ಭವಿಷ್ಯ ನಿಧಿ ಸಂಸ್ಥೆಗೆ ದಂಡ

web 3
Published on

ಧಾರವಾಡ: ನಿವೃತ್ತರಿಗೆ ಪಿಂಚಣಿ ನಿಗದಿಯಲ್ಲಿ ಸೇವಾ ನ್ಯೂನತೆ ಎಸಗಿದ ಹುಬ್ಬಳ್ಳಿಯ ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆಗೆ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ಆಯೋಗ ಆದೇಶ ಹೊರಡಿಸಿದೆ.
ಈ ಕುರಿತು 6 ಜನ ನಿವೃತ್ತರು ದಾಖಲಿಸಿದ್ದ ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪಿ.ಸಿ. ಹಿರೇಮಠ ಅವರು, ಪಿಂಚಣಿ ವ್ಯಾಜ್ಯವನ್ನು ಭವಿಷ್ಯನಿಧಿಯಿಂದ ಪ್ರತಿ ತಿಂಗಳು ನಡೆಸುವ ಪಿಂಚಣಿ ಲೋಕ ಅದಾಲತ್‌ನಲ್ಲಿ ದೂರುದಾರ ಭಾಗವಹಿಸಿ ಪರಿಹಾರ ಕಂಡುಕೊಳ್ಳದೆ ಅನಗತ್ಯವಾಗಿ ಗ್ರಾಹಕರ ಆಯೋಗಕ್ಕೆ ದೂರುಗಳನ್ನು ಸಲ್ಲಿಸಿದ್ದಾರೆ. ಅವುಗಳನ್ನು ವಜಾಗೊಳಿಸಬೇಕು ಎಂದು ಭವಿಷ್ಯನಿಧಿ ಸಂಸ್ಥೆಯವರು ಆಕ್ಷೇಪಿಸಿದ್ದರು. ಆದರೆ, ದೂರುದಾರರ ಪಿಂಚಣಿ ನಿಗದಿಪಡಿಸುವಾಗ ಸರಿಯಾಗಿ ಲೆಕ್ಕ ಹಾಕದೆ ತಪ್ಪೆಸಗಿರುವುದು ಮೇಲ್ನೋಟಕ್ಕೆ  ಕಂಡುಬಂದಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ. 6 ಜನ ದೂರುದಾರರಿಗೆ 6,42,068 ರೂ. ಬಾಕಿ ಹಣ ಮತ್ತು ಅದರ ಮೇಲೆ ಶೇ. 10ರಂತೆ ಬಡ್ಡಿ ಲೆಕ್ಕ ಹಾಕಿ ನೀಡಬೇಕು ಎಂದು ಆದೇಶಿಸಿದೆ. ಜೊತೆಗೆ ಎಲ್ಲ ದೂರುದಾರರಿಗೆ ಮಾನಸಿಕ ತೊಂದರೆಗಾಗಿ ತಲಾ 20,000  ರೂ. ಪರಿಹಾರ ಹಾಗೂ ತಲಾ 10,000 ರೂ. ಪ್ರಕರಣದ ವೆಚ್ಚ ಭರಿಸಬೇಕು ಎಂದು ಆಯೋಗ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net