

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಳಪೆ ಫ್ಲೈವುಡ್ ಮಾರಾಟ ಮಾಡಿದ ಮಳಿಗೆ ಅವರಿಗೆ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ಆಯೋಗ ಶನಿವಾರ ಆದೇಶ ಹೊರಡಿಸಿದೆ.
ಮೂಧೋಳ ತಾಲೂಕಿನ ವೀರಣ್ಣ ರಾಮತೀರ್ಥ ಎಂಬುವವರು ಹುಬ್ಬಳ್ಳಿ ಗೋಕುಲ ರಸ್ತೆಯ ಆರ್.ಬಿ. ಗ್ಲಾಸ್ ಫ್ಲೈವುಡ್ ಅಂಗಡಿಯಲ್ಲಿ 2022ರ ಫೆ. 15ರಂದು 32808 ರೂ. ಮೌಲ್ಯದ ವಿವಿಧ ಬಗೆಯ ಫ್ಲೈವುಡ್‌ಗಳನ್ನು ಖರೀದಿಸಿದ್ದರು. ಮನೆಯ ಉಪಕರಣಗಳಿಗೆ ತಮಗೆ ಬೇಕಾದ ರೀತಿ ಅಳವಡಿಸಿದ್ದರು. ಆದರೆ ಕೆಲ ಸಮಯದಲ್ಲೇ ಎಲ್ಲ ಫ್ಲೈವುಡ್‌ಗಳಿಗೆ ಗೆದ್ದಲು ಹತ್ತಿದೆ. ಹೀಗಾಗಿ ಫ್ಲೈವುಡ್ ಬದಲಾಯಿಸಲು ಅಥವಾ ಹಣ ಮರಳಿಸಲು ಹಲವು ಬಾರಿ ಕೇಳಿಕೊಂಡಿದ್ದರು. ಆದರೆ ಅಂಗಡಿ ಮಾಲೀಕ ಸತಾಯಿಸಿದ ಕಾರಣ ಜಿಲ್ಲಾ ಗ್ರಾಹಕರ ಆಯೋಗದಲ್ಲಿ 2023ರ ಮಾ. 29ರಂದು ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶ್ವಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ಸಾಕಷ್ಟು ಹಣ ಖರ್ಚು ಮಾಡಿ ವಿಶ್ವಾಸದ ಮೇಲೆ ಫ್ಲೈವುಡ್ ಖರೀದಿಸಿದ್ದಾರೆ. ಇದಲ್ಲದೆ ಇತರ ಸಲಕರಣೆ, ಕಾರ್ಪೇಂಟರ್‌ಗೆ ಹಣ ವ್ಯಯಿಸಿದ್ದಾರೆ. ಆದರೆ ಕಳಪೆ ಫ್ಲೈವುಡ್ ನೀಡಿ ಮೋಸ ಮಾಡಿದ್ದು ಮೇಲ್ನೋಟಕ್ಕೆ ಕಾಣುತ್ತದೆ. ಹೀಗಾಗಿ ದೂರುದಾರರಿಗೆ ಆದ ಅನಾನುಕೂಲ ಮತ್ತು ಮಾನಸಿಕ ಹಿಂಸೆಗೆ ಪರಿಹಾರ, ಪ್ರಕರಣದ ಖರ್ಚು ವೆಚ್ಚ ಹಾಗೂ ಪ್ಲೈವುಡ್ ಖರೀದಿ ಹಣ, ಇತರೆ ವೆಚ್ಚ ಸೇರಿ 1,80,000 ರೂ.ಗಳನ್ನು ತೀರ್ಪು ನೀಡಿದ ಒಂದು ತಿಂಗಳಲ್ಲಿ ನೀಡುವಂತೆ ಮಳಿಗೆ ಮಾಲೀಕರಿಗೆ ಆಯೋಗ ಸೂಚಿಸಿದೆ.