

ಮಂಗಳೂರು: ನಿವೃತ್ತ ಸರ್ಕಾರಿ ಅಧಿಕಾರಿ, ಸಿಬ್ಬಂದಿ ತಮ್ಮ ಪಿಂಚಣಿಗೆ ಸಂಬಂಧಿಸಿ ಯಾವುದೇ ರೀತಿಯ ಸಮಸ್ಯೆಗಳಿದ್ದರೆ ನೇರವಾಗಿ ದೂರವಾಣಿ ಮೂಲಕ ಸಂಪರ್ಕಿಸಿದರೆ ಸ್ಪಂದನೆ ನೀಡಲಾಗುವುದು ಎಂದು ರಾಜ್ಯ ಪಿಂಚಣಿ ಪಾವತಿ ಮತ್ತು ನಿರ್ವಹಣಾ ಖಜಾನೆಯ ಡೆಪ್ಯುಟಿ ಅಕೌಂಟೆಂಟ್ ಜನರಲ್ ಆರ್.ರಾಜರಾಜೇಶ್ವರಿ ತಿಳಿಸಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಕಚೇರಿಯ ವೀಡಿಯೋಕಾನ್ಫರೆನ್ಸ್ ಸಭಾಂಗಣದಲ್ಲಿ ಮಂಗಳವಾರ ಕಾರವಾರ, ಉಡುಪಿ ಹಾಗೂ ದ.ಕ. ಜಿಲ್ಲೆಗಳ ಪಿಂಚಣಿ ಅದಾಲತ್‌ನಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು, ಸಮಸ್ಯೆಗಳಿದ್ದರೆ ಪಿಂಚಣಿ ಅದಾಲತ್‌ಗಾಗಿ ಅಥವಾ ಆರ್‌ಟಿಐ ಮೂಲಕ ಮಾಹಿತಿಗಾಗಿ ಕಾಯಬೇಕಾದ ಅಗತ್ಯವಿಲ್ಲ ಎಂದರು.
ಪಿಂಚಣಿ ಅದಾಲತ್ ಆರು ತಿಂಗಳಿಗೊಮ್ಮೆ ನಡೆಸಬೇಕೆಂಬ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಅದಾಲತ್ ನಡೆಸಿ ಸಮಸ್ಯೆ ಅರಿತುಕೊಳ್ಳಬೇಕಿರುವುದರಿಂದ ಆರು ತಿಂಗಳಿಗೊಮ್ಮೆ ನಡೆಸಲು ಕಷ್ಟ ಸಾಧ್ಯವಾಗುತ್ತಿದೆ. ಹಾಗಿದ್ದರೂ ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲು ಪ್ರಯತ್ನಿಸುವುದಾಗಿ ಹೇಳಿದರು.
ಚುನಾವಣೆಯ ಕಾರಣದಿಂದ ಖಜಾನೆ ಇಲಾಖೆಯ ಅಧಿಕಾರಿ ಸಿಬ್ಬಂದಿ ಆ ಕರ್ತವ್ಯದಲ್ಲಿ ನಿರತರಾಗಿದ್ದ ಕಾರಣ ಕಳೆದ ಒಂದು ತಿಂಗಳಿನಿಂದ ಹಲವು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿಯಾಗಿವೆ. ಶೀಘ್ರದಲ್ಲೇ ಎಲ್ಲಾ ಸಮಸ್ಯೆಗಳು ಬಗೆಹರಿಯಲಿವೆ ಎಂದು ಅವರು ಹೇಳಿದರು.
ಉಡುಪಿ ಮತ್ತು ಕಾರವಾರ ಜಿಲ್ಲೆಗಳ ಪಿಂಚಣಿದಾರರ ಸಮಸ್ಯೆಗಳನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಆಲಿಸಿದ ಅವರು, ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ದ.ಕ. ಜಿಲ್ಲೆಯ ಪಿಂಚಣಿದಾರರರಿಂದ ಸಮಸ್ಯೆಗಳನ್ನು ನೇರವಾಗಿ ತಿಳಿದುಕೊಂಡರು. ಎಲ್ಲಾ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆ ಹರಿಸುವುದಾಗಿ ಹೇಳಿದರು.
ಸುಮಾರು 50ಕ್ಕೂ ಅಧಿಕ ಮಂದಿ ಪಿಂಚಣಿ ಅದಾಲತ್‌ನಲ್ಲಿ ಭಾಗವಹಿಸಿದ್ದು, ದ.ಕ. ಜಿಲ್ಲೆಯಲ್ಲಿ ಸುಮಾರು 10 ಮಂದಿ ಪಿಂಚಣಿದಾರರು ಸಮಸ್ಯೆಗಳನ್ನು ಲಿಖಿತವಾಗಿ ಸಲ್ಲಿಸಿದರು.
ಬ್ಯಾಂಕ್‌ಗಳಲ್ಲಿ ಪಿಂಚಣಿದಾರರಿಗೆ ಹಿರಿಯ ನಾಗರಿಕರ ಕೌಂಟರ್ ತೆರೆಯಬೇಕು. ಕಾರವಾರದಲ್ಲಿ ಈಗಾಗಲೇ ಈ ವ್ಯವಸ್ಥೆ ಇದೆ ಎಂದು ಕಾರವಾರದ ಪಿಂಚಣಿದಾರರ ಸಂಘದ ಅಧ್ಯಕ್ಷರು ಒತ್ತಾಯಿಸಿದರು. ಉಡುಪಿಯ ಪಿಂಚಣಿದಾರರ ಸಂಘದ ಸದಸ್ಯರೊಬ್ಬರು ಪಿಂಚಣಿ ಅದಾಲತ್ ಪ್ರತಿ ಆರು ತಿಂಗಳಿಗೊಮ್ಮೆ ನಡೆಸಬೇಕು ಎಂದು ಬೇಡಿಕೆ ಇರಿಸಿದರು.
ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಲೆಕ್ಕಾಧಿಕಾರಿಗಳಾದ ಗಾಯತ್ರಿ, ನಾಗಸೇನಾ, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಕಾಂತ್, ಖಜಾನೆ ಉಪನಿರ್ದಶಕ ಗುರುರಾಜ್ ಭಟ್ ಮೊದಲಾದವರಿದ್ದರು. ವಿಡಿಯೋ ಕಾನ್ಫರೆನ್ಸ್‌ನಲ್ಲಿ ರಾಜ್ಯ ಪಿಂಚಣಿ ಪಾವತಿ ಮತ್ತು ನಿರ್ವಹಣಾ ಖಜಾನೆಯ ಜಂಟಿ ನಿರ್ದೇಶಕಿ ಆರ್. ಮಾಳವಿಕ, ಸಣ್ಣ ಉಳಿತಾಯ ಇಲಾಖೆ ನಿರ್ದೇಶಕಿ ವಾಣಿ ಬಿ. ಉಪಸ್ಥಿತರಿದ್ದರು.