

ವಿಜಯವಾಣಿ ಸುದ್ದಿಜಾಲ ಧಾರವಾಡ
ಹಣ ನೀಡಿದ್ದರೂ ಬಟ್ಟೆಗಳನ್ನು ಸರಬರಾಜು ಮಾಡುವಲ್ಲಿ ವಿಳಂಬ ನೀತಿ ಅನುಸರಿಸಿದ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿ ಮಂಗಳವಾರ ಆದೇಶ ಹೊರಡಿಸಿದೆ.
ಜಿಲ್ಲೆಯ ಕಲಘಟಗಿಯ ಅಕ್ಕಿ ಓಣಿಯ ಅರುಣ ಕುಂಬಾರ ಎಂಬುವವರು 2022ರ ಸೆ. 28ರಂದು ಮಲೀಕ್ ಇಸ್ಮಾಯಿಲ್ ಎನ್ನುವವರ ಮಧ್ಯಸ್ಥಿಕೆಯಲ್ಲಿ ಹುಬ್ಬಳ್ಳಿಯ ಸ್ಯಾಮ್ ಔಟ್‌ಫಿಟ್ ಪ್ಯಾಶನ್ ಪ್ರೈ. ಲಿ.ನಲ್ಲಿ 38,640 ರೂ. ಮೌಲ್ಯದ ಬಟ್ಟೆಗಳ ಬಾಕ್ಸ್ ಖರೀದಿಸಿದ್ದರು. ಆದರೆ ಕಂಪನಿಯು ಒಪ್ಪಂದದಂತೆ ಬಟ್ಟೆಗಳ ಬಾಕ್ಸ್ ಸರಬರಾಜು ಮಾಡಿರಲಿಲ್ಲ. ಹೀಗಾಗಿ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ 2023ರ ಜೂ. 28ರಂದು ದೂರು ಸಲ್ಲಿಸಿದ್ದರು.
ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ಬಟ್ಟೆಗಳ ಬಾಕ್ಸ್ ಸರಬರಾಜು ಮಾಡದೆ ಮೋಸ ಮಾಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ. ಹೀಗಾಗಿ ತೀರ್ಪು ನೀಡಿದ ಒಂದು ತಿಂಗಳಲ್ಲಿ ದೂರುದಾರ ಸಂದಾಯ ಮಾಡಿದ 38,640 ರೂ.ಗಳನ್ನು 28-09-2022 ರಿಂದ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ಪೂರ್ತಿ ಹಣ ಸಂದಾಯ ಮಾಡಬೇಕು. ದೂರುದಾರಿಗೆ ಆಗಿರುವ ಅನನುಕೂಲ ಮತ್ತು ಮಾನಸಿಕ ತೊಂದರೆಗೆ 10,000 ರೂ. ಪರಿಹಾರ ಹಾಗೂ 5000 ರೂ. ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗವು ತೀರ್ಪಿನಲ್ಲಿ ತಿಳಿಸಿದೆ.