ನಿಯಮ ಉಲ್ಲಂಘಿಸಿ ಹೆದ್ದಾರಿಗಿಳಿದ ದ್ವಿಚಕ್ರ ವಾಹನಗಳು: 20 ಸಾವಿರ ರೂಗಳ ದಂಡ ವಸೂಲಿ

1
Published on
ಮಂಡ್ಯ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಕಡಿಮೆ ಮಾಡುವ ನಿಟ್ಟಿನಲ್ಲಿ ದ್ವಿಚಕ್ರ ಸೇರಿದಂತೆ ಹಲವು ಮಾದರಿ ವಾಹನ ನಿಷೇಧ ನಿಯಮಕ್ಕೆ ಮೊದಲ ದಿನವಾದ ಮಂಗಳವಾರ ಸಕಾರಾತ್ಮಕ ಸ್ಪಂದನೆ ಸಿಕ್ಕಿತು. ಆದರೂ ಕೆಲವರು ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪೊಲೀಸರು ದಂಡ ಪ್ರಯೋಗ ನಡೆಸಿದರು.
ಪೊಲೀಸರು ಹೆದ್ದಾರಿಯ ಆಗಮನ, ನಿರ್ಗಮನ ಪ್ರದೇಶಗಳಲ್ಲಿ ನಿಂತು ನಿಷೇಧಿತ ವಾಹನಗಳ ಸಂಚಾರಕ್ಕೆ ತಡೆಯೊಡ್ಡಿದರು. ಅಂತೆಯೇ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಗಳು, ಆಟೋಗಳು, ಮಲ್ಟಿ ಆಕ್ಸಲ್ ಹೈಡ್ರಾಲಿಕ್ ಟ್ರೇಲರ್ ವಾಹನಗಳು, ಮೋಟಾರು ರಹಿತ ವಾಹನಗಳು(ಎತ್ತಿನಗಾಡಿ ಮತ್ತು ಇತರೆ) ಹಾಗೂ ಕ್ವಾಡ್ರಿಸೈಕಲ್‌ಗಳ ಸಂಚಾರವನ್ನು ನಿಷೇಧಿಸಿರುವ ಬಗ್ಗೆ ಮಾಹಿತಿ ನೀಡಿದರು.
ಮದ್ದೂರು ತಾಲೂಕು ನಿಡಘಟ್ಟದಿಂದ ಶ್ರೀರಂಗಪಟ್ಟಣ ತಾಲೂಕಿನ ಗಡಿವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿ ತಲಾ ೭ ಆಗಮನ ಮತ್ತು ನಿರ್ಗಮನ ದ್ವಾರಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಹೆದ್ದಾರಿಯಲ್ಲಿ ಬರುತ್ತಿದ್ದ ಆಟೋ, ಬೈಕ್‌ಗಳನ್ನು ತಡೆದು ಸವಾರರಿಗೆ ಮೊದಲ ದಿನದಂದೇ ಸುಮಾರು 20 ಸಾವಿರ ರೂನಷ್ಟು ವಿಧಿಸಲಾಯಿತು.
ವಾಹನಗಳ ಚಲನವಲನಗಳ ಮೇಲೆ ನಿಗಾ ಇಡಲು ಹೈವೇ ಪೆಟ್ರೋಲಿಂಗ್ ವಾಹನಗಳು ಒಂದು ಪಾಯಿಂಟ್‌ ನಿಂದ ಇನ್ನೊಂದು ಪಾಯಿಂಟ್‌ಗೆ ನಿರಂತರವಾಗಿ ಚಲಿಸುತ್ತಿದ್ದರು. ವಿವಿಧ ಹಂತಗಳಲ್ಲಿ ೨-೩ ಪೇದೆಗಳನ್ನು ನಿಯೋಜಿಸಲಾಗಿತ್ತು. ಶ್ರೀರಂಗಪಟ್ಟಣದ ಗಣಂಗೂರು ಟೋಲ್ ಪ್ಲಾಜಾದಲ್ಲಿ ಸರ್ವಿಸ್ ರಸ್ತೆಗೆ ತೆರಳಲು ದ್ವಿಚಕ್ರ ವಾಹನ, ಆಟೋ ರಿಕ್ಷಾಗಳನ್ನು ವಾಪಸ್ ಕಳುಹಿಸುತ್ತಿರುವುದು ಕಂಡುಬಂತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net