ಮೈಸೂರು: ನಿಗದಿತ ಸಮಯದಲ್ಲಿ ಸೂಕ್ತ ಮಾಹಿತಿ ನೀಡದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿರುವ ವಿಶೇಷ ತಹಸೀಲ್ದಾರ್ ಶಿವಕುಮಾರ್‌ಗೆ ಕರ್ನಾಟಕ ಮಾಹಿತಿ ಆಯೋಗ 25 ಸಾವಿರ ರೂ. ದಂಡ ವಿಧಿಸಿದೆ.
ಮಾಹಿತಿ ಹಕ್ಕು ಹೋರಾಟಗಾರರಾದ ವಕೀಲ ಸಾ.ತಿ.ಸದಾನಂದಗೌಡ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 2019-2020ನೇ ಸಾಲಿನಲ್ಲಿ ನೀಡಿರುವ ಬದಲಿ ನಿವೇಶನ ಕುರಿತು ಮಾಹಿತಿ ನೀಡುವಂತೆ 2023ರ ಮೇ 30ರಂದು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ 30 ದಿನಗಳಲ್ಲಿ ಮಾಹಿತಿ ನೀಡಬೇಕಾಗಿದ್ದರೂ, 270 ದಿನ ಕಳೆದರೂ ಸೂಕ್ತ ಮಾಹಿತಿ ನೀಡಿರಲಿಲ್ಲ. ಅಲ್ಲದೆ ಮಾಹಿತಿಯನ್ನು ಅರ್ಜಿದಾರರಿಗೆ ನೇರವಾಗಿ ತಿಳಿಸದೆ ಆನ್‌ಲೈನ್‌ನಲ್ಲಿ ಮಾಹಿತಿ ನೀಡಲು ಬರುವುದಿಲ್ಲ ಎಂದು ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿರುವ ಶಿವಕುಮಾರ್ ನಿರಾಕರಿಸಿದ್ದರು.
ಮಾಹಿತಿ ನೀಡಲು ವಿಳಂಬ ಧೋರಣೆ ಅನುಸರಿಸಿದ ಕ್ರಮ ಖಂಡಿಸಿ ಅರ್ಜಿದಾರ ಸದಾನಂದಗೌಡ ಅವರು ಮೇಲ್ಮನವಿ ಸಲ್ಲಿಸಿದ್ದರು. ಆದರೆ ವಿಚಾರಣೆಗೆ ಗೈರಾಗಿದ್ದಲ್ಲದೆ ಎರಡನೇ ವಿಚಾರಣೆಗೆ ನೀಡಿದ ಲಿಖಿತ ಉತ್ತರ ಸಮಂಜಸವಾಗಿಲ್ಲ ಎಂದು ನಿರ್ಧರಿಸಿದ ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ಡಾ.ಎಚ್.ಸಿ.ಸತ್ಯನ್ ಅವರು 25 ಸಾವಿರ ರೂ. ದಂಡ ವಿಧಿಸಿ ಮಾ.13ರಂದು ತೀರ್ಪು ನೀಡಿದ್ದಾರೆ.
ದಂಡದ ಮೊತ್ತವನ್ನು ಮುಂದಿನ ತಿಂಗಳ ವೇತನದಲ್ಲಿ ಜಮೆ ಮಾಡಿಕೊಂಡು ರಸೀದಿಯೊಂದಿಗೆ ಆಯೋಗಕ್ಕೆ ವರದಿ ಸಲ್ಲಿಸುವಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಿ.ಡಿ.ಶೇಖರ್ ಅವರಿಗೆ ಆಯುಕ್ತರು ಆದೇಶದಲ್ಲಿ ನಿರ್ದೇಶನ ನೀಡಿದ್ದಾರೆ.