ಹೌಸಿಂಗ್ ಫೆಡರೇಷನ್‌ಗೆ ದಂಡ

law-4617873_1920
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಿವೇಶನ ಖರೀದಿಗೆ ಹಣ ನೀಡಿದ್ದರೂ ಕ್ರಯ ಪತ್ರ ಮಾಡಿಕೊಡದ ಬೆಂಗಳೂರಿನ ಕರ್ನಾಟಕ ರಾಜ್ಯ ಕೋ ಆಪರೇಟಿವ್ ಹೌಸಿಂಗ್ ಫೆಡರೇಷನ್ ಲಿಮಿಟೆಡ್‌ಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿ ಶುಕ್ರವಾರ ಆದೇಶ ಹೊರಡಿಸಿದೆ.
ಜಿಲ್ಲೆಯ ನವಲಗುಂದ ತಾಲೂಕು ನಾಗನೂರ ಗ್ರಾಮ ನಿವಾಸಿ ಅಶೋಕ ಕರಮಳ್ಳಿ ಎಂಬುವವರು ಸ್ಥಳೀಯ ಶ್ರೀ ಕುಮಾರೇಶ್ವರ ಗೃಹ ನಿರ್ಮಾಣ ಅಭಿವೃದ್ಧಿ ಸಹಕಾರಿ ಸಂಘದವರು ಪರಿಚಯಿಸಿದ ಬೆಂಗಳೂರಿನ ಕರ್ನಾಟಕ ರಾಜ್ಯ ಕೋ ಆಪರೇಟಿವ್ ಹೌಸಿಂಗ್ ಫೆಡರೇಷನ್ ಲಿಮಿಟೆಡ್‌ನಲ್ಲಿ 4060 ಅಳತೆಯ ನಿವೇಶನಕ್ಕೆ 2012ರಲ್ಲಿ ಅರ್ಜಿ ಸಲ್ಲಿಸಿದ್ದರು. ಮುಂಗಡ ಹಣವಾಗಿ 9,02,000 ರೂ,ಗಳನ್ನು ಹೌಸಿಂಗ್ ಫೆಡರೇಷನ್‌ಗೆ ಸಂದಾಯ ಮಾಡಿದ್ದರು. ಬಳಿಕ ನಿವೇಶನ ದರ ಹೆಚ್ಚಾಗಿದ್ದರಿಂದ 3050 ಅಳತೆಯ ಸೈಟಿಗೆ ಅರ್ಜಿ ಸಲ್ಲಿಸಿದ್ದರು.
ನಿವೇಶನದ ಎಲ್ಲ ಹಣ ಕೊಟ್ಟಿದ್ದರೂ ಫೆಡರೇಷನ್ ಕಾರಣ ಹೇಳಿ ಖರೀದಿ ಪತ್ರ ಮಾಡಿಕೊಟ್ಟಿರಲಿಲ್ಲ. ಹೀಗಾಗಿ ಅಶೋಕ ಅವರು ಜಿಲ್ಲಾ ಗ್ರಾಹಕರ ಆಯೋಗಕ್ಕೆ 2023ರ ಮಾ. 6ರಂದು ದೂರು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು. ಹಿರೇಮಠ, ಖರೀದಿ ಪತ್ರ ನೋಂದಣಿ ಮಾಡಿಕೊಡಲು ವಿಫಲರಾಗಿರುವುದು ಮತ್ತು ದೂರುದಾರನಿಗೆ ಹಣ ನೀಡದಿರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗಲಿದೆ. ಹೀಗಾಗಿ ಸಂದಾಯ ಮಾಡಿದ 9,02,000 ರೂ. ಮತ್ತು ಅದರ ಮೇಲೆ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ.8ರಂತೆ ವಾರ್ಷಿಕ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳಲ್ಲಿ ನೀಡುವಂತೆ ಆದೇಶಿಸಿದೆ. ಇದಲ್ಲದೆ ದೂರುದಾರರಿಗೆ ಆದ ಅನನುಕೂಲತೆ ಮತ್ತು ಮಾನಸಿಕ ಹಿಂಸೆಗೆ 1 ರೂ. ಲಕ್ಷ ಪರಿಹಾರ ಹಾಗೂ ಪ್ರಕರಣದ ಖರ್ಚು ವೆಚ್ಚ ಎಂದು 10,000 ರೂ. ನೀಡುವಂತೆ ಕರ್ನಾಟಕ ರಾಜ್ಯ ಕೋ ಆಪ್‌ರೇಟಿವ್ ಹೌಸಿಂಗ್ ಫೆಡರೇಷನ್‌ಗೆ ಆಯೋಗ ತೀರ್ಪಿನಲ್ಲಿ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net