

ಮೈಸೂರು: ಪೆನ್‌ಡ್ರೈವ್ ಹಂಚಿಕೆ ಪ್ರಕರಣ ಸಂಬಂಧ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಚಾಲಕ ಕಾರ್ತಿಕ್ ಸೇರಿದಂತೆ ಪ್ರಮುಖ ಪಾತ್ರಧಾರಿಗಳನ್ನು ಎಸ್‌ಐಟಿ ವಿಚಾರಣೆಗೊಳಪಡಿಸಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಒತ್ತಾಯಿಸಿದರು.
ಕಾರ್ತಿಕ್‌ರನ್ನು ಎಸ್‌ಐಟಿ ಅಥವಾ ಡಿಕೆಶಿ ತಂಡ ರಕ್ಷಣೆ ಮಾಡುತ್ತಿದೆಯೇ ಎನ್ನುವುದನ್ನು ಮೊದಲು ಪತ್ತೆ ಮಾಡಬೇಕು. 1980ರಿಂದಲೂ ಸಿಡಿ ಫ್ಯಾಕ್ಟರಿ ಇಟ್ಟುಕೊಂಡಿರುವ ಅವರು ಸಿಡಿ ಶಿವು ಆಗಿದ್ದಾರೆ. ಅವರೊಂದಿಗೆ ಯಾರ್ಯಾರು ಸೇರಿದ್ದಾರೆ ಎಂಬುದರ ಬಗ್ಗೆ ತನಿಖೆ ಆಗಬೇಕಿದೆ ಎಂದು ಒತ್ತಾಯಿಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ಇಮೇಜ್ ಸ್ವಲ್ಪ ಮಟ್ಟಿಗೆ ಹಾಳು ಮಾಡಿದ್ದಾರೆ. ಈ ಕುಟುಂಬವನ್ನು ನಾಶ ಮಾಡದೆ ಬಿಡುವುದಿಲ್ಲವೆಂದು ಡಿಕೆಶಿ ಅವರೇ ಹೇಳಿದ್ದಾರೆ. ಯಾವ ರೀತಿಯಲ್ಲಿ ಹುನ್ನಾರ ಮಾಡಿದ್ದಾರೆ ಎನ್ನುವುದನ್ನು ಗಮನಿಸಿದ್ದೇನೆ.
ಪ್ರಜ್ವಲ್‌ಗೆ ಚಾಲಕನಾಗಿದ್ದ ಕಾರ್ತಿಕ್ ಮೊದಲು ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಭೇಟಿ ಮಾಡಿದ್ದ. ನಂತರ ಬೆಂಗಳೂರಿನಲ್ಲಿ ಡಿ.ಕೆ.ಸುರೇಶ್‌ಗೆ ಪೆನ್‌ಡ್ರೈವ್ ಕೊಟ್ಟಾಗ ಅದನ್ನು ಕಾಫಿ ಮಾಡಿಕೊಂಡು ಸಮಯ ಬಂದಾಗ ಬೇಕಾಗುತ್ತದೆ ಅಂತ ವಾಪಸ್ ಮಾಡಿದ್ದು, ಚುನಾವಣೆಗೆ ನಾಲ್ಕು ದಿನ ಇರುವಾಗ ಯಾವ ರೀತಿ ಹಂಚಿಕೆ ಆಗಿದೆ ಎಂಬುದು ಗೊತ್ತಾಗಿದೆ. ಕಾರ್ತಿಕ್ ಎಲ್ಲಿ ಹೋಗಿದ್ದಾನೆ. ಎಸ್‌ಐಟಿಯೇ ಆತನ ರಕ್ಷಣೆಗೆ ನಿಂತಿದೆಯೇ ಅಥವಾ ಡಿಕೆಶಿ ತಂಡ ರಕ್ಷಿಸುತ್ತಿದೆಯೇ ಎನ್ನುವುದು ಗೊತ್ತಾಗಬೇಕು ಎಂದರು.
ವಿಡಿಯೋ ವಿತರಣೆ ಅಪರಾಧ ಅಲ್ಲವೇ?:
ನನಗೆ ಡಿ.ಕೆ. ಶಿವಕುವಾರ್ ಕಂಡರೆ ಅಸೂಯೆ ಅಂತ ಹೇಳಿದ್ದಾರೆ. ನಾನು ಯಾಕೆ ಅವರನ್ನು ನೋಡಿ ಅಸೂಯೆ ಪಡಲಿ. ಚುನಾವಣೆಗಾಗಿ ವಿಡಿಯೋ ವಿತರಿಸಿದ್ದು ಅಪರಾಧ ಅಲ್ವಾ? ವಿಡಿಯೋ ವಾಡಿದ್ದಕ್ಕಿಂತಾ ಅದರ ವಿತರಣೆ ಮಾಡಿದ್ದರಿಂದ ಅದು ಅಪರಾಧ ಅಲ್ವಾ? ಅಧಿಕಾರ ಯಾರ ಅಪ್ಪನ ಆಸ್ತಿಯಲ್ಲ. ರಾಜಕೀಯದಲ್ಲಿ ಏಳು ಬೀಳು ಅದು ಭಗವಂತನ ಇಚ್ಛೆ. ಇದರಲ್ಲಿ ಅಸೂಯೆ ಯಾಕೆ? ಪ್ರಧಾನಿ ಸ್ಥಾನವನ್ನೇ ಅತ್ಯಂತ ಸುಲಭವಾಗಿ ತೆರವು ಮಾಡಿದ ವಂಶ ನಮ್ಮದು. ಎಲ್ಲ ಅಧಿಕಾರವನ್ನು ನಾವು ನೋಡಿ ಆಗಿದೆ. ನಮಗೆ ಅಧಿಕಾರ ಬೇಡ ಅಂದರು ಬಂದಿದೆ. ನಾವು ಅಧಿಕಾರ ಹುಡುಕಿಕೊಂಡು ಹೋಗಿಲ್ಲ. ನಿಮಗೆ ಇದು ಗೊತ್ತಿರಲಿ ಎಂದು ತಿರುಗೇಟು ನೀಡಿದರು.