌಧದಿಂದ ಸಾಲೋಟಗಿ ಗ್ರಾಮಕ್ಕೆ ಹೋಗುವ ಹಳೇ ರಸ್ತೆಯನ್ನು ಪಟ್ಟಣದ ಮಧ್ಯಭಾಗದಲ್ಲಿ ಅಂದಾಜು 200 ಮೀಟರ್​ ರಸ್ತೆಯನ್ನು ಕಳೆದ 25 ವರ್ಷಗಳಿಂದ ಸಾರ್ವಜನಿಕರು ಮತ್ತು ಪೊಲೀಸ್​ ಇಲಾಖೆಯಿಂದ ಒತ್ತುವರಿಯಾಗಿತ್ತು.

ಇದರಿಂದ ಈ ಭಾಗದಲ್ಲಿ ಗಟಾರದ ನೀರು ನಿಂತು, ಅದನ್ನು ಸ್ವಚ್ಛಗೊಳಿಸಲು ಕೂಡ ಪುರಸಭೆಯ ಕಾರ್ಮಿಕರಿಗೆೆ ಸ್ಥಳವಿಲ್ಲದಂತಾಗಿತ್ತು. ಗಬ್ಬು ವಾಸನೆ ಹರಡಿ, ಸಾಂಕ್ರಾಮಿಕ ರೋಗಗಳಿಗೆ ಭೀತಿ ಹೆಚ್ಚಾಗಿತ್ತು.

ಈ ಬಗ್ಗೆ ಸಾರ್ವಜನಿಕರು ಹಲವಾರು ಸಲ ಉಪ ಕಂದಾಯ ವಿಭಾಗಾಧಿಕಾರಿ ಹಾಗೂ ಪುರಸಭೆಯ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸುತ್ತ ಬರಲಾಗಿತ್ತು. ಈ ಬಗ್ಗೆ ಒಂದೆರಡು ಬಾರು ಲೋಕಾಯುಕ್ತರಿಗೂ ಮನವಿ ಸಲ್ಲಿಸಲಾಗಿತ್ತು.

ಇತ್ತೀಚೆಗೆ ಈ ಬಗ್ಗೆ ಎಲ್ಲವನ್ನೂ ಗಣನೆಗೆ ತೆಗೆದುಕೊಂಡಿರುವ ಕಂದಾಯ ಉಪವಿಭಾಗಾಧಿಕಾರಿ ಅಬೀದ್​ ಗದ್ಯಾಳ ಮತ್ತು ಪುರಸಭೆಯ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಪುರಸಭೆಯ ಸದಸ್ಯ ಅನೀಲಗೌಡ ಬಿರಾದಾರ ಅವರು ಸಿಟಿ ಸರ್ವೆ ಇಲಾಖೆಯಿಂದ ರಸ್ತೆ ಒತ್ತುವರಿಯಾದ ಬಗ್ಗೆ ಸರ್ವೆ ಕಾರ್ಯ ಮಾಡಿಸಿದ್ದರು.

ತೆರವು ಕಾರ್ಯಕ್ಕೆ ಈ ಭಾಗದ ಸಾರ್ವಜನಿಕರು, ಪಟ್ಟಣ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಪಟ್ಟಣದಲ್ಲಿ ಇನ್ನೂ ಹಲವಾರು ರಸ್ತೆಗಳು ಅತಿಕ್ರಮಣಗೊಂಡಿದ್ದನ್ನೂ ಕೂಡ ಗುರುತಿಸಿ ತೆರವು ಮಾಡಬೇಕು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net