85 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ವೋಟಿಂಗ್​ಗೆ ಅವಕಾಶ

Vijayavani-logo
Published on

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ 85 ವರ್ಷ ಮೇಲ್ಪಟ್ಟವರು ಹಾಗೂ ಅಂಗವಿಕಲರು ತಮ್ಮ ಮನೆಗಳಿಂದಲೇ ಮತದಾನ ಮಾಡಲು ಅವಕಾಶ ನೀಡಿದ್ದು, ಇಂತಹವರ ಪಟ್ಟಿಯನ್ನು ಸಿದ್ಧಪಡಿಸುವ ಹೊಣೆಯನ್ನು ಬೂತ್ ಮಟ್ಟದ ಅಧಿಕಾರಿ/ಸಿಬ್ಬಂದಿಗಳಿಗೆ ವಹಿಸಲಾಗಿದೆ.

ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿಯವರ ವ್ಯಾಪ್ತಿಗೆ ಬರುವ ಬೆಂಗಳೂರು ಉತ್ತರ, ಕೇಂದ್ರ ಹಾಗೂ ದಕ್ಷಿಣ ಸೇರಿ 3 ಲೋಕಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿರುವ 85 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ಅಂಗವಿಕಲರಿಗೆ (ಶೇ.40ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರುವವರು) ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೂತ್ ಮಟ್ಟದ ಅಧಿಕಾರಿ/ಸಿಬ್ಬಂದಿಗಳು ಗುರುವಾರದಿಂದ (ಮಾ. 21) ಮತದಾರರ ಪಟ್ಟಿಯನ್ವಯ ಮನೆ-ಮನೆ ಭೇಟಿ ನೀಡಿ ನಮೂನೆ 12ಡಿ ಮೂಲಕ ಅರ್ಹರ ಮಾಹಿತಿಯನ್ನು ಭರ್ತಿ ಮಾಡಿಕೊಳ್ಳಲು ಚಾಲನೆ ನೀಡಲಾಗುತ್ತಿದೆ.

ಒಮ್ಮೆ ಈ ಸೌಲಭ್ಯ ಹೊಂದಲು ಅರ್ಜಿಗೆ ಸಹಿ ಹಾಕಿದ ಬಳಿಕ ಅಂತಹವರು ಮತಗಟ್ಟೆಗೆ ತೆರಳಿ ಮತ ಚಲಾಯಿಸುವ ಅವಕಾಶ ಇರುವುದಿಲ್ಲ. ಆದರೆ, ಸೌಲಭ್ಯ ನಿರಾಕರಿಸುವವರು ಎಂದಿನಂತೆ ತಮ್ಮ ವ್ಯಾಪ್ತಿಯ ಮತಗಟ್ಟೆಗೆ ತೆರಳಿ ವೋಟಿಂಗ್ ಮಾಡಲು ಅವಕಾಶ ಇದೆ.

ವೆಬ್​ಸೈಟ್ ಮೂಲಕ ನೋಂದಣಿಗೆ ಅವಕಾಶ:

ಬಿಬಿಎಂಪಿ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲರ ಮನೆ-ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನಮೂನೆ 12ಡಿ ಪಡೆದು ದೃಢೀಕರಿಸಲು ಸಾಧ್ಯವಾಗದಿದ್ದಲ್ಲಿ ಚುನಾವಣಾ ಆಯೋಗದ ವೆಬ್‌ಸೈಟ್​ಗೆ ಭೇಟಿ ನೀಡಿ ಅಗತ್ಯ ನಮೂನೆಯನ್ನು ಭರ್ತಿ ಮಾಡಿ ಸಂಬಂಧಿಸಿದ ಚುನಾವಣಾಧಿಕಾರಿಗಳಿಗೆ ನೇರವಾಗಿ ಸಲ್ಲಿಸುವ ಅವಕಾಶ ಇದೆ ಎಂದು ನಗರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net