

ಪಡುಬಿದ್ರಿ: 14 ವರ್ಷವಾದರೂ ಆಧಾರ್ ಕಾರ್ಡ್ ಇಲ್ಲದೇ ಅಂಗವಿಕಲ ವೇತನ ಪಡೆಯಲು ಸಾಧ್ಯವಾಗದ ಪಲಿಮಾರು ಗ್ರಾಮದ ಅಡ್ವೆಯ ದಿವ್ಯಾಂಗ ಬಾಲಕ ಆರೋಗ್ಯ ಕೀರ್ತನ್‌ಗೆ ಆಧಾರ್ ಕಾರ್ಡ್ ಮಾಡಿಸಿ ಒಂದೂವರೆ ತಿಂಗಳಿನಲ್ಲಿಯೇ ಪಿಂಚಣಿ ಮಂಜೂರಾತಿ ಪತ್ರ ತಲುಪಿಸುವ ಮೂಲಕ ಕಾಪು ತಹಸೀಲ್ದಾರ್ ಪ್ರತಿಭಾ ಆರ್. ಮಾನವೀಯ ಕಾರ್ಯ ಮಾಡಿದ್ದಾರೆ.
ಒಂದೂವರೆ ತಿಂಗಳ ಹಿಂದೆ ಇಡೀ ಆಧಾರ್ ಕೇಂದ್ರವನ್ನೇ ಬಾಲಕನ ಮನೆ ಬಾಗಿಲಿಗೆ ತಹಸೀಲ್ದಾರ್ ಅವರು ಕರೆದೊಯ್ದು ಕಾರ್ಡ್ ಮಾಡಿಸಿದ್ದರು. ನಂತರ ಸತತವಾಗಿ ವೈದ್ಯರ ಸಂಪರ್ಕದಲ್ಲಿದ್ದ ತಹಸೀಲ್ದಾರ್ ಶೀಘ್ರವಾಗಿ ಅಂಗವಿಕಲ ಕಾರ್ಡ್ ಬರುವಂತೆ ಮಾಡಿದರು. ಅಂಗವಿಕಲ ಕಾರ್ಡ್ ಬಂದ ಕೂಡಲೇ ಕಾರ್ಯಪ್ರವೃತ್ತರಾದ ಪ್ರತಿಭಾ ಅಂಗವಿಕಲ ವೇತನ ಮಂಜೂರು ಮಾಡಿದ್ದಾರೆ.
ಬಾಲಕನ ಮನೆ ಬಾಗಿಲಿಗೆ ಬಂದು ಪಿಂಚಣಿ ಮಂಜೂರಾತಿ ಪತ್ರ ನೀಡುವ ಮೂಲಕ ಪಾಲಕರ ಮುಖದಲ್ಲಿ ನಗು ತರಿಸುವ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಗ್ರಾಮ ಆಡಳಿತಾಧಿಕಾರಿ ಸುನೀಲ್ ಉಪಸ್ಥಿತರಿದ್ದರು.