ನಿಯಮ ಉಲ್ಲಂಘಿಸುವವರ ಮನೆಗೇ ದಂಡದ ನೋಟಿಸ್

16 Dwd 3
Published on

ಮಂಜುನಾಥ ಎಸ್. ಅಂಗಡಿ ಧಾರವಾಡ

ನಿಯಮ ಉಲ್ಲಂಘಿಸುವವರಿಗೆ ಸಂಚಾರ ಠಾಣೆ ಪೊಲೀಸರು ದಂಡ ವಿಧಿಸುವ ಮೂಲಕ ನಿರಂತರವಾಗಿ ಬಿಸಿ ಮುಟ್ಟಿಸುತ್ತಲೇ ಇದ್ದಾರೆ. ಆದರೂ ವಾಹನ ಸವಾರರು ಪೊಲೀಸರ ಕಣ್ತಪ್ಪಿಸಿ ನಿಯಮಾವಳಿ ಉಲ್ಲಂಘಿಸುವುದು ನಿಂತಿಲ್ಲ. ತಂತ್ರಜ್ಞಾನದ ಸಂಪೂರ್ಣ ಬಳಕೆ ಮಾಡುತ್ತಿರುವ ಪೊಲೀಸರು ಕೈಗೆ ಸಿಗದೆ ಪರಾರಿಯಾಗುವವರ ಮನೆಗೇ ದಂಡದ ನೋಟಿಸ್ ಕಳಿಸುತ್ತಿದ್ದಾರೆ!

ಸಂಚಾರ ನಿಯಮ ಪಾಲನೆಗೆ ಪೊಲೀಸರು ಹಗಲಿರುಳು ಕಾರ್ಯನಿರ್ವಹಿಸುತ್ತಿದ್ದಾರೆ. ಪೊಲೀಸರು ಇರುವ ಸ್ಥಳಗಳನ್ನು ಅರಿತ ವಾಹನ ಸವಾರರು ಬೇರೆ ಮಾರ್ಗದಲ್ಲಿ ಸಂಚರಿಸುವುದು, ಬೇಕಾಬಿಟ್ಟಿ ವಾಹನ ಚಾಲನೆ, ಎಲ್ಲೆಂದರಲ್ಲಿ ವಾಹನ ನಿಲುಗಡೆಯನ್ನು ರೂಢಿಸಿಕೊಂಡಿದ್ದಾರೆ. ಇದರಿಂದಾಗಿ ಇದ್ದಷ್ಟು ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಿ ಕಾರ್ಯನಿರ್ವಹಿಸಬೇಕಾಗಿದೆ. ಜತೆಗೆ ಹೈಟೆಕ್ ತಂತ್ರಜ್ಞಾನದ ಮೊರೆ ಹೋಗಿದ್ದು, ದಿನದ 24 ಗಂಟೆ ಕಾರ್ಯನಿರ್ವಹಿಸುವ ಆಧುನಿಕ ಕ್ಯಾಮರಾಗಳನ್ನು ಅಳವಡಿಸಿದ್ದಾರೆ.

ಐಟಿಎಂಎಸ್ ಅಳವಡಿಕೆ:

