ಜಂಕ್‌ಫುಡ್‌ಗೆ ಮಾರುಹೋಗಿರುವ ಜನರು: ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ವಿ.ಆರ್.ಶೈಲಜಾ ಬೇಸರ

12
Published on

ಮೈಸೂರು: ಇತ್ತೀಚೆಗೆ ಜನರು ಜಂಕ್‌ಫುಡ್‌ಗೆ ಮಾರುಹೋಗಿದ್ದು, ಆರೋಗ್ಯದ ಬಗ್ಗೆ ನಿರ್ಲಕ್ಷೃವಹಿಸಿದ್ದಾರೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ವಿ.ಆರ್.ಶೈಲಜಾ ಬೇಸರ ವ್ಯಕ್ತಪಡಿಸಿದರು.
ಮೈಸೂರು ವಿಶ್ವವಿದ್ಯಾಲಯದ ಆಹಾರ ವಿಜ್ಞಾನ ಮತ್ತು ಪೋಷಣೆ ಅಧ್ಯಯನ ವಿಭಾಗದಿಂದ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಹಳೇ ವಿದ್ಯಾರ್ಥಿ ಸಂಘ ಉದ್ಘಾಟನೆ ಮತ್ತು ಸುವರ್ಣ ಮಹೋತ್ಸವದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಹುತೇಕ ಜನರ ಜೀವನ ಕಂಪನಿಗಳ ಕೈಯಲ್ಲಿ ಇದೆ. ಅವರು ನೀಡುವ ಔಷಧವನ್ನೇ ಜನರು ನಂಬಿ ಜೀವನ ನಡೆಸುವಂತಾಗಿದೆ. ಇದರಿಂದ ವಿಶ್ವದಲ್ಲಿ ಭಾರತ ಅತಿ ಹೆಚ್ಚು ರಕ್ತದೊತ್ತಡ ಮತ್ತು ಮಧುಮೇಹಿಗಳಿರುವ ದೇಶವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇಂದಿನ ಜನರು ಪೌಷ್ಟಿಕ ಆಹಾರದ ಕಡೆಗೆ ಹೆಚ್ಚಿನ ಗಮನ ನೀಡದೆ ಜಂಕ್‌ಫುಡ್ ಕಡೆಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಹಾಗಾಗಿ ಜನಸಾಮಾನ್ಯರಲ್ಲಿ ಆಹಾರ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಆಹಾರ ಸೇವನೆಯಲ್ಲಿನ ಲೋಪವೇ ದೇಶದಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಲು ಕಾರಣವಾಗಿದ್ದು, ಈ ನಿಟ್ಟಿನಲ್ಲಿ ಪರಿಹಾರ ಹುಡುಕುವ ಕೆಲಸವನ್ನು ಮೈಸೂರು ವಿವಿಯ ಆಹಾರ ವಿಜ್ಞಾನ ಮತ್ತು ಪೋಷಣೆ ಅಧ್ಯಯನ ವಿಭಾಗ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಡಾ.ಅಸ್ನಾ ಉರೂಜ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್‌ನ ಮಾಜಿ ನಿರ್ದೇಶಕ ಡಾ.ಬಿ.ಸೆಸಿಕರನ್, ಪ್ರಾಧ್ಯಾಪಕರಾದ ಡಾ.ಸಿ.ಸರಸ್ವತಿ, ಡಾ.ಶಶಿಕಲಾ ಪುಟ್ಟರಾಜು, ಡಾ.ಜಮುನಾ ಪ್ರಕಾಶ್, ಹೇಮಲತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net