ವಿಮೆ ತಿರಸ್ಕರಿಸಿದ ಅಂಚೆ ಇಲಾಖೆಗೆ ದಂಡ

web 66
Published on

ಧಾರವಾಡ: ವಿಮೆ ತಿರಸ್ಕರಿಸಿದ ಅಂಚೆ ಇಲಾಖೆಗೆ 3.03 ಲಕ್ಷ ರೂ. ದಂಡ ವಿಧಿಸಿ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.


ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ನಾಗಪ್ಪ ಶಿವಪ್ಪ ಕುರಹಟ್ಟಿ ಇವರು ಮೆಣಸಿನಕಾಯಿ ವ್ಯಾಪಾರಸ್ಥರಾಗಿದ್ದರು. ಆಗಾಗ ವ್ಯಾಪಾರಕ್ಕಾಗಿ ಶಿವಮೊಗ್ಗ ಜಿಲ್ಲೆಯ ಸೊರಬಕ್ಕೆ ಹೋಗಿ ಬರುತ್ತಿದ್ದರು. 2019ರ ಮಾ. 28ರಂದು ಸೊರಬ ಅಂಚೆ ಕಚೇರಿಯಲ್ಲಿ 7,291 ರೂ. ಪ್ರೀಮಿಯಮ್ ಪಾವತಿಸಿ ಗ್ರಾಮೀಣ ಅಂಚೆ ಜೀವ ವಿಮೆ ಮಾಡಿಸಿದ್ದರು. ವಿಮೆದಾರ ನಾಗಪ್ಪ ಕುರಹಟ್ಟಿ 2019ರ ಅ. 31ರಂದು ತೀವ್ರ ಹೃದಯಾಘಾತದಿಂದ ಹಿರೆಹರಕುಣಿಯ ತಮ್ಮ ಮನೆಯಲ್ಲಿ ನಿಧನ ಹೊಂದಿದ್ದರು.
ವಿಮೆ ಪಾಲಸಿಗೆ ಪಾಲಸಿದಾರರ ಸಹೋದರನ ಪುತ್ರಿ ಅರ್ಚನಾ ನಾಮಿನಿ ಆಗಿದ್ದಳು. ವಿಮೆದಾರ ನಾಗಪ್ಪನ ಮರಣಾನಂತರ ಅರ್ಚನಾ ಹುಬ್ಬಳ್ಳಿಯ ಅಂಚೆ ಕಚೇರಿಗೆ ವಿಮೆ ಪರಿಹಾರ 2.50 ಲಕ್ಷ ರೂ. ಕೊಡುವಂತೆ ದಾಖಲೆಗಳ ಸಮೇತ ಕ್ಲೇಮ್ ಅರ್ಜಿ ಸಲ್ಲಿಸಿದ್ದರು. ವಿಮೆ ಮಾಡಿಸುವ ಮೊದಲು ಮೃತ ನಾಗಪ್ಪ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದರೂ ವಿಮೆ ಪಡೆಯುವಾಗ ಅಂಚೆ ಇಲಾಖೆಗೆ ಮಾಹಿತಿ ನೀಡಿರಲಿಲ್ಲ ಎಂಬ ಕಾರಣವೊಡ್ಡಿ ಇಲಾಖೆ ಕ್ಲೇಮ್ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಚನಾ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಅವರು, ಮೃತ ನಾಗಪ್ಪ ಕುರಹಟ್ಟಿರವರ ಜೀವ ವಿಮೆ ಪಾಲಸಿ ಚಾಲ್ತಿಯಲ್ಲಿತ್ತು. ಅಂಚೆ ಕಚೇರಿಯವರು ತಮ್ಮ ವಿಮಾ ನಿಯಮಾವಳಿಯಂತೆ ವಿಮಾ ಹಣವನ್ನು ದೂರುದಾರರಿಗೆ ಕೊಡುವುದು ಕರ್ತವ್ಯ. ಆದ್ದರಿಂದ ಇಲಾಖೆ ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನತೆ ಎಸಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ದೂರುದಾರಳಿಗೆ ತಿಂಗಳೊಳಗೆ 2.50 ಲಕ್ಷ ರೂ. ವಿಮಾ ಹಣವನ್ನು ಶೇ. 8ರಂತೆ ಬಡ್ಡಿ ಲೆಕ್ಕ ಹಾಕಿ ಸಂದಾಯ ಮಾಡಬೇಕು. ಮಾನಸಿಕ ತೊಂದರೆ ಹಾಗೂ ಅನಾನುಕೂಲಕ್ಕಾಗಿ 50 ಸಾವಿರ ರೂ. ಪರಿಹಾರ ಮತ್ತು ಪ್ರಕರಣದ ಖರ್ಚು 3 ಸಾವಿರ ರೂ. ಪಾವತಿಸಬೇಕು ಎಂದು ಆಯೋಗ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net