ನಗರದ ಪ್ರಮುಖ ವೃತ್ತಗಳು, ಸಿಗ್ನಲ್‌ಗಳು, ಜನನಿಬಿಡ ಮತ್ತು ವಾಹನ ದಟ್ಟಣೆ ಪ್ರದೇಶಗಳು ಮತ್ತು ಮಾರುಕಟ್ಟೆ ಪ್ರದೇಶಗಳಲ್ಲಿ ಆಧುನಿಕ ತಂತ್ರಜ್ಞಾನವುಳ್ಳ ಕ್ಯಾಮರಾಗಳನ್ನು ಅಳವಡಿಸಲಾಗಿದೆ. 43 ಇಂಟೆಲಿಜೆAಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂ ಕ್ಯಾಮರಾ (ಐಟಿಎಂಎಸ್) ಮತ್ತು 11 ಪ್ಯಾನ್ ಟಿಲ್ಟ್ ಝೂನ್ (ಪಿಟಿಝಡ್) ಕ್ಯಾಮರಾಗಳು ನಿರಂತರ ಕಾರ್ಯನಿರ್ವಹಿಸುತ್ತಿವೆ. ಇವು ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ, ಸಂಚಾರ ಉಲ್ಲಂಘನೆ ಪತ್ತೆ, ವಾಹನಗಳ ಎಣಿಕೆ ಮತ್ತು ವರ್ಗೀಕರಣ, ರಸ್ತೆಯಲ್ಲಿ ಅಪಘಾತಗಳು- ದಟ್ಟಣೆ ಅಥವಾ ತಕ್ಷಣದ ಗಮನ ಅಗತ್ಯವಿರುವ ಇತರ ಘಟನೆಗಳನ್ನು ಗುರುತಿಸುತ್ತವೆ. ಅಲ್ಲದೆ, ಸಂಚಾರ ಮೇಲ್ವಿಚಾರಣೆ ಮತ್ತು ನಿರ್ವಹಣೆಗಾಗಿ ನೈಜ ಸಮಯದ ವೀಡಿಯೊ ಫೀಡ್‌ಗಳನ್ನು ಒದಗಿಸುತ್ತವೆ.

ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್:

ಸಂಚಾರ ಠಾಣೆಯಲ್ಲಿ ಸಂಚಾರ ನಿರ್ವಹಣಾ ಕೇಂದ್ರ ಇದ್ದು, ಇಲ್ಲಿನ ಸಿಬ್ಬಂದಿ ಟ್ರಾಫಿಕ್ ನಿರ್ವಹಣೆಯ ಮೇಲೆ ಕಣ್ಗಾವಲಿಟ್ಟಿರುತ್ತಾರೆ. ಐಟಿಎಂಎಸ್ ಕ್ಯಾಮರಾಗಳಿಂದ ನಿರಂತರವಾಗಿ ದಾಖಲಾಗುವ ಫೋಟೊ ಮತ್ತು ದೃಶ್ಯಾವಳಿ ಆಧಾರದ ಮೇಲೆ ನಿಯಮಾವಳಿ ಉಲ್ಲಂಘಿಸುವ ವಾಹನಗಳಿಗೆ ದಂಡ ನೋಟಿಸ್ ಸೃಷ್ಟಿಸುತ್ತಾರೆ. ವಾಹನಗಳ ನೋಂದಣಿ ಸಂಖ್ಯೆಯ ದಾಖಲೆಗಳ ಮೂಲಕ ವಿಳಾಸ ಪತ್ತೆ ಹಚ್ಚಿ ಮಾಲೀಕರ ಮನೆಗೆ ನೋಟಿಸ್ ಕಳುಹಿಸಲಾಗುತ್ತದೆ. ಸಂಚಾರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ ಮೇಟಿ ಹಾಗೂ ಇತರ ಅಽಕಾರಿಗಳು ಕೇಂದ್ರದ ಮೇಲುಸ್ತುವಾರಿ ನೋಡುತ್ತಿರುತ್ತಾರೆ.

ಯಾವುದಕ್ಕೆ ದಂಡ...?

