

ಧಾರವಾಡ: ಹಜ್ ಧಾರ್ಮಿಕ ಯಾತ್ರೆಗೆ ಹಣ ಪಾವತಿಸಿದ್ದ ಪ್ರಯಾಣಿಕರಿಗೆ ಯಾತ್ರೆಗೆ ತೆರಳು ಅವಕಾಶ ಕಲ್ಪಿಸದ ಹುಬ್ಬಳ್ಳಿಯ ಅಲ್- ಹುದೆಬಿಯಾ ಇಂಟರ್‌ನ್ಯಾಶನಲ್ ಟೂರ್ಸ್ ಟ್ರಾವೆಲ್ಸ್ ಸಂಸ್ಥೆಗೆ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.
ಇಲ್ಲಿನ ನವಲೂರಿನ ಹಜರತಸಾಬ್, ಾತಿಮಾ, ಬಿಬಿಶಾ ಕುಸುಗಲ್ ಮತ್ತು ಸಮೀರ ಬಾನಿ ಎಂಬುವರು ಹಜ್ ಧಾರ್ಮಿಕ ಯಾತ್ರೆಗೆ ತೆರಳಲು ಹುಬ್ಬಳ್ಳಿಯ ಅಲ್- ಹುದೆಬಿಯಾ ಇಂಟರ್‌ನ್ಯಾಶನಲ್ ಟೂರ್ಸ್ ಟ್ರಾವೆಲ್ಸ್ ಸಂಸ್ಥೆಗೆ 3.16 ಲಕ್ಷ ರೂ. ಹಣ ಪಾವತಿಸಿ ಪ್ರಯಾಣ ನಿಗದಿಪಡಿಸಿದ್ದರು. 2022ರ ಅಕ್ಟೋಬರ್ 3ನೇ ವಾರದಲ್ಲಿ ಯಾತ್ರೆಗೆ ತೆರಳಲು ಸೌಲಭ್ಯ ಕಲ್ಪಿಸಬೇಕಾಗಿತ್ತು. ಆದರೆ, ಈವರೆಗೂ ಸೌಲಭ್ಯ ಒದಗಿಸಿರಲಿಲ್ಲ. ಈ ಸೇವಾ ನ್ಯೂನತೆ ಪ್ರಶ್ನಿಸಿ ಹಜರತಸಾಬ್ ಕುಟುಂಬ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು.
ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಅವರು, ಟೂರ್ಸ್ ಸಂಸ್ಥೆಯಿಂದ ಸೇವಾ ನ್ಯೂನತೆ ಆಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ದೂರುದಾರರು ಸಂದಾಯ ಮಾಡಿದ 3.16 ಲಕ್ಷ ರೂ. ಹಾಗೂ ಶೇ. 8ರಂತೆ ವಾರ್ಷಿಕ ಬಡ್ಡಿ ಪಾವತಿಸಬೇಕು. ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ 50,000 ರೂ. ಪರಿಹಾರ ಹಾಗೂ ಪ್ರಕರಣದ ವೆಚ್ಚ 10,000 ರೂ. ಪಾವತಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ.