

ಶ್ರವಣಬೆಳಗೊಳ: ಪಟ್ಟಣದ ನಾಡಕಚೇರಿ ಆವರಣದಲ್ಲಿ ಮಂಗಳವಾರ ಕಂದಾಯ ಇಲಾಖೆ ವತಿಯಿಂದ ಪೌತಿ ಖಾತೆ ಆಂದೋಲನ ಮತ್ತು ಪಿಂಚಣಿ ಅದಾಲತ್ ನಡೆಯಿತು.
ಕಾರ್ಯಕ್ರಮಕ್ಕೆ ಶ್ರವಣಬೆಳಗೊಳದ ಸುತ್ತಮುತ್ತಲ ಗ್ರಾಮಸ್ಥರು ಅಗಮಿಸಿ ವೃದ್ಧಾಪ್ಯ ವೇತನ, ಪಿಂಚಣಿ ಹಾಗೂ ಪೌತಿ ಖಾತೆ ಕುರಿತಂತೆ ಅರ್ಜಿ ಸಲ್ಲಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ನವೀನ್ ಕುಮಾರ್ ಮಾತನಾಡಿ, ರೈತರು ಸಮಸ್ಯೆಗಳಿದ್ದಲ್ಲಿ ತಾಲೂಕು ಕಚೇರಿಗೆ ಬರುವ ಬದಲು ಹೋಬಳಿ ಕೇಂದ್ರದಲ್ಲಿರುವ ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದರೆ ಹತ್ತು ದಿನಗಳಲ್ಲಿ ದಾಖಲಾತಿಗಳನ್ನು ಪರಿಶೀಲಿಸಿ, ಶೀಘ್ರವಾಗಿ ಸಮಸ್ಯೆ ಪರಿಹರಿಸಲಾಗುವುದು ಎಂದು ಹೇಳಿದರು.
ಈ ವೇಳೆ 4 ಜನರಿಗೆ ವಿಧವಾ ವೇತನ, 10 ಜನರಿಗೆ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, 6 ಜನರಿಗೆ ಅಂಗವಿಕಲ ಪೋಷಣಾ ವೇತನ ಮಂಜೂರಾತಿ ಪತ್ರಗಳನ್ನು ವಿತರಣೆ ಮಾಡಲಾಯಿತು. 23 ಪೌತಿಖಾತೆ ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ದೇವರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಅಫ್ತಾಬ್ ಪಾಷಾ, ಉಪಾಧ್ಯಕ್ಷೆ ಕಾವ್ಯಾ ಕಿರಣ್, ರೈತ ಸಂಘದ ಜಿಲ್ಲಾಧ್ಯಕ್ಷ ಮೀಸೆ ಮಂಜಣ್ಣ, ಹೋಬಳಿ ಜೆಡಿಎಸ್ ಅಧ್ಯಕ್ಷ ಸಾಗರ್ ಗೌಡ, ಕಂದಾಯ ನಿರೀಕ್ಷಕ ಕೆ.ಪಿ.ರಮೇಶ್, ಗ್ರಾಮ ಆಡಳಿತಾಧಿಕಾರಿಗಳಾದ ಬಿ.ಕೆ.ನವೀನ್ ಕುಮಾರ್, ಎಲ್.ಸುಧೀರ್, ಜಿ.ಸಿ.ವಿಜಯಕುಮಾರ್, ಬಿ.ಪಿ.ಮಂಜು, ಜಿ.ಕೆ. ವೀಣಾ, ಎನ್.ನಂದಿನಿ ಭಾಗವಹಿದ್ದರು.