ಸ0ಚಾರ ನಿಯಮಾವಳಿ ಉಲ್ಲಂಘಿಸುವವರಿಗೆ ಐಟಿಎಂಎಸ್ ಕ್ಯಾಮರಾಗಳು ಸಿಂಹಸ್ವಪ್ನವಾಗಿವೆ. ದ್ವಿಚಕ್ರ ವಾಹನಗಳ ಮೇಲೆ ಮೂವರ ಸವಾರಿ, ಹೆಲ್ಮೆಟ್ ಇಲ್ಲದೆ ಚಾಲನೆ, ಅಪ್ರಾಪ್ತರಿಂದ ವಾಹನ ಚಾಲನೆ, ದೋಷಪೂರಿತ ನಂಬರ್ ಪ್ಲೇಟ್, ವಾಹನ ಚಲಾವಣೆ ವೇಳೆ ಮೊಬೈಲ್ ಬಳಕೆ, ನೋ ಪಾರ್ಕಿಂಗ್, ಸಿಗ್ನಲ್ ಜಂಪ್ ಮಾಡುವವರು ವಿವರ ದಾಖಲಾಗುತ್ತವೆ. ಅಲ್ಲದೆ, ಪಿಟಿಝಡ್ ಕ್ಯಾಮರಾಗಳನ್ನು ಸಂಚಾರ ನಿರ್ವಹಣಾ ಕೇಂದ್ರದಲ್ಲೇ ನಿರ್ವಹಿಸಿ ಚಲಿಸುವ ಕಾರ್‌ಗಳ ಚಲನವಲನಗಳನ್ನೂ ಗಮನಿಸಬಹುದು. ಸವಾರರು ನಿಯಮಾವಳಿ ಉಲ್ಲಂಘಿಸಿದ ಸ್ಥಳ, ದಿನಾಂಕ, ವೇಳೆ, ಫೋಟೊ ಸಮೇತ ದಂಡದ ನೋಟಿಸ್ ತಯಾರಿಸಲಾಗುತ್ತದೆ.

ದಂಡ ಪಾವತಿ ಕಡ್ಡಾಯ:

ಪೊಲೀಸರು ಹಿಡಿದಾಗ ಅವರೊಂದಿಗೆ ವಾಗ್ವಾದ ಮಾಡಿ ಅಥವಾ ಅವರಿವರ ಪರಿಚಯ ಹೇಳಿ ದಂಡದಿ0ದ ತಪ್ಪಿಸಿಕೊಳ್ಳುವುದು ಸವಾರರಿಗೆ ರೂಢಿಯಾಗಿದೆ. ಆದರೆ, ತಂತ್ರಜ್ಞಾನ ಆಧಾರಿತ ದಂಡದ ನೋಟಿಸ್ ಒಮ್ಮೆ ಜಾರಿಯಾದರೆ ದಂಡ ಪಾವತಿಸಲೇಬೇಕು. ಸವಾರರು ಆ್ಯಪ್ ಬಳಸಿ ತಮ್ಮ ವಾಹನಗಳ ಮೇಲೆ ದಾಖಲಾಗಿರುವ ದಂಡದ ವಿವರವನ್ನು ಆಗಾಗ ನೋಡಿಕೊಳ್ಳಬೇಕು. ವಿವಿಧೆಡೆ ಕಾರ್ಯನಿರ್ವಹಿಸುವ ಅಽಕಾರಿಗಳ ಬಳಿ ಅಥವಾ ಠಾಣೆಗೆ ಬಂದು ದಂಡ ಪಾವತಿಸಬೇಕು. ಇಲ್ಲದಿದ್ದರೆ ವಾಹನ ಮಾರಾಟ, ಹೆಸರು ಬದಲಾವಣೆ ಮಾಡಲಾಗದು ಎನ್ನುತ್ತಾರೆ ಇನ್‌ಸ್ಪೆಕ್ಟರ್ ಶ್ರೀನಿವಾಸ ಮೇಟಿ.

ಸಂಚಾರ ನಿಯಮ ಉಲ್ಲಂಘಿಸುವವರು ಪೊಲೀಸರ ಕಣ್ತಪ್ಪಿಸಿದರೂ ಕ್ಯಾಮರಾಗಳಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಅವಳಿನಗರದ ಪ್ರಮುಖ ಸ್ಥಳಗಳಲ್ಲಿ ಆಧುನಿಕ ತಂತ್ರಜ್ಞಾನದ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ವಾಹನ ಸವಾರರ ಮನೆಗೆ ವಿವರ ಸಮೇತ ನೋಟಿಸ್ ಬರುತ್ತವೆ.

- ರವೀಶ ಸಿ.ಆರ್., ಡಿಸಿಪಿ ಕ್ರೈ೦ ಆ್ಯಂಡ್ ಟ್ರಾಫಿಕ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net