

ಎಂ.ಯೋಗಿಶ ಮೇಟಿಕುರ್ಕೆ ಹೊಸದುರ್ಗ: ಸಂಧ್ಯಾ ಸುರಕ್ಷಾ, ವಿಧವಾ, ಅಂಗವಿಕಲ ವೇತನ ಸೇರಿ ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಟಾನದಲ್ಲಿ ತಾಲೂಕಿನಲ್ಲಿ ಬಹಳಷ್ಟು ಲೋಪವಾಗಿದೆ ಎಂಬ ಆರೋಪ ದಟ್ಟವಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ದಿವ್ಯಾಪ್ರಭು ಆ.14ರಂದು ತನಿಖಾ ತಂಡ ರಚಿಸಿದ್ದಾರೆ.
ವಯೋವೃದ್ಧರು, ನಿರ್ಗತಿಕರು, ವಿಧವೆಯರು, ಅಂಗವಿಕಲರು ಹಾಗೂ ಬಡ ಜನರ ಕಲ್ಯಾಣಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಮಾನದಂಡ ಅನುಸರಿಸಿಲ್ಲ. ಬಹಳಷ್ಟು ಅನರ್ಹರು ಯೋಜನೆ ವ್ಯಾಪ್ತಿಗೆ ಸೇರ್ಪಡೆಗೊಂಡಿದ್ದಾರೆ ಎಂಬ ಆರೋಪ ಇದೆ.
ತಾಲೂಕಿನ ಶ್ರೀರಾಂಪುರ ಹೋಬಳಿಯಲ್ಲಿ ಕೆಲವು ಅನರ್ಹ ಪ್ರಕರಣಗಳಿಗೆ ಮಾಶಾಸನ ಮಂಜೂರು ಮಾಡಲಾಗಿದೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಆಕ್ಷೇಪ ವ್ಯಕ್ತಪಡಿಸಿದ್ದರು. ಜತೆಗೆ ಸಾರ್ವಜನಿಕವಾಗಿ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ.
ಗ್ರೇಡ್-2 ತಹಸೀಲ್ದಾರ್ ಆರ್.ಪ್ರತಿಭಾ, ತಾಲೂಕು ಆರೋಗ್ಯಾಧಿಕಾರಿ, ಜಿಲ್ಲಾಧಿಕಾರಿ ಕಚೇರಿಯ ಸಾಮಾಜಿಕ ಭದ್ರತೆ ಹಾಗೂ ಪಿಂಚಣಿಗಳ ಶಾಖೆಯ ಸಹಾಯಕ ನಿರ್ದೇಶಕರು ತನಿಖಾ ತಂಡದಲ್ಲಿದ್ದಾರೆ.
ಸತ್ಯ ಶೋದನೆಗಾಗಿ ರಚನೆಯಾಗಿರುವ ತಂಡದ ಸದಸ್ಯರು ಶ್ರೀರಾಂಪುರ ಹೋಬಳಿಯ ಎಲ್ಲ ಗ್ರಾಮಗಳಿಗೂ ಭೇಟಿ ನೀಡಿ ಸಾಮಾಜಿಕ ಭದ್ರತಾ ಯೋಜನೆಯಡಿ ಮಾಶಾಸನ ಪಡೆಯುತ್ತಿರುವ ಫಲಾನುಭವಿಗಳ ಭೌತಿಕ ಸ್ಥಿತಿಗತಿ ಖುದ್ದಾಗಿ ಪರಿಶೀಲನೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ನೀಡಲಿದ್ದಾರೆ. ಬಳಿಕ ಜಿಲ್ಲಾಧಿಕಾರಿಗಳು ಅನರ್ಹರನ್ನು ಯೋಜನೆ ವ್ಯಾಪ್ತಿಯಿಂದ ರದ್ದು ಮಾಡಲು ಕ್ರಮಕೈಗೊಳ್ಳಲಿದ್ದಾರೆ.
*ಶ್ರೀರಾಂಪುರ ಹೋಬಳಿಯಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಅನರ್ಹರಿಗೂ ಸರ್ಕಾರದ ಹಣ ಮಂಜೂರು ಮಾಡಲಾಗಿದೆ ಎನ್ನುವ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಅಪರ ಜಿಲ್ಲಾಧಿಕಾರಿ ತನಿಖಾ ತಂಡ ರಚಿಸಿದ್ದಾರೆ. ಈಗಾಗಲೇ ತನಿಖೆ ಆರಂಭವಾಗಿದ್ದು, ಶೀಘ್ರದಲ್ಲಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗುವುದು. - ಪಟ್ಟರಾಜ ಗೌಡ ತಹಸೀಲ್ದಾರ್