

ವಿಕ್ರಮ ನಾಡಿಗೇರ ಧಾರವಾಡ
ಸ್ವಚ್ಛ ನಗರ ಕನಸಿಗೆ ಮುನ್ನುಡಿ ಬರೆದಿರುವ ಹು-ಧಾ ಮಹಾನಗರ ಪಾಲಿಕೆ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವ ಜನರಿಗೆ ದಂಡ ವಿಧಿಸುವ ಪ್ರಕ್ರಿಯೆಗೆ ಮತ್ತೆ ಚಾಲನೆ ನೀಡಿದೆ. ಈ ಮೂಲಕ ನಗರ ಪ್ರದೇಶಗಳಲ್ಲಿ ತಮ್ಮಿಷ್ಟದಂತೆ ಎಲ್ಲೆಂದರಲ್ಲಿ ಕಸ ಹಾಕುವ ನಿವಾಸಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.
ನಗರ ಸುಂದರ ಹಾಗೂ ರೋಗ ಮುಕ್ತವಾಗಲಿ ಎಂಬ ಕಾರಣಕ್ಕೆ ಮಹಾನಗರ ಪಾಲಿಕೆ ಮನೆ ಮನೆಗಳಿಗೆ ತೆರಳಿ ಕಸ ಸಂಗ್ರಹಿಸುತ್ತಿದೆ. ಆದಾಗ್ಯೂ ಜನರು ಮಾತ್ರ ರಸ್ತೆ ಪಕ್ಕ ಕಸ ಹಾಕುವ ಚಾಳಿ ಬಿಟ್ಟಿಲ್ಲ. ಇದರಿಂದ ಬೇಸತ್ತ ಪಾಲಿಕೆ ಅಧಿಕಾರಿಗಳು ದಂಡ ವಿಧಿಸುವ ಕಾರ್ಯಕ್ಕೆ ಮುಂದಾಗಿದ್ದರು. ಆದರೆ ಕೆಲ ತಿಂಗಳಲ್ಲೇ ಈ ಕಾರ್ಯ ಬಂದಾಗಿದ್ದರಿಂದ ಬಡಾವಣೆ ರಸ್ತೆಗಳು ಮತ್ತೆ ಕಸದ ತೊಟ್ಟಿಗಳಾಗಿದ್ದವು. ಇದೀಗ ಮತ್ತೆ ಎಚ್ಚೆತ್ತುಕೊಂಡ ಅಧಿಕಾರಿಗಳು ಜಾಗೃತಿ ಮೂಡಿಸುವುದರ ಜತೆಗೆ ದಂಡ ವಿಧಿಸುವ ಪ್ರಕ್ರಿಯೆಗೆ ಮರು ಚಾಲನೆ ನೀಡಿದ್ದಾರೆ.
ಮನೆ ಎದುರು ಕಸದ ವಾಹನ ಬಂದರೂ ಕಸ ಹಾಕಲು ಅಸಡ್ಡೆ ತೋರುವ ಕೆಲ ಜನರು ರಾತ್ರಿ ಸಮಯದಲ್ಲಿ ರಸ್ತೆಗಳ ಪಕ್ಕ ಚೆಲ್ಲುವ ಕೆಲಸ ಮಾಡುತ್ತಿದ್ದಾರೆ. ಕಸ ಹಾಕದಂತೆ ಹೇಳಿದರೂ ಜನರು ಕ್ಯಾರೆ ಎನ್ನದ ಕಾರಣ ಬಡಾವಣೆಗಳಲ್ಲಿ ಕಸ ಹಾಕುವ ಸ್ಥಳಗಳನ್ನು ಗುರುತಿಸಿ ಅಲ್ಲಿ ಕಟ್ಟಿಗೆಗಳನ್ನು ಕಟ್ಟಿ, ರಂಗೋಲಿ ಬಿಡಿಸಿ ಹಾಗೂ ಜನರಿಗೆ ಎಚ್ಚರಿಕೆ ಸಂದೇಶ ಸಾರುವ ಫಲಕದ ಮೂಲಕ ಜಾಗೃತಿ ಮೂಡಿಸಿದ್ದಾರೆ. ಆದರೂ ಕಸ ಹಾಕುವವರಿಗೆ ತಕ್ಕ ಪಾಠ ಕಲಿಸಲು 500 ರೂ.ದಿಂದ 5000 ರೂ.ವರೆಗೆ ದಂಡ ವಿಧಿಸುತ್ತಿದ್ದಾರೆ.
ವಲಯವಾರು ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು ಹಾಗೂ ಪೌರ ಕಾರ್ಮಿಕರು ಬಡಾವಣೆಗೆ ತೆರಳಿ ಗಮನಿಸುತ್ತಾರೆ. ಕಸ ಹಾಕುವವರ ಮಾಹಿತಿ ನೀಡುತ್ತಾರೆ. ಬಳಿಕ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ದಂಡ ವಸೂಲಿ ಮಾಡುತ್ತಾರೆ.
ಪಾಲಿಕೆಯೂ ಗಮನಿಸಲಿ: ಮಹಾನಗರ ಪಾಲಿಕೆ ಮನೆಗಳಿಂದ ಕಸ ಸಂಗ್ರಹಿಸುವ ಉತ್ತಮ ಕಾರ್ಯ ಮಾಡಿದೆ. ಆದರೆ ಅದರಲ್ಲಿ ಸಾಕಷ್ಟು ಲೋಪಗಳಿದ್ದರೂ ಸರಿಪಡಿಸುವ ಕೆಲಸ ಮಾಡಿಲ್ಲ. ಕಸ ಸಂಗ್ರಹ ಮಾಡುವ ವಾಹನಗಳು ಕೆಲವೆಡೆ ಮಧ್ಯಾಹ್ನ ಆಗಮಿಸಿದರೆ, ಕೆಲವೊಮ್ಮೆ ಬರುವುದಿಲ್ಲ. ಹೀಗಾಗಿ ನಿತ್ಯ ಬೆಳಗ್ಗೆ ಬೇಗ ಕೆಲಸಕ್ಕೆ ತೆರಳುವವರು ಸಮಸ್ಯೆ ಅನುಭವಿಸುವಂತಾಗಿದೆ. ಈ ಸಮಸ್ಯೆ ತಪ್ಪಿಸಲು ಹೆಚ್ಚಿನ ಸಂಖ್ಯೆಯ ವಾಹನಗಳನ್ನು ಕಸ ಸಂಗ್ರಹಕ್ಕೆ ನೀಡಿ, ಬೆಳಗ್ಗೆ 10 ಗಂಟೆಯೊಳಗೆ ಕಸ ಸಂಗ್ರಹ ಪೂರ್ಣಗೊಳಿಸಲು ಕೆಲಸ ಮಾಡಲಿ ಎಂಬುದು ಜನರ ಅಭಿಪ್ರಾಯ.
ನಗರ ಸ್ವಚ್ಛವಾಗಿರಲಿ ಎಂಬ ಕಾರಣಕ್ಕೆ ಈ ಪ್ರಯೋಗ ಶುರುವಾಗಿದೆ. ಈ ಹಿಂದೆ ಸಹ ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿಸಿ ಇದೇ ರೀತಿಯ ಪ್ರಯೋಗ ಮಾಡಲಾಗಿತ್ತು. ಆದರೆ ಇದೀಗ ಮತ್ತೆ ರಸ್ತೆ ಬದಿಗಳಲ್ಲಿ ಕಸ ಹಾಕುತ್ತಿರುವ ಕಾರಣ ಮತ್ತೆ ಆರಂಭಿಸಲಾಗಿದೆ. ಮನೆ ಬಳಿ ಆಗಮಿಸುವ ಕಸದ ವಾಹನಗಳಿಗೆ ಜನರು ಕಸ ನೀಡಿ ಸ್ವಚ್ಛತೆಗೆ ಕೈ ಜೋಡಿಸಬೇಕು.--ವಿಷ್ಣುತೀರ್ಥ ಕೊರ್ಲಹಳ್ಳಿ, ಪಾಲಿಕೆ ಸದಸ್ಯ